ADVERTISEMENT

‘ಸಹಜ ಹೆರಿಗೆ ಸೇವೆ’ ನೀಡಿದರೂ ‘ಅಸಹಜ’ ಬದುಕು

ಶತಾಯುಷಿ ಸೂಲಗಿತ್ತಿಗೆ ತೆಂಗಿನ ಜೋಪಡಿಯೇ ಗತಿ; ಪತಿ, ಮಕ್ಕಳಿಬ್ಬರನ್ನೂ ಕಳೆದುಕೊಂಡಿರುವ ತಿಮ್ಮಜ್ಜಿ

ಶಿವಗಂಗಾ ಚಿತ್ತಯ್ಯ
Published 21 ಮೇ 2025, 6:44 IST
Last Updated 21 ಮೇ 2025, 6:44 IST
ಚಳ್ಳಕೆರೆ ತಾಲ್ಲೂಕಿನ ಕಾಲುವೆಹಳ್ಳಿ ಗ್ರಾಮದ ಶತಾಯುಷಿ ಸೂಲಗಿತ್ತಿ ತಳುