ADVERTISEMENT

ಚಿತ್ರದುರ್ಗ: ಜೀವಪರ ಕಾಳಜಿ ಮೂಲೆಗುಂಪು

‘ನಿತ್ಯ ಕಲ್ಯಾಣ’ ಕಾರ್ಯಕ್ರಮದಲ್ಲಿ ಶಿವಮೂರ್ತಿ ಮುರುಘಾ ಶರಣರು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 4:14 IST
Last Updated 13 ಆಗಸ್ಟ್ 2021, 4:14 IST
ಚಿತ್ರದುರ್ಗದಲ್ಲಿ ಮುರುಘಾ ಮಠದಿಂದ ನಡೆದ ಮೂರನೇ ದಿನದ ‘ನಿತ್ಯ ಕಲ್ಯಾಣ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು
ಚಿತ್ರದುರ್ಗದಲ್ಲಿ ಮುರುಘಾ ಮಠದಿಂದ ನಡೆದ ಮೂರನೇ ದಿನದ ‘ನಿತ್ಯ ಕಲ್ಯಾಣ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು   

ಚಿತ್ರದುರ್ಗ: ‘ಅಮಾನವೀಯ ಘಟನೆ, ಸಂದರ್ಭಗಳನ್ನು ಇತಿಹಾಸದ ಮೂಲಕ ತಿಳಿದಿದ್ದೇವೆ. ಹೀಗಿದ್ದರೂ ಜೀವ ಪರವಾದ ಕಾಳಜಿ ಮೂಲೆ ಗುಂಪಾಗುತ್ತಿವೆ. ಮಾನವೀಯ ಮೌಲ್ಯ ಕಣ್ಮರೆಯಾಗುತ್ತಿವೆ’ ಎಂದು ಶಿವಮೂರ್ತಿ ಮುರುಘಾ ಶರಣರು ಬೇಸರಿಸಿದರು.

ಉಪ್ಪಾರ ಸಮಾಜದ ಅಧ್ಯಕ್ಷ ಆರ್. ಮೂರ್ತಿ ಮನೆಯ ಮುಂಭಾಗ ಆಯೋಜಿಸಿದ್ದ ‘ನಿತ್ಯ ಕಲ್ಯಾಣ’ ಮೂರನೇ ದಿನದ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ‘ಅಸ್ಪೃಶ್ಯತೆ, ಜಾತಿಯತೆಯಿಂದಾಗಿ ಸಾಮಾಜಿಕ ಕ್ಷೇತ್ರಕ್ಕೆ ಹಿನ್ನಡೆ ಉಂಟಾಗುತ್ತಿದೆ’ ಎಂದರು.

‘ನಿತ್ಯ ಕಲ್ಯಾಣ’ ಧ್ಯಾನ, ಪೂಜೆ, ಪ್ರಾರ್ಥನೆಗೆ ಸಮಾನವಾಗಿದೆ. ಸಮಾಜದಲ್ಲಿ ಸ್ತ್ರೀ–ಪುರುಷರಿಬ್ಬರೂ ಸಮಾನರು. ಪ್ರಸ್ತುತ ದಿನಗಳಲ್ಲಿ ಹಣಕ್ಕಿಂತಲೂ ಶಿಕ್ಷಣದ ಅಗತ್ಯವಿದೆ. ಜಾತಿಗಿಂತಲೂ ನೀತಿ, ಮಾನವೀಯತೆ ಮುಖ್ಯ. ಸಾಮಾಜಿಕ ಬೆಳವಣಿಗೆಗೆ ದೊಡ್ಡ ಪೆಟ್ಟು ನೀಡುತ್ತಿರುವ ಜಾತಿವಾದ, ಮೂಲಭೂತವಾದ ಹಾಗೂ ಪ್ರತ್ಯೇಕತಾವಾದದ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದು ಸಲಹೆ ನೀಡಿದರು.

ADVERTISEMENT

ಬಸವಭೂಷಣ ಸ್ವಾಮೀಜಿ, ‘ಭಾರತ ದೇಶ ಹಲವಾರು ಸಂಸ್ಕೃತಿ ಹೊಂದಿದೆ. ಇತರ ಸಂಸ್ಕೃತಿಯನ್ನು ನಾವು ಗೌರವಿಸಬೇಕು. ಯಾವುದೇ ಸಿದ್ಧಾಂತವಿರಲಿ ಅದನ್ನು ಮುಕ್ತಕಂಠದಿಂದ ಒಪ್ಪಿಕೊಳ್ಳಬೇಕು. ಆಡಂಬರದ ಬದಲು ಸರಳತೆ ಮೈಗೂಡಿಸಿಕೊಂಡು ಸಾಮರಸ್ಯದಿಂದ ಎಲ್ಲರೂ ಒಂದಾಗಿ ಬದುಕಬೇಕು’ ಎಂದು ಹೇಳಿದರು.

ಬಸವ ರಮಾನಂದ ಸ್ವಾಮೀಜಿ, ಬಸವನಾಗಿದೇವ ಸ್ವಾಮೀಜಿ, ಆರ್.ಮೂರ್ತಿ, ಕೆಎಚ್‌ಬಿ ಸಂಘದ ಅಧ್ಯಕ್ಷ ನರೇಂದ್ರಪ್ಪ, ಕಾರ್ಯದರ್ಶಿ ಮಲ್ಲಿಕಾರ್ಜುನಪ್ಪ, ಡಾ. ವಿಶ್ವನಾಥ್, ನಿವೃತ್ತ ಡಿವೈಎಸ್ಪಿ ನಾಗರಾಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.