ADVERTISEMENT

ಬ್ರಹ್ಮಗಿರಿ ಬೆಟ್ಟ: ಉತ್ಖನನದಲ್ಲಿ 58 ಮಾದರಿ ಪತ್ತೆ!

78 ವರ್ಷಗಳ ನಂತರ ಭಾರತ–ಅಮೇರಿಕ ಜಂಟಿ ಕಾರ್ಯಾಚರಣೆ

ಕೊಂಡ್ಲಹಳ್ಳಿ ಜಯಪ್ರಕಾಶ
Published 13 ಮಾರ್ಚ್ 2025, 7:34 IST
Last Updated 13 ಮಾರ್ಚ್ 2025, 7:34 IST
ಮೊಳಕಾಲ್ಮುರು ತಾಲ್ಲೂಕಿನ ಬ್ರಹ್ಮಗಿರಿಯಲ್ಲಿ ನಡೆಯುತ್ತಿರುವ ಉತ್ಖನನದಲ್ಲಿ ಪಾಲ್ಗೊಂಡಿರುವ ತಜ್ಞರು
ಮೊಳಕಾಲ್ಮುರು ತಾಲ್ಲೂಕಿನ ಬ್ರಹ್ಮಗಿರಿಯಲ್ಲಿ ನಡೆಯುತ್ತಿರುವ ಉತ್ಖನನದಲ್ಲಿ ಪಾಲ್ಗೊಂಡಿರುವ ತಜ್ಞರು   

ಮೊಳಕಾಲ್ಮುರು: ಜಿಲ್ಲೆಯ ಪ್ರಸಿದ್ಧ ಪ್ರಾಗೈತಿಹಾಸಿಕ ಸ್ಥಳ ಎಂದು ಗುರುತಿಸಿಕೊಂಡಿರುವ ತಾಲ್ಲೂಕಿನ ಬ್ರಹ್ಮಗಿರಿ ಬೆಟ್ಟದಲ್ಲಿ ಮಾನವ ಸಂಸ್ಕೃತಿ ನಡೆದು ಬಂದ ಹಾದಿಯನ್ನು ಸಾಕ್ಷೀಕರಿಸಲು ಹೊಸದಾಗಿ ಉತ್ಖನ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.

ಶಿಲಾಯುಗ ಅವಧಿಯಲ್ಲಿ ಇಲ್ಲಿ ಮಾನವನ ನೆಲೆ ಇತ್ತು ಎನ್ನುವುದು ಈಗಾಗಲೇ ಇತಿಹಾಸದಲ್ಲಿ ದಾಖಲಾಗಿದೆ. 1947ರಲ್ಲಿ ಪುರಾತತ್ವ ಶಾಸ್ತ್ರಜ್ಞ ಮಾರ್ಟಿಮರ್ ವೀಲರ್‌ ಅವರು ಸಂಶೋಧನೆ ಕೈಗೊಂಡಿದ್ದರು. ನಂತರ ಬಿ.ಎಲ್.‌ ರೈಸ್‌ ಸಂಶೋಧನೆ ಮಾಡಿದ್ದರು. ಇತ್ತೀಚಿನ ದಿನಗಳಲ್ಲಿ, ಸಂಶೋಧಕರಾದ ಡಾ. ಲಕ್ಷಣ್‌ ತೆಲಗಾವಿ, ರಾಜಶೇಖರಪ್ಪ ಅವರೂ ಬೆಳಕು ಚೆಲ್ಲಿದ್ದಾರೆ.

