ADVERTISEMENT

ಮೊಳಕಾಲ್ಮುರು | ಸರಣಿ ಮನೆ ಕಳವು ಪ್ರಕರಣ: 28 ವರ್ಷಗಳ ಬಳಿಕ ಸೆರೆಸಿಕ್ಕ ಆರೋಪಿ

​ಪ್ರಜಾವಾಣಿ ವಾರ್ತೆ
Published 5 ಮೇ 2025, 16:09 IST
Last Updated 5 ಮೇ 2025, 16:09 IST
ಕಳವು ಪ್ರಕರಣ ಸಂಬಂಧ 28 ವರ್ಷಗಳ ಬಳಿಕ ಆರೋಪಿ ಮಾರುತಿ (ಎಡದಿಂದ ನಾಲ್ಕನೇ ವ್ಯಕ್ತಿ)ಯನ್ನು ಮೊಳಕಾಲ್ಮುರು ಪೊಲೀಸರು ಬಂಧಿಸಿರುವುದು
ಕಳವು ಪ್ರಕರಣ ಸಂಬಂಧ 28 ವರ್ಷಗಳ ಬಳಿಕ ಆರೋಪಿ ಮಾರುತಿ (ಎಡದಿಂದ ನಾಲ್ಕನೇ ವ್ಯಕ್ತಿ)ಯನ್ನು ಮೊಳಕಾಲ್ಮುರು ಪೊಲೀಸರು ಬಂಧಿಸಿರುವುದು   

ಮೊಳಕಾಲ್ಮುರು: ಪಟ್ಟಣದಲ್ಲಿ ಹಲವು ವರ್ಷಗಳ ಹಿಂದೆ ನಡೆದಿದ್ದ ಮನೆಗಳ ಸರಣಿ ಕಳ್ಳತನ ಪ್ರಕರಣದ ಆರೋಪಿಯನ್ನು ಸ್ಥಳೀಯ ಪೊಲೀಸರು ಪತ್ತೆ ಹಚ್ಚುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.

ಇಲ್ಲಿನ ತಿಲಕ್‌ ನಗರದ ನಿವಾಸಿ ಮಾರುತಿ ಬಂಧಿತ ಆರೋಪಿ. ಈತ 27 ವರ್ಷಗಳ ಹಿಂದೆ ಬೆಲೆಬಾಳುವ ರೇಷ್ಮೆಸೀರೆ, ಬೆಳ್ಳಿ ವಸ್ತುಗಳು, ನಗದು ಕಳವು ಮಾಡಿದ್ದು, ಇದು ಪೊಲೀಸರಿಗೆ ಗೊತ್ತಾಗಿದೆ ಎಂಬುದು ಗಮನಕ್ಕೆ ಬಂದ ತಕ್ಷಣ ಊರು ಬಿಟ್ಟು ಹೋಗಿದ್ದ.

ಊರು ಬಿಟ್ಟ ನಂತರ ಮೊಳಕಾಲ್ಮುರಿಗೆ ಬಂದಿರಲಿಲ್ಲ. ಸಂಬಂಧಿಕರು, ಸ್ನೇಹಿತರನ್ನೂ ಸಂಪರ್ಕಿಸಿರಲಿಲ್ಲ. ಆದಕಾರಣ ಆರೋಪಿ ಮಾರುತಿ ಬಂಧನ  ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಆದರೆ, ನ್ಯಾಯಾಲಯವು ಆರೋಪಿಯನ್ನು ಪತ್ತೆ ಮಾಡುವಂತೆ ಪೊಲೀಸರಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪತ್ತೆ ಕಾರ್ಯಾಚರಣೆ ಕೈಗೊಂಡಿದ್ದರು.

ADVERTISEMENT

ಸಾಮಾಜಿಕ ಜಾಲತಾಣದಲ್ಲಿ ಆರೋಪಿ ಪತ್ನಿ ಇರುವ ಮಾಹಿತಿ ಪಡೆದ ಪೊಲೀಸರು ವಿವರ ಕಲೆ ಹಾಕಿ ಮಡಿಕೇರಿಗೆ ಹೋಗಿ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಷ್ಟೊಂದು ಸುಧೀರ್ಷ ಅವಧಿಯ ಆರೋಪಿಯನ್ನು ಬಂಧಿಸಿರುವುದು ಇಲ್ಲಿನ ಪೊಲೀಸ್‌ ಠಾಣೆ ಇತಿಹಾಸದಲ್ಲಿ ಇದು ಪ್ರಥಮ ಎನ್ನಲಾಗಿದೆ.

ಇಲ್ಲಿಂದ ನೆರೆಯ ಬಳ್ಳಾರಿಗೆ ಹೋಗಿ, ಅಲ್ಲಿಂದ ಬೆಂಗಳೂರಿಗೆ ಹೋಗಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ನಂತರ ಮಡಿಕೇರಿಗೆ ಹೋಗಿ ಹಲವು ವರ್ಷಗಳಿಂದ ಚಾಲಕ ವೃತ್ತಿ ಮಾಡಿಕೊಂಡು ವಾಸವಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಡಿವೈಎಸ್‌ಪಿ ರಾಜಣ್ಣ, ಸಿಪಿಐ ವಸಂತ್‌ ವಿ., ಆಸೋದೆ ನೇತೃತ್ವದಲ್ಲಿ ಪಿಎಸ್‌ಐಗಳಾದ ಈರೇಶ್‌, ಪಾಂಡುರಂಗಪ್ಪ ಅವರ ತಂಡ ಕಾರ್ಯಾಚರಣೆ ನಡೆಸಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್‌ ಬಂಡಾರು ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.