ADVERTISEMENT

ಮತದಾನ ಜಾಗೃತಿ ಮೂಡಿಸಿದ ಶರಣರು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 17:02 IST
Last Updated 10 ಏಪ್ರಿಲ್ 2019, 17:02 IST
ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತದಾನದ ಬಗ್ಗೆ ಬುಧವಾರ ಜಾಗೃತಿ ಜಾಥಾ ನಡೆಸಿದರು
ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತದಾನದ ಬಗ್ಗೆ ಬುಧವಾರ ಜಾಗೃತಿ ಜಾಥಾ ನಡೆಸಿದರು   

ಚಿತ್ರದುರ್ಗ: ಲೋಕಸಭಾ ಚುನಾವಣೆಗೆ ಏ.18ರಂದು ನಡೆಯಲಿರುವ ಮತದಾನದಲ್ಲಿ ತಪ್ಪದೇ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವವನ್ನು ಸಬಲಗೊಳಿಸುವಂತೆ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸಾರ್ವಜನಿಕರಲ್ಲಿ ಬುಧವಾರ ಮನವಿ ಮಾಡಿದರು.

‘ನಮ್ಮ ನಡಿಗೆ ಮತದಾನ ಜಾಗೃತಿ ಕಡೆಗೆ’ ಜಾಥಾಗೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಮೀಪ ಶರಣರು ಚಾಲನೆ ನೀಡಿದರು. ಗಾಂಧಿವೃತ್ತ, ಸಂತೆಹೊಂಡದ ರಸ್ತೆ, ಮೆದೇಹಳ್ಳಿ ರಸ್ತೆ, ಬಂಬೂ ಡಿಪೊವರೆಗೂ ಜಾಥಾ ಸಾಗಿತು. ಸಾರ್ವಜನಿಕರು, ವ್ಯಾಪಾರಸ್ಥರು, ಕಾರ್ಮಿಕರು, ಪ್ರಯಾಣಿಕರು ಹಾಗೂ ಮಹಿಳೆಯರಿಗೆ ಕರಪತ್ರ ನೀಡಿ ಮತ ಚಲಾಯಿಸಲು ತಿಳಿಸಲಾಯಿತು.

‘ಏ.18ರಂದು ಮತದಾನ ಮಾಡುವುದನ್ನು ಮರೆಯಬೇಡಿ. ಬೆಳಿಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನಕ್ಕೆ ಅವಕಾಶವಿದೆ. ಬಿಡುವು ಮಾಡಿಕೊಂಡು ಮತಗಟ್ಟೆಗೆ ಭೇಟಿ ನೀಡಿ. ಯೋಗ್ಯರಿಗೆ ಮತ ಹಾಕಿ’ ಎಂದು ಶರಣರು ತಿಳಿ ಹೇಳಿದರು.

ADVERTISEMENT

ಜಾಥಾದಲ್ಲಿ ಭಾಗವಹಿಸಿದ್ದ ಎಸ್‌ಜೆಎಂ ದಂತ ಮಹಾವಿದ್ಯಾಲಯ ವಿದ್ಯಾರ್ಥಿಗಳು ಹಿಡಿದಿದ್ದ ‘ಎಲ್ಲವನ್ನು ಬದಿಗಿಡಿ ಮೊದಲು ಮತದಾನ ಮಾಡಿ’, ‘ಮತ ಚಲಾಯಿಸಿ ಮತದ ಮೌಲ್ಯ ಉಳಿಸಿ’ ನಾಮಫಲಕಗಳು ಗಮನಸೆಳೆದವು.

ಅಥಣಿಯ ಶಿವಬಸವಸ್ವಾಮೀಜಿ, ಹಾವೇರಿಯ ಬಸವಶಾಂತಲಿಂಗ ಸ್ವಾಮೀಜಿ, ಚಳ್ಳಕೆರೆಯ ಬಸವಕಿರಣ ಸ್ವಾಮೀಜಿ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಕ ನಿರ್ದೇಶಕರಾದ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಡಾ.ಈ. ಚಿತ್ರಶೇಖರ್, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ನಿರಂಜನಮೂರ್ತಿ, ರುದ್ರಾಣಿ ಗಂಗಾಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.