ಚಿತ್ರದುರ್ಗ: ‘ತಾಲ್ಲೂಕಿನಲ್ಲಿರುವ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ರಿಪೇರಿ ಮಾಡಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ. ಘಟಕಗಳಿಗೆ ಕಳಪೆ ಗುಣಮಟ್ಟದ ಯಂತ್ರೋಪಕರಣ ಅಳವಡಿಸುತ್ತಿರುವ ಕಾರಣ ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಶಾಸಕ ಕೆ.ಸಿ.ವೀರೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಪಂಚಾಯಿತಿ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ಖಾಸಗಿ ಸಂಘ ಸಂಸ್ಥೆಗಳು ನಿರ್ವಹಣೆ ಮಾಡುತ್ತಿರುವ ಶುದ್ಧ ನೀರಿನ ಘಟಕಗಳಲ್ಲಿ ಯಾವುದೇ ತೊಂದರೆ ಬಂದಿಲ್ಲ. ತೊಂದರೆ ಬಂದರೂ ಅವುಗಳಿಗೆ ಗುಣಮಟ್ಟದ ಯಂತ್ರೋಪಕರಣ ಅಳವಡಿಸುತ್ತಿರುವ ಕಾರಣ ಅವು ಸರಿಯಾಗಿ ಕೆಲಸ ಮಾಡುತ್ತಿವೆ. ತಾಲ್ಲೂಕಿನಲ್ಲಿ ಅಧಿಕಾರಿಗಳು ಏಜೆನ್ಸಿಗಳ ಮೇಲ್ವಿಚಾರಣೆ ನಡೆಸುವಲ್ಲಿ ವಿಫಲರಾಗುತ್ತಿದ್ದಾರೆ. ಹೀಗಾಗಿ ಘಟಕಗಳು ಯಾವಾಗಲೂ ಹಾಳಾದ ಸ್ಥಿತಿಯಲ್ಲೇ ಇರುತ್ತವೆ’ ಎಂದು ಆರೋಪಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಎಂಜಿನಿಯರ್ ಶಿವಮೂರ್ತಿ ಮಾತನಾಡಿ ‘ತಾಲ್ಲೂಕಿನಲ್ಲಿ 106 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. 65ರಿಂದ 70 ಘಟಕಗಳನ್ನು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರ ಮಾಡಲಾಗುವುದು. ಏಜೆನ್ಸಿಯವರು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಸಮಸ್ಯೆಯಾಗಿದೆ’ ಎಂದು ಉತ್ತರ ನೀಡಿದರು.
ಶಾಸಕರು ಪ್ರತಿಕ್ರಿಯಿಸಿ ‘ಕಳೆದ ಸಭೆಯಲ್ಲೂ 25 ಘಟಕಗಳ ರಿಪೇರಿ ಇದೆ ಎಂದು ಮಾಹಿತಿ ನೀಡಿದ್ದಿರಿ, ಈಗಲೂ ಅದೇ ಮಾಹಿತಿ ಕೊಡುತ್ತಿದ್ದೀರಿ. ಘಟಕಗಳೂ ಏಕೆ ರಿಪೇರಿಯಾಗುತ್ತಿಲ್ಲ? ನೀವು ಏಜೆನ್ಸಿಯವರಿಂದ ಕೆಲಸ ಮಾಡಿಸಬೇಕು. ಗುಣಮಟ್ಟದ ಉಪಕರಣಗಳನ್ನು ಅಳವಡಿಸುವಂತೆ ನೋಡಿಕೊಳ್ಳಬೇಕು. ಏಜೆನ್ಸಿಯವರನ್ನು ಕಪ್ಪು ಪಟ್ಟಿಗೆ ಸೇರಿಸಿದರೆ ಮತ್ತೊಂದು ಏಜೆನ್ಸಿ ತೆರೆದು ಮತ್ತೆ ಬರುತ್ತಾರೆ. ಹೀಗಾಗಿ ಅವರಿಂದಲೇ ಕೆಲಸ ಮಾಡಿಸಬೇಕು’ ಎಂದು ಸೂಚಿಸಿದರು.
