ADVERTISEMENT

ಕೇಂದ್ರೀಯ ವಿದ್ಯಾಲಯ ಪ್ರಾರಂಭ ಶೀಘ್ರ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಭರವಸೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 6:08 IST
Last Updated 20 ಮಾರ್ಚ್ 2022, 6:08 IST
ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನ ಕಾಂಪೌಂಡ್‌ ನಿರ್ಮಾಣಕ್ಕೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಶನಿವಾರ ಚಾಲನೆ ನೀಡಿದರು. ವಿಧಾನಪರಿಷತ್‌ ಸದಸ್ಯ ಕೆ.ಎಸ್‌. ನವೀನ್‌ ಇದ್ದಾರೆ.
ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನ ಕಾಂಪೌಂಡ್‌ ನಿರ್ಮಾಣಕ್ಕೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಶನಿವಾರ ಚಾಲನೆ ನೀಡಿದರು. ವಿಧಾನಪರಿಷತ್‌ ಸದಸ್ಯ ಕೆ.ಎಸ್‌. ನವೀನ್‌ ಇದ್ದಾರೆ.   

ಚಿತ್ರದುರ್ಗ: ಕೇಂದ್ರೀಯ ವಿದ್ಯಾಲಯವನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಆರಂಭಿಸುವ ನಿಟ್ಟಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಶಾಲೆಗೆ ಮೀಸಲಿಟ್ಟಿರುವ ಕಟ್ಟಡಕ್ಕೆ ಮೂಲಸೌಲಭ್ಯ ಕಲ್ಪಿಸುವ ಕಾಮಗಾರಿ ಮುಗಿದ ತಕ್ಷಣ ಕೇಂದ್ರ ಸರ್ಕಾರದ ಅನುಮತಿ ಪಡೆಯಲಾಗುವುದು ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ತಿಳಿಸಿದರು.

ಇಲ್ಲಿನ ಸರ್ಕಾರಿ ವಿಜ್ಞಾನ ಕಾಲೇಜಿನ ಕಾಂಪೌಂಡ್‌, ಶೌಚಾಲಯ, ಅಡುಗೆ ಮನೆ ನಿರ್ಮಾಣ ಕಾರ್ಯಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಕೇಂದ್ರೀಯ ವಿದ್ಯಾಲಯ ಮಂಜೂರಾಗಿ ಎರಡು ವರ್ಷಗಳಾಗಿವೆ. ಕಟ್ಟಡ ಮತ್ತು ಮೂಲಸೌಲಭ್ಯ ಅಭವೃದ್ಧಿಗೆ ಜಿಲ್ಲಾಡಳಿತ ಭೂಮಿ ನೀಡಿದೆ. ಸಂಸ್ಥೆಯ ಕ್ಯಾಂಪಸ್‌ ಸಿದ್ಧವಾಗುವವರೆಗೆ ಸುಸಜ್ಜಿತ ಕಟ್ಟಡದಲ್ಲಿ ಶಾಲೆ ಪ್ರಾರಂಭಿಸಲು ಅವಕಾಶವಿದೆ. ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದ ಏಳು ಕೊಠಡಿಗಳನ್ನು ಬಾಡಿಗೆ ಪಡೆಯಲಾಗಿದೆ. ಮೂಲಸೌಕರ್ಯದ ಕೊರತೆಯ ಕಾರಣಕ್ಕೆ ಶಾಲೆ
ಪ್ರಾರಂಭವಾಗಿಲ್ಲ’ ಎಂದು ಹೇಳಿದರು.

ADVERTISEMENT

‘₹ 97 ಲಕ್ಷದಲ್ಲಿ ಮೂಲಸೌಲಭ್ಯ ಕಲ್ಪಿಸಲು ವೇದಾಂತ ಗಣಿ ಕಂಪನಿ ಮುಂದೆ ಬಂದಿದೆ. 20 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಕಂಪನಿ ಆಶ್ವಾಸನೆ ನೀಡಿದೆ. ಆ ಬಳಿಕ ಜಿಲ್ಲಾಧಿಕಾರಿ ನಿರಾಕ್ಷೇಪಣ ಪತ್ರ ನೀಡಲಿದ್ದು, ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು. ಸಾಧ್ಯವಾದಷ್ಟು ಈ ವರ್ಷವೇ ಕೇಂದ್ರೀಯ ವಿದ್ಯಾಲಯ
ಪ್ರಾರಂಭಿಸಲಾಗುವುದು’ ಎಂದರು.

ವಿಧಾನಪರಿಷತ್‌ ಸದಸ್ಯ ಕೆ.ಎಸ್‌. ನವೀನ್‌, ವೇದಾಂತ ಕಂಪನಿಯ ಸಿಎಸ್‌ಆರ್‌ ವಿಭಾಗದ ಮುಖ್ಯಸ್ಥೆ ಉದಯ, ನಾರಾಯಣ್‌ ಇದ್ದರು.

‘ಬಸ್‌ ಸೌಲಭ್ಯಕ್ಕೆ ಕೋರಿಕೆ ಬಂದಿಲ್ಲ’

‘ಪಾವಗಡ ತಾಲ್ಲೂಕಿನ ಹಳ್ಳಿಯ ಜನರು ಬಸ್ ಸೌಲಭ್ಯಕ್ಕೆ ಮನವಿ ಸಲ್ಲಿಸಿರಲಿಲ್ಲ. ಸಾರಿಗೆ ಸಮಸ್ಯೆ ಇರುವುದು ಗಮನಕ್ಕೆ ಬಂದಿರಲಿಲ್ಲ’ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಗಾಯಾಳುಗಳ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಶಾಲೆ–ಕಾಲೇಜಿಗೆ ತೆರಳುವ ಸಂದರ್ಭದಲ್ಲಿ ಹಲವು ಗ್ರಾಮಗಳಲ್ಲಿ ಬಸ್‌ ಸಮಸ್ಯೆ ಇರುವುದು ಘಟನೆಯ ಬಳಿಕ ಗಮನಕ್ಕೆ ಬಂದಿದೆ. ಈ ಬಗ್ಗೆ ಕುಲಂಕಷವಾಗಿ ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

‘ಅಪಘಾತ ವಲಯಗಳನ್ನು ಗುರುತಿಸಿ ಸರಿಯಾದ ಕ್ರಮ ಕೈಗೊಳ್ಳುವ ಕೆಲಸವಾಗಬೇಕು. ಅಪಘಾತ ಸಂಭವಿಸಿದ ಸ್ಥಳ ತಿರುವಿನಿಂದ ಕೂಡಿದೆ. ಸೂಚನಾ ಫಲಕಗಳನ್ನು ಕೂಡ ಅಳವಡಿಸಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿಯೂ ಇಂತಹದೇ ಸಮಸ್ಯೆಗಳಿವೆ. ಈ ಬಗ್ಗೆ ಸಭೆ ನಡೆಸಿ ಪರಿಶೀಲಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.