ADVERTISEMENT

ಲಿಂಗ ಸಮಾನತೆಗೆ ಶರಣರ ಸಲಹೆ: ದಾಂಪತ್ಯ ಜೀವನಕ್ಕೆ ಅಡಿ ಇಟ್ಟ 31 ಜೋಡಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 11:55 IST
Last Updated 5 ಡಿಸೆಂಬರ್ 2019, 11:55 IST
ಚಿತ್ರದುರ್ಗದ ಮುರುಘಾ ಮಠದಲ್ಲಿ ಗುರುವಾರ ನಡೆದ ಸಾಮೂಹಿಕ ವಿವಾಹದಲ್ಲಿ ಶಿವಮೂರ್ತಿ ಮುರುಘಾ ಶರಣರು ತಾಳಿ ವಿತರಿಸಿದರು.
ಚಿತ್ರದುರ್ಗದ ಮುರುಘಾ ಮಠದಲ್ಲಿ ಗುರುವಾರ ನಡೆದ ಸಾಮೂಹಿಕ ವಿವಾಹದಲ್ಲಿ ಶಿವಮೂರ್ತಿ ಮುರುಘಾ ಶರಣರು ತಾಳಿ ವಿತರಿಸಿದರು.   

ಚಿತ್ರದುರ್ಗ: ಮಹಿಳೆ ಮತ್ತು ಪುರುಷರ ನಡುವಿನ ತಾರತಮ್ಯವೇ ಲಿಂಗಾನುಪಾತಕ್ಕೆ ಕಾರಣ. ಲಿಂಗ ಸಮಾನತೆ ಸಿಗದೇ ಇದ್ದರೆ ಸಾಮಾಜಿಕ ಬದಲಾವಣೆ ಕಷ್ಟವಾಗಬಹುದು ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಮುರುಘಾ ಮಠದ ಅನುಭವ ಮಂಟಪದಲ್ಲಿ ಬಸವ ಕೇಂದ್ರ, ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಷನ್‌ ಗುರುವಾರ ಏರ್ಪಡಿಸಿದ್ದ 29ನೇ ವರ್ಷದ 12ನೇ ತಿಂಗಳ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ನವ ವಿವಾಹಿತರನ್ನು ಹರಸಿ ಶರಣರು ಮಾತನಾಡಿದರು.

‘ಲಿಂಗಾನುಪಾತದ ಪ್ರಮಾಣ ತೀರಾ ಆತಂಕರಾರಿ ರೀತಿಯಲ್ಲಿದೆ. ಹೆಣ್ಣು ಶಿಶುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಗಂಡಿನಷ್ಟೇ ಪ್ರಾಮುಖ್ಯತೆ ಹೆಣ್ಣಿಗೆ ಸಿಗದೇ ಇದ್ದರೆ ಮುಂದಿನ ದಿನಗಳಲ್ಲಿ ಪರಿತಪ್ಪಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಎರಡು ದಶಕಗಳ ಹಿಂದೆ ವಧುವಿನ ಪೋಷಕರು ವರನನ್ನು ಅರಸುತ್ತಿದ್ದರು. ಈಗ ವಧುವನ್ನು ಅರಸಿ ವರ ಅಲೆಯುವ ಪರಿಸ್ಥಿತಿ ಇದೆ. ಲಿಂಗಾನುಪಾತದಲ್ಲಿ ವ್ಯಾತ್ಯಾಸ ಕಾಣುತ್ತಿದೆ. ಹೆಣ್ಣು ಶಿಶುಗಳನ್ನು ಭ್ರೂಣದಲ್ಲೇ ಹತ್ಯೆ ಮಾಡುತ್ತಿರುವ ಪರಿಣಾಮ ಮಹಿಳೆಯರ ಸಂಖ್ಯೆ ಕಡಿಮೆಯಾಗುತ್ತಿದೆ. ಹೆಣ್ಣು ಶಿಶು ಹತ್ಯೆ ಹಾಗೂ ಲಿಂಗಾನುಪಾತಕ್ಕೆ ಮಹಿಳೆ ಸಹಕರಿಸುತ್ತಿರುವುದು ವಿಪರ್ಯಾಸ’ ಎಂದರು.

