ADVERTISEMENT

ಝಡ್‌ಎಕೆ ಆ್ಯಪ್: ಸಂಸದರಿಂದ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 14:06 IST
Last Updated 10 ಆಗಸ್ಟ್ 2020, 14:06 IST
ರಾಜ್ಯ ಮೃಗಾಲಯ ಪ್ರಾಧಿಕಾರದ ನೂತನ ಜೆಡ್‌ಎಕೆ (ZAK) ಆ್ಯಪ್ ಅನ್ನು ಸೋಮವಾರ ಸಂಸದ ಎ.ನಾರಾಯಣಸ್ವಾಮಿ ಬಿಡುಗಡೆಗೊಳಿಸಿದರು
ರಾಜ್ಯ ಮೃಗಾಲಯ ಪ್ರಾಧಿಕಾರದ ನೂತನ ಜೆಡ್‌ಎಕೆ (ZAK) ಆ್ಯಪ್ ಅನ್ನು ಸೋಮವಾರ ಸಂಸದ ಎ.ನಾರಾಯಣಸ್ವಾಮಿ ಬಿಡುಗಡೆಗೊಳಿಸಿದರು   

ಚಿತ್ರದುರ್ಗ: ಮೃಗಾಲಯ ವೀಕ್ಷಣೆಗೆ ಟಿಕೆಟ್ ಕಾಯ್ದಿರಿಸುವಿಕೆ ಹಾಗೂ ಪ್ರಾಣಿಗಳ ದತ್ತು ಸ್ವೀಕಾರ ಸಂಬಂಧ ರಾಜ್ಯ ಮೃಗಾಲಯ ಪ್ರಾಧಿಕಾರದ ನೂತನ ಝಡ್‌ಎಕೆ (ZAK) ಆ್ಯಪ್ ಅನ್ನು ಸೋಮವಾರ ಸಂಸದ ಎ.ನಾರಾಯಣಸ್ವಾಮಿ ಬಿಡುಗಡೆಗೊಳಿಸಿದರು.

ಆ್ಯಪ್‌ ಸಂಬಂಧ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಮಾಹಿತಿಯನ್ನು ಹಂಚಿಕೊಂಡರು.

‘ಪ್ರಸ್ತುತ ದಿನಗಳಲ್ಲಿ ಆನ್‌ಲೈನ್‌ ತಂತ್ರಜ್ಞಾನ ಬಳಸುವವರ ಸಂಖ್ಯೆ ಅಧಿಕವಾಗುತ್ತಿದೆ. ದತ್ತು ಹಾಗೂ ದೇಣಿಗೆ ನೀಡಲು ಇಚ್ಛಿಸುವವರು ಪ್ರಾಧಿಕಾರದ ಆ್ಯಪ್‌ ಬಳಸಿ ನೆರವು ನೀಡಬಹುದು. ಅಭಿವೃದ್ಧಿ ದೃಷ್ಟಿಯಿಂದಲೂ ಇದು ಸಹಕಾರಿ. ಅಲ್ಲದೆ, ಅನೇಕರಿಗೆ ಆ್ಯಪ್ ಉಪಯುಕ್ತವಾಗಲಿದೆ’ ಎಂದು ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ADVERTISEMENT

ಉಪಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್ ನಾಯ್ಕ್, ‘ಕೋವಿಡ್ ನಿಯಂತ್ರಣ ಸಂಬಂಧ ಸರತಿ ಸಾಲಿನಲ್ಲಿ ಹೆಚ್ಚಿನ ಜನರು ನಿಲ್ಲಬಾರದು ಎಂಬುದು ಇಲಾಖೆಯ ಉದ್ದೇಶ. ಅದಕ್ಕಾಗಿ ಮೃಗಾಲಯ ವೀಕ್ಷಿಸಲು ಬರುವಂಥ ಪ್ರವಾಸಿಗರಿಗೆ, ಪ್ರಾಣಿ-ಪಕ್ಷಿ ಪ್ರಿಯರಿಗೆ, ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಆ್ಯಪ್ ಮೂಲಕ ಟಿಕೆಟ್‍ ಕಾಯ್ದಿರಿಸಿ ನೇರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತಿದೆ’ ಎಂದರು.

ದೇಣಿಗೆ ನೀಡಲು ಮನವಿ: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಘವೇಂದ್ರ, ‘ಕೋವಿಡ್‍ನಿಂದಾಗಿ ಮೃಗಾಲಯ ವೀಕ್ಷಿಸುವ ಪ್ರವಾಸಿಗರ ಸಂಖ್ಯೆ ಇಳಿಕೆಯಾಗಿದೆ. ಇದರಿಂದಾಗಿ ಮೃಗಾಲಯ ನಿರ್ವಹಣಾ ವೆಚ್ಚ ಹೆಚ್ಚಾಗಿ, ಆರ್ಥಿಕ ಸಂಕಷ್ಟ ಎದುರಾಗಿದೆ. ನಿತ್ಯ ಪ್ರಾಣಿಗಳಿಗೆ ಆಹಾರ ಒದಗಿಸಲು ₹1 ಲಕ್ಷದಿಂದ ₹ 2 ಲಕ್ಷದ ವರೆಗೆ ಖರ್ಚಾಗುತ್ತದೆ. ಹೊಸ ಪ್ರಾಣಿಗಳನ್ನು ಇಲ್ಲಿಗೆ ತರಲು ತೊಂದರೆ ಆಗುತ್ತಿದೆ. ಹೀಗಾಗಿ ಪ್ರಾಣಿ-ಪಕ್ಷಿ ಪ್ರಿಯರು ದತ್ತು ಸ್ವೀಕಾರ ಹಾಗೂ ದೇಣಿಗೆ ನೀಡುವ ಮೂಲಕ ಸಹಕರಿಸಿ’ ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಟಿ.ಯೊಗೇಶ್, ವಲಯ ಅರಣ್ಯಧಿಕಾರಿ ವಸಂತ್‌ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.