ADVERTISEMENT

ಕೋಟೆನಾಡಿಗೆ ಎಆರ್‌ಟಿಒ ಮಂಜೂರು ಸಾಧ್ಯತೆ

ಸಾರಿಗೆ ಇಲಾಖೆ ಸಿದ್ಧತೆ, ಜಿಲ್ಲೆಯಲ್ಲಿವೆ 3.9 ಲಕ್ಷ ವಾಹನ

ಜಿ.ಬಿ.ನಾಗರಾಜ್
Published 16 ಅಕ್ಟೋಬರ್ 2020, 3:16 IST
Last Updated 16 ಅಕ್ಟೋಬರ್ 2020, 3:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿತ್ರದುರ್ಗ: ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಹಾಗೂ ವಾಹನ ಬಳಕೆದಾರರಿಗೆ ತ್ವರಿತ ಸೇವೆಯನ್ನು ನೀಡುವ ಉದ್ದೇಶದಿಂದ ಕೋಟೆನಾಡಿಗೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಎಆರ್‌ಟಿಒ) ಕಚೇರಿಯನ್ನು ಮಂಜೂರು ಮಾಡಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿದೆ.

ಹಿರಿಯೂರು, ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿಗೆ ಪ್ರತ್ಯೇಕ ಎಆರ್‌ಟಿಒ ಕಚೇರಿ ಲಭ್ಯವಾಗುವ ಸಾಧ್ಯತೆ ಇದೆ. ಮೂರು ತಾಲ್ಲೂಕು ವ್ಯಾಪ್ತಿಯಲ್ಲಿರುವ ವಾಹನಗಳ ಸಂಖ್ಯೆ, ಚಾಲನಾ ಪರವಾನಗಿ, ಮಾಸಿಕವಾಗಿ ಸಂಗ್ರಹವಾಗುತ್ತಿದ್ದ ತೆರಿಗೆ ಸೇರಿ ಹಲವು ಮಾಹಿತಿಯನ್ನು ಸಾರಿಗೆ ಇಲಾಖೆ ಪಡೆದುಕೊಂಡಿದೆ. ಎಆರ್‌ಟಿಒ ಪ್ರಸ್ತಾವಕ್ಕೆ ಸರ್ಕಾರ ಅನುಮೋದನೆ ನೀಡುವುದು ಬಾಕಿ ಇದೆ.

ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕು ವ್ಯಾಪ್ತಿಗೆ ಒಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಇದೆ. ಜಿಲ್ಲೆಯಲ್ಲಿ 3.9 ಲಕ್ಷಕ್ಕೂ ಹೆಚ್ಚು ವಾಹನಗಳಿವೆ. ಇವುಗಳಲ್ಲಿ ಅರ್ಧದಷ್ಟು ದ್ವಿಚಕ್ರ ವಾಹನಗಳಿದ್ದು, ಜಿಲ್ಲೆಯಲ್ಲಿ ನಿತ್ಯ ಸರಾಸರಿ 40ರಿಂದ 50 ವಾಹನ ನೋಂದಣಿಯಾಗುತ್ತಿವೆ. ತಾಲ್ಲೂಕು ಕೇಂದ್ರಗಳಲ್ಲಿ ತಿಂಗಳಿಗೊಮ್ಮೆ ನಡೆಯುವ ಕ್ಯಾಂಪ್‌ಗಳಲ್ಲಿ ನೋಂದಣಿಯಾಗುವ ವಾಹನಗಳ ಸಂಖ್ಯೆ ಇನ್ನೂ ಅಧಿಕ.