‘ಶುದ್ಧ ನೀರಿನ ಘಟಕಗಳಿಗೆ 10 ವರ್ಷವಾದ ನಂತರ ಅದನ್ನು ತೆಗೆದು ಹೊಸ ಘಟಕ ಅಳವಡಿಸಬೇಕು. ತಾಲ್ಲೂಕಿನಾದ್ಯಂತ 10 ವರ್ಷಗಳಾಗಿರುವ ಘಟಕಗಳ ಪಟ್ಟಿ ನೀಡಿ’ ಎಂದು ಸೂಚಿಸಿದರು.
ರೈತರ ಪಂಪ್‌ಸೆಟ್‌ಗಳಿಗೆ 7 ಗಂಟೆ ತ್ರಿ–ಫೇಸ್ ವಿದ್ಯುತ್ ಸರಬರಾಜು ಮಾಡಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಆದರೆ ಬೆಸ್ಕಾಂ ಅಧಿಕಾರಿಗಳು 3–4 ಗಂಟೆಯೂ ವಿದ್ಯುತ್ ನೀಡುತ್ತಿಲ್ಲ. ಕರೆ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಕೆಡಿಪಿ ಸದಸ್ಯರು ಆರೋಪಿಸಿದರು.
ಇದಕ್ಕೆ ಉತ್ತರ ನೀಡಿದ ಬೆಸ್ಕಾಂ ಗ್ರಾಮಾಂತರ ಉಪ ವಿಭಾಗದ ಸಹಾಯಕ ಎಂಜಿನಿಯರ್ ‘ರೈತರು ಒಂದು ವಿದ್ಯುತ್ ಸಂಪರ್ಕದಿಂದ 4–5 ಕೊಳವೆಬಾವಿಗಳನ್ನು ಓಡಿಸುತ್ತಾರೆ. ಒತ್ತಡ ಜಾಸ್ತಿಯಾಗಿ ಟ್ರಿಪ್ ಆಗುತ್ತಿದೆ’ ಎಂದರು.
ಶಾಸಕ ಕೆ.ಸಿ.ವೀರೇಂದ್ರ ಮಧ್ಯ ಪ್ರವೇಶಿಸಿ ‘ಭೀಮಸಮುದ್ರ, ಜಾಲಿಕಟ್ಟೆ ಸೇರಿ ತಾಲ್ಲೂಕಿನಲ್ಲಿ 5 ಕಡೆ ಪವರ್ ಸ್ಟೇಷನ್ ತೆರೆಯುವ ಕೆಲಸ ಪ್ರಗತಿಯಲ್ಲಿದೆ. ಕಾಮಗಾರಿ ಪೂರ್ಣಗೊಂಡರೆ ವಿದ್ಯುತ್ ಕೊರತೆಯ ಸಮಸ್ಯೆ ನೀಗಲಿದೆ’ ಎಂದು ಹೇಳಿದರು.
‘ತಾಲ್ಲೂಕಿ ವಿವಿಧೆಡೆ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ನೀಡಲು ಪ್ರತಿ ಕಾರ್ಡ್‌ಗೆ ₹ 30– ₹ 50ರವರೆಗೆ ಲಂಚ ಪಡೆಯುತ್ತಾರೆ. ಈ ಬಗ್ಗೆ ದೂರು ಕೊಟ್ಟರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಕೆಡಿಪಿ ಆರೋಪಿಸಿದರು. ಶಾಸಕರು ಪ್ರತಿಕ್ರಿಯಿಸಿ ‘ದೂರು ಬಂದ ಕಡೆಗಳಲ್ಲಿ ಆಹಾರ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಬೇಕು’ ಎಂದು ಸೂಚಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ತಾಲ್ಲೂಕು ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ತಾಲ್ಲೂಕು ಪಂಚಾಯಿತಿ ಇಒ ರವಿಶಂಕರ್, ತಹಶೀಲ್ದಾರ್ ಗೋವಿಂದರಾಜು ಇದ್ದರು.