ನಡೆದಿರುವ ಸಂಶೋಧನೆಗಳು, ಲಭ್ಯವಿದ್ದ ತಾಂತ್ರಕತೆಯನ್ನು ಬಳಸಿಕೊಂಡು ಅಧ್ಯಯನ ಮಾಡಲಾಗಿದೆ. ಇನ್ನೂ ಅನೇಕ ವಿಷಯಗಳು ಅನಾವರಣವಾಗಿಲ್ಲ ಎಂಬ ಕಾರಣಕ್ಕೆ, ಭಾರತ ಮತ್ತು ಅಮೆರಿಕದ ಸಂಶೋಧಕರು ಜಂಟಿಯಾಗಿ 78 ವರ್ಷಗಳ ನಂತರ ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಉತ್ಖನನ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಸಾಕಷ್ಟು ವಿಸ್ಮಯಕಾರಿ ಸಂಗತಿಗಳು ಬಯಲಿಗೆ ಬರುವ ನಿರೀಕ್ಷೆಯಿದೆ ಎಂದು ಪುರಾರತ್ವ ಇಲಾಖೆ ಅಧಿಕಾರಿಗಳು ಹೇಳಿದರು.

ADVERTISEMENT

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತು ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಕಂದಾಯ ಇಲಾಖೆಗಳು ಈ ಕಾರ್ಯವನ್ನು ಕೈಗೆತ್ತಿಕೊಂಡಿವೆ. ಪುರಾತತ್ವ ಇಲಾಖೆಯ ಅಧೀಕ್ಷಕ ಬಿಪಿನ್‌ ಚಂದ್ರ ಅವರು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ. ಜನವರಿ 20ರಂದು ಉತ್ಖನ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಮಾರ್ಚ್ 25‌ರವರೆಗೆ ನಡೆಯಲಿದೆ. ಏಪ್ರಿಲ್‌ ನಂತರ 2ನೇ ಹಂತದ ಉತ್ಖನನ ಕಾರ್ಯ ಆರಂಭವಾಗಲಿದೆ. ಮೂರು ಸ್ಥಳದಲ್ಲಿ ಪ್ರತ್ಯೇಕವಾಗಿ ಉತ್ಖನನ ನಡೆಸಲಾಗುತ್ತಿದೆ ಎಂದು ಪುರಾತತ್ವ ಇಲಾಖೆಯ ಅಧಿಕಾರಿ ರಾಘವೇಂದ್ರ ಮಾಹಿತಿ ನೀಡಿದರು.

ಶಿಲಾಯುಗದಲ್ಲಿ ಬ್ರಹ್ಮಗಿರಿ ಬೆಟ್ಟದ ಸುತ್ತಮುತ್ತ, ರೊಪ್ಪ ಸಮೀಪದ ಬೆಟ್ಟಗುಡ್ಡಗಳಲ್ಲಿ ಜನವಸತಿ ಇತ್ತು ಎನ್ನಲಾಗಿದೆ. ಈಗ ನಡೆದಿರುವ ಸಂಶೋಧನೆಗಳಲ್ಲಿ ಇದು ಸಾಬೀತಾಗಿದ್ದು ಇದರ ನಿಖತರೆಯನ್ನು ಇನ್ನಷ್ಟು ಅರಿಯಲು ಆಧುನಿಕ ಉಪಕರಣಗಳನ್ನು ಬಳಸಲಾಗುತ್ತಿದೆ. ಆಗ ಜನರು ಬಳಸುತ್ತಿದ್ದರು ಎನ್ನಲಾದ ಕೆಂಪು, ಕಪ್ಪು ಬಣ್ಣದ ಮಡಿಕೆಗಳ ತುಂಡು, ಆಯುಧಗಳ ತುಂಡು, ಪ್ರಾಣಿಗಳ ಮೂಳೆ, ಬಣ್ಣದ ಚಿತ್ರಣವಿರುವ ಮಡಿಕೆ ತುಂಡು, ಕುಸರಿ ಮಾಡಿದ ಮಣ್ಣಿನ ಪಾತ್ರೆಯ ತುಂಡು, ಬೂದಿಗುಡ್ಡೆ ಕುರುಹು, ಬಿಳಿ ಕಲ್ಲು, ಕೆಂಪು ಕಲ್ಲಿನಲ್ಲಿ ಮಾಡಿರುವ ಮಣಿಗಳು ಸೇರಿದಂತೆ 58 ಬಗೆಯ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದರು.