‘ಜನ್ಮ ನೀಡಿದ ಪೋಷಕರೇ ಹೆಣ್ಣು ಮಕ್ಕಳನ್ನು ಹತ್ಯೆ ಮಾಡುವ ಪರಿಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿದ್ದು ದುರಂತ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡಬೇಕು. ಪುರುಷರ ಸರಿಸಮಾನವಾಗಿ ಕೆಲಸ ಮಾಡುವ ಸಾಮರ್ಥ್ಯ ಮಹಿಳೆಗೂ ಇದೆ. ಇದನ್ನು ಪ್ರತಿಯೊಬ್ಬರು ಅರಿಯಬೇಕು‘ ಎಂದು ಹೇಳಿದರು.

ವಿಶ್ವಕರ್ಮ ಸಂಸ್ಥಾನ ಸಾವಿತ್ರಿ ಪೀಠದ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ, ‘ಜಾತಿ ಮತ್ತು ಸಮುದಾಯದ ಗಡಿ ಮೀರಿ ಸಮಾಜವನ್ನು ಒಗ್ಗೂಡಿಸುವ ಮುರುಘಾ ಮಠದ ಕಾರ್ಯ ಶ್ಲಾಘನೀಯ. ಮೌಢ್ಯ ಮತ್ತು ಕಂದಾಚಾರಗಳನ್ನು ಹೋಗಲಾಡಿಸಲು ಶರಣರು ಶ್ರಮಿಸುತ್ತಿರುವ ರೀತಿ ಮಾದರಿಯಾಗಿದೆ’ ಎಂದು ಮೆಚ್ಚುಗೆ ಸೂಚಿಸಿದರು.

‘ಬಸವಣ್ಣನವರು ಪ್ರತಿಪಾದಿಸಿದ ಸಮಾನತೆಯ ತತ್ವವನ್ನು ಮಠ ಪಾಲಿಸುತ್ತಿದೆ. ಸಮಾಜಮುಖಿ ಕಾರ್ಯಗಳನ್ನು ಕೈಗೆತ್ತಿಕೊಂಡು ಸಾಮಾಜಿಕ ಬದಲಾವಣೆಗೆ ಶ್ರಮಿಸುತ್ತಿದೆ. ಮನಸಿನ ಮೈಲಿಗೆಯನ್ನು ತೊಳೆಯುವ ಸಾಮರ್ಥ್ಯ ಇರುವುದು ಶರಣರಂತಹ ಗುರುಗಳಿಂದ ಮಾತ್ರ’ ಎಂದರು.

ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಎಸ್‌.ಎಸ್‌.ಪಾಟೀಲ, ‘ಮದುವೆ ಹೆಸರಿನಲ್ಲಿ ಅನೇಕರು ದುಂದುವೆಚ್ಚ ಮಾಡುತ್ತಾರೆ. ಸಾಲಬಾಧೆಗೆ ಸಿಲುಕದಿರಲು ಸರಳ ಮತ್ತು ಸಾಮೂಹಿಕ ವಿವಾಹಗಳ ಅಗತ್ಯವಿದೆ’ ಎಂದು ಹೇಳಿದರು.

‘ಅಂತರ್ಜಾತಿ ವಿವಾಹ 12ನೇ ಶತಮಾನದಿಂದ ಆರಂಭವಾಗಿದೆ. ವಿವಾಹ ವಿಚ್ಛೇದನಗಳು ಹೆಚ್ಚಾಗುತ್ತಿವೆ. ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳು ಮೌಲ್ಯಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕಿದೆ’ ಎಂದು ಸಲಹೆ ನೀಡಿದರು.

31 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದರಲ್ಲಿ ಮೂರು ಅಂತರ್ಜಾತಿ ವಿವಾಹಗಳು ನಡೆದವು. ತಾಳಿ, ಬಟ್ಟೆಯನ್ನು ಮಠದ ವತಿಯಿಂದ ಉಚಿತವಾಗಿ ನೀಡಲಾಯಿತು.

ಅಕ್ಕಿ ಮಠದ ಗುರುಲಿಂಗ ಸ್ವಾಮೀಜಿ, ಛಲವಾದಿ ಗುರುಪೀಠದ ಬಸವ ನಾಗಿದೇವ ಸ್ವಾಮೀಜಿ, ಕುಂಬಾರ ಗುರುಪೀಠದ ಕುಂಬಾರ ಗುಂಡಯ್ಯ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ದಾಸೋಹಿಗಳಾದ ಎಸ್. ರುದ್ರಮುನಿಯಪ್ಪ, ಜಿ. ದೇವರಾಜು, ಎ.ಎಂ.ಸೇತುರಾಂ, ಕೆಇಬಿ ಷಣ್ಮುಖಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.