ADVERTISEMENT

ಜಿಲ್ಲೆಯ ಅರ್ಧದಷ್ಟು ವಾಹನಗಳು ಮೊಳಕಾಲ್ಮುರು, ಚಳ್ಳಕೆರೆ ಹಾಗೂ ಹಿರಿಯೂರು ತಾಲ್ಲೂಕಿನಲ್ಲಿವೆ. ಎರಡು ತಾಲ್ಲೂಕುಗಳಿಗೆ ಹೋಲಿಸಿದರೆ ಮೊಳಕಾಲ್ಮುರು ತಾಲ್ಲೂಕಿನಲ್ಲಿ ವಾಹನಗಳ ಸಂಖ್ಯೆ ಕಡಿಮೆ. ಆದರೆ, ಜಿಲ್ಲಾ ಕೇಂದ್ರದಿಂದ ತಾಲ್ಲೂಕು 85 ಕಿ.ಮೀ ದೂರದಲ್ಲಿದೆ. ವಾಹನ ನೋಂದಣಿ, ಚಾಲನಾ ಪರವಾನಗಿ, ಶುಲ್ಕ ಪಾವತಿ, ಪರವಾನಗಿ ನವೀಕರಣ ಸೇರಿ ಹಲವು ಸೇವೆಗಳಿಗೆ ಜಿಲ್ಲಾ ಕೇಂದ್ರಕ್ಕೆ ಅಲೆಯುವುದು ಕಷ್ಟದಾಯಕ. ಹೀಗಾಗಿ, ಪ್ರತ್ಯೇಕ ಎಆರ್‌ಟಿಒ ಕಚೇರಿಗೆ ಮೂರು ವರ್ಷಗಳ ಹಿಂದೆಯೇ ಪ್ರಸ್ತಾವ ಸಲ್ಲಿಕೆಯಾಗಿತ್ತು.

‘ಎಆರ್‌ಟಿಒಗೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯ ಆಯುಕ್ತರ ಕಚೇರಿ ಕೇಳಿದ ಮಾಹಿತಿಯನ್ನು ಒದಗಿಸಲಾಗಿದೆ. ಸರ್ಕಾರ ಒಪ್ಪಿಗೆ ನೀಡಿದರೆ ಕಚೇರಿ ಮಂಜೂರಾಗುತ್ತದೆ. ಇದರಿಂದ ಮೂರು ತಾಲ್ಲೂಕಿನ ವಾಹನ ಬಳಕೆದಾರರಿಗೆ ಅನುಕೂಲವಾಗಲಿದೆ’ ಎನ್ನುತ್ತಾರೆ ಆರ್‌ಟಿಒ ಜಿ.ಎಸ್‌.ಹೆಗಡೆ.

ಜಿಲ್ಲಾ ಕೇಂದ್ರದಲ್ಲಿರುವ ಆರ್‌ಟಿಒ ಕಚೇರಿಗೆ ಸಾರ್ವಜನಿಕರು ಭೇಟಿ ನೀಡುವುದು ಕಷ್ಟವಾಗುತ್ತದೆ ಎಂಬುದನ್ನು ಅರಿತ ಸಾರಿಗೆ ಇಲಾಖೆ, ಪ್ರತಿ ತಾಲ್ಲೂಕಿನಲ್ಲಿ ಕ್ಯಾಂಪ್‌ಗಳನ್ನು ಮಾಡಲು ಅವಕಾಶ ಮಾಡಿಕೊಟ್ಟಿದೆ. ತಿಂಗಳಲ್ಲಿ ಒಂದು ದಿನ ತಾಲ್ಲೂಕು ಕೇಂದ್ರಕ್ಕೆ ಇನ್‌ಸ್ಪೆಕ್ಟರ್‌ ಅಥವಾ ಎಆರ್‌ಟಿಒ ಭೇಟಿ ನೀಡಿ ಸೇವೆ ಒದಗಿಸುತ್ತಿದ್ದರು. ಹೊಸ ವಾಹನಗಳ ನೋಂದಣಿಗೆ ಇದು ನೆರವಾಗುತ್ತಿದೆ. ಆರ್‌ಟಿಒ ಕಚೇರಿಯ ಬಹುತೇಕ ಸೇವೆಗಳು ಗಣಕೀಕೃತಗೊಂಡಿದ್ದು, ಬಯೋಮೆಟ್ರಿಕ್‌, ಫೋಟೊ ಒದಗಿಸಲು ಹಾಗೂ ಉಳಿದ ಸೇವೆಗಳಿಗೆ ಆರ್‌ಟಿಒ ಕಚೇರಿಗೆ ಭೇಟಿ ನೀಡುವುದು ಅನಿವಾರ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.