ADVERTISEMENT

ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷರಾಗಲಿ: ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 14:11 IST
Last Updated 27 ಸೆಪ್ಟೆಂಬರ್ 2022, 14:11 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬಹಿರಂಗ ಮನವಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬಹಿರಂಗ ಮನವಿ   

ಚಿತ್ರದುರ್ಗ: ಕಾಂಗ್ರೆಸ್‌ ಹಾಗೂ ದೇಶದ ಉಳಿವಿಗಾಗಿ ರಾಹುಲ್‌ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬಹಿರಂಗವಾಗಿ ಮನವಿ ಮಾಡಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶ ಹಾಗೂ ಪಕ್ಷದ ಏಕತೆಯನ್ನು ಕಾಪಾಡಲು ಗಾಂಧಿ ಕುಟುಂಬದಿಂದ ಮಾತ್ರ ಸಾಧ್ಯ. ರಾಹುಲ್‌ ಗಾಂಧಿ ಪಕ್ಷದ ಅಧ್ಯಕ್ಷರಾಗಬೇಕು ಎಂಬುದು ಕಾರ್ಯಕರ್ತರ ಬೇಡಿಕೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಪಕ್ಷದ ನಾಯಕತ್ವವನ್ನು ಒಪ್ಪಿಕೊಳ್ಳಬೇಕು’ ಎಂದು ಕೋರಿಕೊಂಡರು.

‘ರಾಹುಲ್‌ ಗಾಂಧಿ ಪರಿಶ್ರಮದಿಂದ ಕೆಲಸ ಮಾಡುತ್ತಾರೆ. ದೇಶವನ್ನು ರಕ್ಷಣೆ ಮಾಡುವ ಸಂಪೂರ್ಣ ವಿಶ್ವಾಸವಿದೆ. ಅಧ್ಯಕ್ಷ ಸ್ಥಾನದ ಹೊಣೆಗಾರಿಕೆಯನ್ನು ತಿರಸ್ಕರಿಸಬೇಡಿ’ ಎಂದು ಮಾಧ್ಯಮದ ಮೂಲಕ ಮನವಿ ಮಾಡಿಕೊಂಡರು.

ADVERTISEMENT

ಲಂಚ, ಮಂಚ; ಬಿಜೆಪಿ ಬಳುವಳಿ

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಜನ ಭ್ರಷ್ಟ ಸರ್ಕಾರ ಎಂಬ ಉಡುಗೊರೆ ನೀಡಿದ್ದಾರೆ. ಲಂಚ, ಮಂಚ ಬಿಜೆಪಿಯ ಬಳುವಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಟೀಕಿಸಿದರು.

‘ಡಿ.ಕೆ.ಶಿವಕುಮಾರ್‌ ಜಾಮೀನು ಮೇಲೆ ಹೊರಗಿದ್ದಾರೆ’ ಎಂಬ ಸಚಿವ ಆರ್‌.ಅಶೋಕ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ರಾಜ್ಯದಲ್ಲಿ 40 ಪರ್ಸೆಂಟ್‌ ಸರ್ಕಾರ ಅಧಿಕಾರದಲ್ಲಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಬಿಜೆಪಿಯ ಆಡಳಿತದ ಅವಧಿಯಲ್ಲಿ ರಾಜ್ಯಕ್ಕೆ ಕೆಟ್ಟ ಹೆಸರು ಬಂದಿದೆ. ಭ್ರಷ್ಟಾಚಾರದ ಆರೋಪವನ್ನು ಮೊದಲು ತೊಳೆದುಕೊಳ್ಳಿ’ ಎಂದು ಕಿಡಿಕಾರಿದರು.

‘ಆಪರೇಷನ್‌ ಕಮಲ ಮಾಡಲು ಹೊರಟಿದ್ದ ಬಿಜೆಪಿಯನ್ನು ತಡೆದು ಕಾಂಗ್ರೆಸ್‌ ಶಾಸಕರನ್ನು ರಕ್ಷಣೆ ಮಾಡಿದೆ. ಈ ಕಾರಣಕ್ಕೆ ನನ್ನ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಮೂರು ವರ್ಷಗಳಿಂದ ನನಗೆ ಏನೂ ಮಾಡಲು ಸಾಧ್ಯವಾಗಿಲ್ಲ. ಮುಂದೆ ಕೂಡ ಏನು ಮಾಡಲು ಆಗದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.