ADVERTISEMENT

ಅವ್ಯವಹಾರ ನಡೆದಿದ್ದರೆ ತನಿಖೆ ಕೈಗೊಳ್ಳಲಿ

ಅನಾಥ ಸೇವಾಶ್ರಮದ ಎದುರು ಧರಣಿ; ಸಮಿತಿ ಉಪಾಧ್ಯಕ್ಷ ರಾಘವೇಂದ್ರ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 16:14 IST
Last Updated 6 ಜೂನ್ 2025, 16:14 IST

ಚಿತ್ರದುರ್ಗ: ‘ಹೊಳಲ್ಕೆರೆ ತಾಲ್ಲೂಕು ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದ ವಿರುದ್ಧ ಕೆಲವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರಸ್ಟಿಗಳ ಚಾರಿತ್ರ್ಯ ಹರಣ ಮಾಡುತ್ತಿದ್ದಾರೆ. ಸೇವಾಶ್ರಮದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಸರ್ಕಾರ ಯಾವುದೇ ತನಿಖೆ ಕೈಗೊಂಡರೂ ಅದಕ್ಕೆ ನಾವು ಸಹಕಾರ ನೀಡುತ್ತೇವೆ’ ಎಂದು ಅನಾಥ ಸೇವಾಶ್ರಮ ವಿಶ್ವಸ್ತ ಸಮಿತಿ ಉಪಾಧ್ಯಕ್ಷ, ಸಾಹಿತಿ ರಾಘವೇಂದ್ರ ಪಾಟೀಲ ಹೇಳಿದರು.

‘ತಮಗೆ ಟ್ರಸ್ಟ್‌ನ ಸದಸ್ಯತ್ವ ಸಿಕ್ಕಿಲ್ಲ ಎಂಬ ಕಾರಣಕ್ಕೆ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ. ದುರಾಡಳಿತದ ಆರೋಪ ಮಾಡುತ್ತಿದ್ದಾರೆ. ಆ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಒತ್ತಾಸೆ ಇದೆ. ಆಶ್ರಮದ ಬಳಿ ಕೆಲವೇ ಕೆಲವು ಮಂದಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದು ಅವರ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾಗಿವೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಹಿಂದಿನ ಅಧ್ಯಕ್ಷರ ನಿರ್ಗಮನದ ನಂತರ ಎರಡೂವರೆ ವರ್ಷಗಳಿಂದ ಅಧ್ಯಕ್ಷ ಸ್ಥಾನ ಖಾಲಿ ಉಳಿದಿತ್ತು. ಈಚೆಗೆ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಜಾತ್ಯತೀತ ಆದರ್ಶದ ಹಿನ್ನೆಲೆಯ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರನ್ನು ಅನಾಥ ಸೇವಾಶ್ರಮದ ಟ್ರಸ್ಟಿಯಾಗಲು ಆಹ್ವಾನಿಸಿ ಅವರನ್ನು ಒಪ್ಪಿಸಿದ್ದೇವೆ. ನಂತರ ಅವರನ್ನು ಟ್ರಸ್ಟ್‌ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದೇವೆ. ಟ್ರಸ್ಟ್‌ ಸದಸ್ಯರನ್ನು ನೇಮಿಸಿಕೊಳ್ಳುವ, ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಪರಮಾಧಿಕಾರಿ ಸರ್ವಸದಸ್ಯರ ಸಭೆಗಿದೆ’ ಎಂದರು.

