ADVERTISEMENT

ಪಶು ವೈದ್ಯರ ನೇಮಕಕ್ಕೆ ಶೀಘ್ರ ಕ್ರಮವಹಿಸಿ: ಎನ್‌.ಆರ್‌.ಮಹೇಶ್ವರಪ್ಪ

ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆ; ಕೃಷಿಕ ಸಮಾಜದ ಅಧ್ಯಕ್ಷ ಮಹೇಶ್ವರಪ್ಪ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 16:55 IST
Last Updated 24 ಜೂನ್ 2025, 16:55 IST
ಚಿತ್ರದುರ್ಗದ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಆರ್‌.ಮಹೇಶ್ವರಪ್ಪ ಮಾತನಾಡಿದರು
ಚಿತ್ರದುರ್ಗದ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಆರ್‌.ಮಹೇಶ್ವರಪ್ಪ ಮಾತನಾಡಿದರು   

ಚಿತ್ರದುರ್ಗ: ‘ಜಿಲ್ಲೆಯಲ್ಲಿ ರೈತರು ಜಾನುವಾರುಗಳ ಮೇಲೆ ಸಾಕಷ್ಟು ಅವಲಂಬಿತರಾಗಿದ್ದಾರೆ. ಆದರೆ, ಪಶು ವೈದ್ಯರ ಕೊರತೆ ಎದುರಾಗಿದ್ದು, ಕೂಡಲೇ ವೈದ್ಯರ ನೇಮಕಕ್ಕೆ ಕ್ರಮ ವಹಿಸಬೇಕು’ ಎಂದು ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಆರ್‌.ಮಹೇಶ್ವರಪ್ಪ ಸೂಚಿಸಿದರು. 

ಇಲ್ಲಿನ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಪಶು ವೈದ್ಯರ ಕೊರತೆಯಿಂದ ಜಾನುವಾರುಗಳು ರೋಗಗಳಿಗೆ ತುತ್ತಾಗುತ್ತಿವೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಖಾಲಿ ಇರುವ ಪಶು ವೈದ್ಯರ ನೇಮಕಕ್ಕೆ ಸಂಬಂಧಿಸಿದಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ ಪ್ರಸ್ತಾವ ಸಲ್ಲಿಸಬೇಕು’ ಎಂದು ಹೇಳಿದರು.  

‘ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಕಾಣಿಸಿಕೊಳ್ಳುವ ಕೀಟಬಾಧೆ, ರೋಗಗಳ ನಿರ್ವಹಣೆಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ರೈತರಿಗೆ ತರಬೇತಿ ಶಿಬಿರ ಆಯೋಜಿಸಬೇಕು. ಈ ಮೂಲಕ ರೋಗ ನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡಬೇಕು’ ಎಂದರು. 

ADVERTISEMENT

‘ಹಿರಿಯೂರು ತಾಲ್ಲೂಕಿನಲ್ಲಿ ಪಶು ವೈದ್ಯರ ಎಷ್ಟು ಹುದ್ದೆಗಳು ಖಾಲಿ ಇವೆ, ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಎಷ್ಟು? ಎಂಬ ಮಾಹಿತಿ ನೀಡಬೇಕು’ ಎಂದು ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಜಿಲ್ಲಾ ಪ್ರತಿನಿಧಿ ಕೆ.ಜಗದೀಶ್‌ ಕಂದಿಕೆರೆ ಒತ್ತಾಯಿಸಿದರು.

‘ಜಿಲ್ಲೆಯಲ್ಲಿ 34 ಪಶು ವೈದ್ಯರ ಹುದ್ದೆ, 235 ಪಶು ವೈದ್ಯಕೀಯ ಪರಿವೀಕ್ಷಕರು ಹಾಗೂ 231 ಡಿ-ಗ್ರೂಪ್‌ ಖಾಲಿ ಹುದ್ದೆಗಳಿವೆ. ಖಾಲಿ ಇರುವ ಹುದ್ದೆಗಳ ಭರ್ತಿಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಎನ್‌.ಕುಮಾರ್‌ ತಿಳಿಸಿದರು. 

‘ಜಿಲ್ಲೆಯಲ್ಲಿ ಶೇ 93ರಷ್ಟು ರೈತರು ಕೊಳವೆಬಾವಿ ಆಧರಿತ ಕೃಷಿ ಅವಲಂಬಿಸಿದ್ದಾರೆ. ಕೃಷಿ, ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳ ಸಲಹೆ-ಸೂಚನೆಗಳು ರೈತರಿಗೆ ಅಗತ್ಯವಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್‌ ಹೇಳಿದರು. 

‘ರಾಜ್ಯದಲ್ಲಿಯೇ ಅತಿ ಹೆಚ್ಚು ಸಿರಿಧಾನ್ಯವನ್ನು ಹೊಸದುರ್ಗ ತಾಲ್ಲೂಕಿನಲ್ಲಿ ಬೆಳೆಯಲಾಗುತ್ತಿದೆ. ಕಳೆದ ವರ್ಷ ಸಾಮೆಯ ಹೊಸ ತಳಿ ಪರಿಚಯಿಸಲಾಗಿದ್ದು, ಅದರಂತೆ ನವಣೆ, ಹಾರಕ, ಬರಗು, ಊದಲು ಬೆಳೆಗಳ ತಳಿಗಳನ್ನು ರೈತರಿಗೆ ಪರಿಚಯಿಸಬೇಕು’ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ರಾಗಿ ಶಿವಮೂರ್ತಪ್ಪ ತಿಳಿಸಿದರು.  

ಸಮಿತಿ ಉಪಾಧ್ಯಕ್ಷ ಧರಣೇಶ್‌, ರಾಜ್ಯ ಪ್ರತಿನಿಧಿ ವಿ.ಜಿ.ಪರಮೇಶ್ವರಪ್ಪ, ಖಜಾಂಚಿ ಭಕ್ತ ಪ್ರಹ್ಲಾದ್‌, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಎಂ.ಎಸ್‌.ನವೀನ್, ಸಿ.ಎಚ್‌.ಕಾಂತರಾಜ್‌, ಬಿ.ಟಿ.ಜಗದೀಶ್‌, ಜಿಲ್ಲಾ ಪ್ರತಿನಿಧಿಗಳಾದ ಕೇಶವ, ಶಶಿಧರ್‌, ಎಸ್‌.ರಮೇಶಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.