ADVERTISEMENT

ಮೊಳಕಾಲ್ಮುರು | ಸ್ಮಾರ್ಟ್‌ ಮೀಟರ್‌ ಅಳವಡಿಕೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 7:07 IST
Last Updated 18 ಜುಲೈ 2025, 7:07 IST
ಮೊಳಕಾಲ್ಮುರಿನ ತಾಲ್ಲೂಕು ಕಚೇರಿ ಎದುರು ಬುಧವಾರ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮೊಳಕಾಲ್ಮುರಿನ ತಾಲ್ಲೂಕು ಕಚೇರಿ ಎದುರು ಬುಧವಾರ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.   

ಮೊಳಕಾಲ್ಮುರು: ರಾಜ್ಯದಲ್ಲಿ ಸ್ಮಾರ್ಟ್‌ ಮೀಟರ್‌ ಅಳವಡಿಕೆ ನಿರ್ಧಾರವನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿ ಬುಧವಾರ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ಸ್ಮಾರ್ಟ್‌ ಮೀಟರ್‌ ಅಳವಡಿಕೆಯಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವ ಜತೆಗೆ ಹೊರೆಯಾಗುತ್ತದೆ. ದುಬಾರಿ ದರದಲ್ಲಿ ಇವುಗಳನ್ನು ಕೊಳ್ಳಬೇಕಾಗುತ್ತದೆ. ಖಾಸಗಿ ಕಂಪನಿಗಳ ಜೊತೆ ಸರ್ಕಾರ ಶಾಮೀಲಾಗಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿರುವ ಅನುಮಾನವಿದೆ. ಇದರ ಪಾಪವನ್ನು ಈಗ ಜನರ ಮೇಲೆ ಹೇರಲು ಸರ್ಕಾರ ಹೊರಟಿದೆ’ ಎಂದು ಪ್ರತಿಭಟನಾಕಾರರು ದೂರಿದರು.

‘ವಿವಿಧ ಯೋಜನೆಗಳಿಂದ ಬಡವರಿಗೆ ಉಚಿತವಾಗಿ ವಿದ್ಯುತ್‌ ಪೂರೈಕೆಯಾಗುತ್ತಿದೆ. ರೈತರಿಗೆ ಕೃಷಿ ಕಾರ್ಯಕ್ಕೆ ಉಚಿತ ವಿದ್ಯುತ್‌ ಸಿಗುತ್ತಿದೆ. ಸ್ಮಾರ್ಟ್‌ ಮೀಟರ್‌ ಹಾಕಿದಲ್ಲಿ ಮುಂಚಿತವಾಗಿ ಹಣ ಪಾವತಿ ಮಾಡಿ ವಿದ್ಯುತ್‌ ಬಳಸುವ ಸ್ಥಿತಿ ಎದುರಾಗುತ್ತದೆ. ಆದ್ದರಿಂದ ಯಾವ ಕಾರಣಕ್ಕೂ ಯೋಜನೆ ಜಾರಿಗೆ ತರಬಾರದು’ ಎಂದು ಮನವಿ ಮಾಡಿದರು.

ADVERTISEMENT

‘ಮಾರುಕಟ್ಟೆಯಲ್ಲಿ ₹ 2,450ಕ್ಕೆ ಸಿಗುವ ಸ್ಮಾರ್ಟ್‌ ಮೀಟರ್‌ನ್ನು ₹ 8,800ಕ್ಕೆ ಸರ್ಕಾರ ಖರೀದಿ ಮಾಡಲು ಮುಂದಾಗಿದೆ. ಈ ಪ್ರಸ್ತಾವನೆ ಕೈಬಿಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿ ಮನವಿಯನ್ನು ಸಲ್ಲಿಸಲಾಯಿತು.

ರೈತ ಸಂಘದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಸೂರಮ್ಮನಹಳ್ಳಿ ರಾಜಣ್ಣ, ಮರ್ಲಹಳ್ಳಿ ರವಿಕುಮಾರ್‌, ಟಿ. ಚಂದ್ರಣ್ಣ, ತಿಮ್ಮಪ್ಪ, ನಿಂಗಣ್ಣ, ಮುತ್ತಯ್ಯ, ಈರಣ್ಣ, ವೀರಣ್ಣ, ಮಂಜಣ್ಣ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.