ADVERTISEMENT

‘ರಾಘವೇಂದ್ರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ 2023–24ನೇ ಸಾಲಿನಲ್ಲಿ ಪ್ರವೇಶವಿಲ್ಲದೇ ನಷ್ಟ ಉಂಟಾಗಿತ್ತು. ಅದರ ನಡುವೆಯೂ ನಿಯಮಾನುಸಾರ ಮೂಲ ಸೌಲಭ್ಯ ಒದಗಿಸಿ ಶಿಸ್ತಬದ್ಧವಾಗಿ ಕಾಲೇಜು, ಆಸ್ಪತ್ರೆ ನಡೆಯುವಂತೆ ನೋಡಿಕೊಂಡಿದ್ದೇವೆ. ಹೀಗಾಗಿ 2024–25ನೇ ಸಾಲಿನ ಬಿಎಎಂಎಸ್‌ ಪರೀಕ್ಷೆಯಲ್ಲಿ 6 ರ‍್ಯಾಂಕ್‌ ಬಂದಿವೆ. ಆಶ್ರಮದ ಅಂಗಸಂಸ್ಥೆ ಮೈಸೂರಿನ ಶ್ರೀ ಗುರುಕುಲ ಪಿಯು ಕಾಲೇಜು ದುಃಸ್ಥಿತಿಗೆ ತಲುಪಿತ್ತು. 2024ರಿಂದ ಇಂಟಿಗ್ರೇಟೆಡ್‌ ಬೋಧನಾ ವ್ಯವಸ್ಥೆ ಅಳವಡಿಸಿಕೊಂಡ ನಂತರ ಫಲಿತಾಂಶ ಸುಧಾರಿಸಿದೆ. ಒಂದು ರ‍್ಯಾಂಕ್‌ ಕೂಡ ಬಂದಿದೆ’ ಎಂದರು.

‘ಈಗ ಮುಷ್ಕರ ನಡೆಸುತ್ತಿರುವ ಕೆಲವರು ಟ್ರಸ್ಟಿಗಳನ್ನಾಗಿ ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದರು. ಅವರ ಒತ್ತಾಯಕ್ಕೆ ನಾವು ಮಣೆ ಹಾಕಿಲ್ಲ, ಉತ್ತಮರಿಗೆ ಮಾತ್ರ ಅವಕಾಶ ನೀಡಿದ್ದೇವೆ. ಅವರು ಆಶ್ರಮದ ಕಾಲೇಜಿನಲ್ಲಿ ಓದಿದ್ದಾರೆ, ಆದರೆ ಇಲ್ಲಿಯವರೆಗೂ ಅವರು ಕಾಲೇಜು ಶುಲ್ಕ ಪಾವತಿಸಿಲ್ಲ. ಆಶ್ರಮದ ಜಮೀನು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದರೂ ಒಪ್ಪಂದದ ಹಣ ಪಾವತಿಸಿಲ್ಲ’ ಎಂದರು.

‘ಸದಸ್ಯತ್ವ ನೀಡಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಆಶ್ರಮದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಸಭೆ, ಸಮಾರಂಭಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಜೊತೆಗೆ ನಮ್ಮ ಸಹಿಯನ್ನೂ ನಕಲು ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇಂಥವರ ವಿರುದ್ಧ ಈಗಾಗಲೇ ಪೊಲೀಸ್‌ ಠಾಣೆಗೆ ದೂರು ನೀಡಿದ್ದೇವೆ’ ಎಂದರು.

ಸಮಿತಿ ಕಾರ್ಯದರ್ಶಿ, ಮಾಜಿ ಶಾಸಕ ಎಸ್‌.ಕೆ.ಬಸವರಾಜನ್‌, ಖಜಾಂಚಿ ಜಿ.ಎನ್‌.ಮಲ್ಲಿಕಾರ್ಜುನಪ್ಪ, ಪದಾಧಿಕಾರಿಗಳಾದ ಪ್ರಕಾಶ್‌, ಪಾಂಡುರಂಗಮೂರ್ತಿ, ರವಿ, ರಾಮದಾಸ್‌, ಶ್ರೀಕಂಠಮೂರ್ತಿ, ಸೊಂಡೆಕೊಳ ಶ್ರೀನಿವಾಸ್‌, ಕೆಂಗುಂಟೆ ಜಯಣ್ಣ, ಶಿವರಾಮಯ್ಯ ಇದ್ದರು.

ಎಸ್‌.ಕೆ.ಬಸವರಾಜನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.