ಹಾಸ್ಟೆಲ್ ಬಳಿ ಕಿಡಿಗೇಡಿಗಳ ಹಾವಳಿ
ಕೆಡಿಪಿ ಸದಸ್ಯ ನಂದಿಪುರ ನಾಗರಾಜು ಮಾತನಾಡಿ ‘ಗೊಡಬನಾಳ್ ಬಿಸಿಎಂ ಹಾಸ್ಟೆಲ್‌ನಲ್ಲಿ 40 ವಿದ್ಯಾರ್ಥಿಗಳ ಮಂಜೂರಾತಿ ಇದ್ದರೂ ಕೇವಲ 18 ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲಾಗಿದೆ. ಆದರೆ ಅಧಿಕಾರಿಗಳು 40 ವಿದ್ಯಾರ್ಥಿಗಳಿಗೂ ಬಿಲ್ ಪಡೆಯುತ್ತಾರೆ ಎಂಬ ದೂರುಗಳಿವೆ. ಜೊತೆಗೆ ಹಾಸ್ಟೆಲ್ ಬಳಿ ಭದ್ರತೆ ಇಲ್ಲದ ಕಾರಣ ಕಿಡಿಗೇಡಿಗಳು ಕುಡಿದು ಇಸ್ಪೀಟ್ ಆಡುತ್ತಾರೆ’ ಎಂದು ಆರೋಪಿಸಿದರು. ಬಿಸಿಎಂ ತಾಲ್ಲೂಕು ಅಧಿಕಾರಿ ಪ್ರತಿಕ್ರಿಯಿಸಿ ‘ಅಲ್ಲಿಯ ವಿದ್ಯಾರ್ಥಿಗಳನ್ನು ನಗರದ ಹಾಸ್ಟೆಲ್ ಸ್ಥಳಾಂತರ ಮಾಡಲಾಗಿದೆ’ ಎಂದರು. ಶಾಸಕ ಕೆ.ಸಿ.ವೀರೇಂದ್ರ ಮಾತನಾಡಿ ‘ಗೊಡಬನಾಳ್ ಹಾಸ್ಟೆಲ್‌ನಲ್ಲಿರುವ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು’ ಎಂದು ಸೂಚಿಸಿದರು.
ಫಲಿತಾಂಶ ಸುಧಾರಣೆಯಾಗಲಿ
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ ‘ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಈ ಬಾರಿ 23ನೇ ಸ್ಥಾನಕ್ಕೆ ಕುಸಿದಿರುವುದು ಬೇಸರದ ಸಂಗತಿ. ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಎರಡು ವರ್ಷಗಳ ಹಿಂದೆ ಜಿಲ್ಲೆಗೆ ಮೊದಲ ಸ್ಥಾನ ಬಂದಿತ್ತು. ಆದರೆ ಈ ಬಾರಿ 2 ಸ್ಥಾನ ಹಿಂದಕ್ಕೆ ಹೋಗಿರುವುದು ಸರಿಯಲ್ಲ’ ಎಂದರು. ‘ಜಲಜೀವನ ಮಿಷನ್ ಕಾಮಗಾರಿ ಶೀಘ್ರಗತಿಯಲ್ಲಿ ಪೂರ್ಣಗೊಳ್ಳಬೇಕು. ಕಾಮಗಾರಿ ಮಾಡುವಾಗ ತೆಗೆದಿರುವ ಗುಂಡಿಗಳನ್ನು ಮುಚ್ಚುವ ಜವಾಬ್ದಾರಿಯೂ ಆಯಾ ಗುತ್ತಿಗೆದಾರರದ್ದೇ ಆಗಿರುತ್ತದೆ. ಗುಂಡಿಗಳನ್ನು ಹಾಗೆಯೇ ಬಿಟ್ಟು ಸಾರ್ವಜನಿಕರಿಗೆ ತೊಂದರೆ ಕೊಡಬಾರದು. ಅಂತಹ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಬಾರದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.