‘ಸಿಗುವ ಪ್ರತಿ ವಸ್ತುವಿನ ಸಂಗ್ರಹಣೆಯನ್ನು ತಾಂತ್ರಿಕವಾಗಿ ಮಾಡುವ ಜತೆಗೆ ವಿಡಿಯೊ ಚಿತ್ರೀಕರಣ ಮಾಡಿ ದಾಖಲೀಕರಣ ಮಾಡಲಾಗುತ್ತಿದೆ. ಜನವಸತಿ ಎಷ್ಟು ವರ್ಷದ ಹಿಂದೆ ಇತ್ತು, ಯಾವ ತರಹದ ಜೀವನಶೈಲಿ ಹೊಂದಿದ್ದರು, ಬಳಕೆ ಮಾಡುತ್ತಿದ್ದ ಸಾಮಗ್ರಿಗಳು, ಆಹಾರ ಪದ್ಧತಿ ಸೇರಿ ಅನೇಕ ವಿಷಯಗಳಲ್ಲಿ ಸ್ಪಷ್ಟತೆ ಸಿಗುವ ನಿರೀಕ್ಷೆ ಇದೆ. ಸಿಕ್ಕಿರುವ ಮಾಹಿತಿಯನ್ನು ಈಗ ಹಂಚಿಕೊಳ್ಳುವಂತಿಲ್ಲ. ಸಂಶೋಧನೆ ಪೂರ್ಣಗೊಂಡ ಬಳಿಕ ಬಹಿರಂಗಪಡಿಸಲಾಗುವುದು’ ಎಂದು ತಿಳಿಸಿದರು.

ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಪುರಾತತ್ವ ಶಾಸ್ತ್ರಜ್ಞರಾದ ವೀರರಾಘವನ್‌, ಆರ್.‌ ರಮೇಶ್‌, ವಿನುರಾಜ್‌, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಆಸ್ಟಿನ್‌ ಚಾಡ್‌ಹಿಲ್‌, ಸಿ.ಎಸ್.‌ ಅಂಬಿಲಿ, ಮೋರಿಯಾ ಮೆಕೆನ್ನಾ, ಜನ್ನಿಫರ್‌ ಫೆಂಗ್‌ ತಂಡದಲ್ಲಿದ್ದಾರೆ.

ಮಾಹಿತಿ ಕೊರತೆ...

‘ತಾಲ್ಲೂಕಿನಲ್ಲಿ ಇಷ್ಟೊಂದು ಐತಿಹ್ಯವಿದ್ದರೂ ಇದನ್ನು ಸರಿಯಾಗಿ ಬಿಂಬಿಸುವ ಕೆಲಸವಾಗುತ್ತಿಲ್ಲ. ಕೊನೆಪಕ್ಷ ನಮ್ಮ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಇಲ್ಲಿನ ಐತಿಹ್ಯ ತಿಳಿಸುವ ಕೆಲಸವಾಗಿಲ್ಲ. ಈ ಬಗ್ಗೆ ಅರಿವು ಮೂಡಿಸಿದಲ್ಲಿ ನಮ್ಮ ತಾಲ್ಲೂಕಿನ ಜನರಲ್ಲಿ ಹೆಮ್ಮೆಯ ಭಾವನೆ ಮೂಡಲಿದೆ. ಜನಪ್ರತಿನಿಧಿಗಳು ಸಂಘ–ಸಂಸ್ಥೆಗಳು ಶಿಕ್ಷಣ ಇಲಾಖೆ ಈ ಕಾರ್ಯಕ್ಕೆ ಕೈಜೋಡಿಸಬೇಕು’ ಎಂದು ಸಾಹಿತಿ ರಾಜು ಸೂಲೇನಹಳ್ಳಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.