ADVERTISEMENT

ಶೌಚಾಲಯ ನಿರ್ಮಾಣದಲ್ಲಿ ಅಕ್ರಮ ತನಿಖೆಯಾಗಲಿ

ಮಹಾಂತಣ್ಣ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 6:49 IST
Last Updated 17 ಡಿಸೆಂಬರ್ 2020, 6:49 IST
ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ಎಚ್.ಡಿ. ಲಿಂಗರಾಜು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.
ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ಎಚ್.ಡಿ. ಲಿಂಗರಾಜು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.   

ನಾಯಕನಹಟ್ಟಿ: ಸಾರ್ವಜನಿಕರಿಗೆ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ಸಹಾಯಧನದಲ್ಲಿ ಅಧಿಕಾರಿಗಳು ಬಾರಿ ಅಕ್ರಮವೆಸಗಿದ್ದಾರೆ ಎಂದು 10ನೇ ವಾರ್ಡ್ ಸದಸ್ಯ ಎಸ್. ಉಮಾಪತಿ ಆರೋಪಿಸಿದರು.

ಪಟ್ಟಣದ ಪಟ್ಟಣ ಪಂಚಾಯಿತಿ ಕೌನ್ಸಿಲ್ ಸಭಾಂಗಣದಲ್ಲಿ ಬುಧವಾರ ಎನ್. ಮಹಾಂತಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘2017-18ನೇ ಮತ್ತು 2018-19ನೇ ಸಾಲಿನಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸುಮಾರು 480 ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಪ್ರತಿಯೊಬ್ಬ ಫಲಾನುಭವಿಗೂ ಕೇಂದ್ರ ಸರ್ಕಾರ ಹಾಗೂ ರಾಜ್ಯಸರ್ಕಾರಗಳಿಂದ ಒಟ್ಟು ₹ 15 ಸಾವಿರ ಧನಸಹಾಯ ದೊರೆಯುತ್ತದೆ. ಆದರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು 100 ಫಲಾನುಭವಿಗಳಿಗೆ ₹ 6ಸಾವಿರ ಹಾಗೂ ಇನ್ನುಳಿದ 380 ಫಲಾನುಭವಿಗಳಿಗೆ ₹ 2 ಸಾವಿರದಿಂದ ₹ 4 ಸಾವಿರದವರೆಗೂ ನೇರವಾಗಿ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ. ಆದರೆ ಲೆಕ್ಕಪತ್ರದಲ್ಲಿ ಮಾತ್ರ ₹ 15ಸಾವಿರ ಎಂದು ದಾಖಲೆಗಳನ್ನು ಸೃಷ್ಟಿಸಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘₹ 72 ಲಕ್ಷದಲ್ಲಿ ಈಗಾಗಲೇ ₹ 48 ಲಕ್ಷ ದುರ್ಬಳಕೆಯಾಗಿದೆ. ಹಾಗಾಗಿ ಸಮಗ್ರ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು. ಇದಕ್ಕೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು.

ಡೀಸೆಲ್ ಬಳಕೆಯಲ್ಲಿ ಅವ್ಯವಹಾರ:
ಕಳೆದ ಏಪ್ರಿಲ್‌ನಿಂದ ಆಗಸ್ಟ್ ತಿಂಗಳ ವರೆಗೂ ಕಚೇರಿಯ ವಾಹನಗಳಿಗೆ ₹ 3.29 ಲಕ್ಷದಷ್ಟು ಡೀಸೆಲ್ ಬಳಸಲಾಗಿದೆ. ಈ ಸಂಬಂಧ ಬಂಕ್ ಮಾಲೀಕರಿಗೆ ಹಣ ಪಾವತಿಸಲು ಸಭೆ ಒಪ್ಪಿಗೆ ನೀಡಬೇಕು ಎಂದು ಮುಖ್ಯಾಧಿಕಾರಿ ಎಚ್.ಡಿ. ಲಿಂಗರಾಜು ಕೇಳಿದರು.

