ಚಿತ್ರದುರ್ಗ: ನಗರದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಬೋಧಕ ಸಿಬ್ಬಂದಿ ನೇಮಕ ಪ್ರಕ್ರಿಯೆ ನಿಯಮಾನುಸಾರ ನಡೆದಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಯುವರಾಜ್ ಸ್ಪಷ್ಟನೆ ನೀಡಿದ್ದಾರೆ.
2023ರಲ್ಲಿ ಕಾಲೇಜು ಆರಂಭಗೊಂಡಿದ್ದು, 150 ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲಾಗುತ್ತಿದೆ. ಬೋಧನೆಗೆ ಕಟ್ಟಡ, ಸಾಧನ ಸಲಕರಣೆ, ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಇಲ್ಲದ ಕಾರಣ ದಾವಣಗೆರೆ ವಿಶ್ವವಿದ್ಯಾಲಯದ ಜ್ಞಾನಗಂಗೋತ್ರಿ ಕಟ್ಟಡವನ್ನು ತಾತ್ಕಾಲಿಕವಾಗಿ ಎಂಒಯು ಮೂಲಕ ಪಡೆದುಕೊಳ್ಳಲಾಗಿದೆ. ಕೇವಲ ಐವರು ಬೋಧಕರಿದ್ದು, ಇವರಿಂದ ಬೋಧನೆ ಮಾಡಿಸಲು ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.
ಸರ್ಕಾರದಿಂದ ಬಿಡುಗಡೆಯಾದ ಅನುದಾನದಿಂದ ಪೀಠೋಪಕರಣ, ಪ್ರಯೋಗಾಲಯದ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ತರಗತಿಗಳನ್ನು ನಡೆಸಲಾಗುತ್ತಿದೆ. ಸರ್ಕಾರದ ಆದೇಶದಂತೆ ಹಾಗೂ ಮೀಸಲಾತಿ ಕೋಷ್ಠಕದ ಅನುಸಾರ ಮಂಜೂರಾದ ಹುದ್ದೆಗಳಿಗೆ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಾಪಕರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ಸ್ಥಳದ ಕೊರತೆ, ಮಾನವ ಸಂಪನ್ಮೂಲದ ಕೊರತೆ ಇದ್ದ ಕಾರಣ ದಾಖಲೆಗಳ ಪರಿಶೀಲನೆ, ಸಂದರ್ಶನ ಪ್ರಕ್ರಿಯೆಯನ್ನು ಬಿಎಂಸಿಆರ್ ಆವರಣದಲ್ಲಿ ನಡೆಸಲಾಗಿದೆ. ತಾತ್ಕಾಲಿಕ ಪಟ್ಟಿ ಪ್ರಕಟಿಸಿದ ನಂತರ ಕೆಲವರು ಆಕ್ಷೇಪಣೆ ಸಲ್ಲಿಸಿದ್ದು, ಸರ್ಕಾರದ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ. ವೈದ್ಯಕೀಯ ಶಿಕ್ಷಣ ಸಚಿವರು, ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರ ಗಮನಕ್ಕೆ ತಂದ ನಂತರ ನೇಮಕಾತಿ ಪ್ರಕ್ರಿಯೆ ನಡೆಸಲಾಗಿದೆ.
ವೈದ್ಯಕೀಯ ಶಿಕ್ಷಣ ಇಲಾಖೆ, ಸರ್ಕಾರದ ಪ್ರಧಾನ ಕಾಯದರ್ಶಿಗಳ ನೇತೃತ್ವದಲ್ಲಿ ಇನ್ನಿತರ ಸದಸ್ಯರನ್ನು ಒಳಗೊಂಡ ಸಮಿತಿಯು ಪಾರದರ್ಶಕವಾಗಿ ಸಂದರ್ಶನ ನಡೆಸಿದೆ. ಅಭ್ಯರ್ಥಿಗಳಿಗೆ ಟಿಎ, ಡಿಎ ನೀಡುವುದಾಗಿ ನೇಮಕಾತಿ ಪ್ರಕಟಣೆಯಲ್ಲೇ ತಿಳಿಸಿರಲಿಲ್ಲ. ಹೀಗಾಗಿ ಅವರಿಗೆ ಟಿಎ, ಡಿಎ ನೀಡಿಲ್ಲ ಎಂದು ಡಾ.ಯುವರಾಜ್ ಸ್ಪಷ್ಟಪಡಿಸಿದ್ದಾರೆ. ‘ಪ್ರಜಾವಾಣಿ’ಯ ಏ.22ರ ಸಂಚಿಕೆಯಲ್ಲಿ ‘ಪ್ರಾಧ್ಯಾಪಕ ಹುದ್ದೆಗೆ ₹ 50 ಲಕ್ಷ?’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.