ಚಿತ್ರದುರ್ಗ: ತಾಲ್ಲೂಕಿನ ಗುಡ್ಡದರಂಗವ್ವನಹಳ್ಳಿ ಸಮೀಪದ ಮಂಗಳೂರು–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಚಿರತೆಗೆ ವಾಹನವೊಂದು ಡಿಕ್ಕಿ ಹೊಡೆದಿದ್ದು, ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ.
ಸುಮಾರು 8 ತಿಂಗಳ ಪ್ರಾಯದ ಹೆಣ್ಣು ಚಿರತೆ ಅಪಘಾತಕ್ಕೆ ಬಲಿಯಾಗಿದೆ. ಭಾನುವಾರ ನಸುಕಿನಲ್ಲಿ ಅಪಘಾತ ಸಂಭವಿಸಿದೆ. ಮರಿಯೊಂದಿಗೆ ಇದ್ದ ತಾಯಿ ಚಿರತೆ ಅಪಾಯದಿಂದ ಪಾರಾಗಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಗಸ್ತು ತಿರುಗುತ್ತಿದ್ದ ಅರಣ್ಯ ಇಲಾಖೆಯ ವಾಚರ್‌ಗೆ ಚಿರತೆ ಅಪಘಾತಕ್ಕೆ ಬಲಿಯಾಗಿದ್ದು ಗೊತ್ತಾಗಿದೆ. ನಸುಕಿನಲ್ಲೇ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಮೃತ ಚಿರತೆ ಮರಿಯನ್ನು ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ತಂದಿದ್ದಾರೆ. ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಮೃತಪಟ್ಟಿದೆ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ವನ್ಯಜೀವಿ ನಿಯಮದ ಪ್ರಕಾರ ಚಿರತೆಯನ್ನು ಸುಟ್ಟುಹಾಕಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.