ಸದಸ್ಯರಾದ ಟಿ. ಬಸಣ್ಣ, ಜೆ.ಆರ್.ರವಿಕುಮಾರ್, ಮಹಮ್ಮದ್‌ ಮನ್ಸೂರ್ ಪ್ರತಿಕ್ರಿಯಿಸಿ, ‘ನಮ್ಮ ಕಚೇರಿಯಲ್ಲಿ ಇರುವುದು ಕಸ ಸಂಗ್ರಹಣೆಗೆ ಟ್ರ್ಯಾಕ್ಟರ್ ಮತ್ತು ಒಂದು ನೀರಿನ ಟ್ಯಾಂಕರ್. ಏಪ್ರಿಲ್‌ನಿಂದ ಆಗಸ್ಟ್ ತಿಂಗಳವರೆಗೂ ಲಾಕ್‌ಡೌನ್ ಇದ್ದು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿಲ್ಲ. ನಿತ್ಯ ಟ್ರಾಕ್ಟರ್‌ಗೆ 10 ಲೀಟರ್ ಡೀಸೆಲ್ ಬಳಸಿದರೂ 5 ತಿಂಗಳಿಗೆ ₹ 1 ಲಕ್ಷ ಆಗಬಹುದು. ಆದರೆ ₹ 3.29 ಲಕ್ಷ ಡೀಸೆಲ್ ಬಳಸಿದ್ದೀರಿ ಎಂದರೆ ಇದರಲ್ಲೂ ಸಹ ಬಹುದೊಡ್ಡ ಗೋಲ್‌ಮಾಲ್ ಆಗಿದೆ’ ಎಂದು ಆರೋಪಿಸಿದರು.

ಹಾಗಾಗಿ ಡೀಸೆಲ್ ಬಳಕೆಯ ದಿನವಹಿ ಪುಸ್ತಕವನ್ನು ಸಭೆಗೆ ಹಾಜರುಪಡಿಸಿ ಮತ್ತು ಡೀಸೆಲ್‌ನಲ್ಲಿ ಆಗಿರುವ ಅಕ್ರಮವನ್ನು ತನಿಖೆಗೆ ಒಳಪಡಿಸಿ. ಅಲ್ಲಿಯವರೆಗೂ ಹಣ ನೀಡಬೇಡಿ’ ಎಂದು ಮುಖ್ಯಾಧಿಕಾರಿಗೆ ತಾಕೀತು ಮಾಡಿದರು.

ಪಟ್ಟಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಖಾಸಗಿ ಹಾಗೂ ಸರ್ಕಾರಿ ಬಸ್ ನಿಲ್ದಾಣಗಳಿಗೆ ನಿವೇಶ ನವನ್ನು ಗುರುತಿಸಲು ನಿರ್ಣಯ ಅಂಗೀಕರಿಸಲಾಯಿತು. ಪಟ್ಟಣದಲ್ಲಿ4 ಚಿಕ್ಕ ಪ್ರಮಾಣದ ವೈಜ್ಞಾನಿಕ ಕಸ ವಿಲೇವಾರಿ ಘಟಕಗಳನ್ನು ನಿರ್ಮಿಸ ಲಾಗುವುದು ಎಂದು ಹೇಳಿದರು.

15ನೇ ಹಣಕಾಸು ಯೋಜನೆಯಲ್ಲಿ ಮಂಜೂರಾಗಿರುವ ₹ 43 ಲಕ್ಷ ವೆಚ್ಚದ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಭೆ ಅನುಮೋದನೆ ನೀಡಿತು.

ಉಪಾಧ್ಯಕ್ಷೆ ಷಗುಫ್ತಾಯಾಸ್ಮಿನ್‌ ಕೌಸರ್, ಸದಸ್ಯರಾದ ನಾಗರಾಜ್, ಬೋರಮ್ಮ, ಅನಸೂಯಮ್ಮ, ನೀಲಮ್ಮ, ಬೋರಮ್ಮದಿವಾಕರ್, ಮಂಜುಳಾ ಶ್ರೀಕಾಂತ್, ಜೆ.ಟಿ.ಎಸ್. ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.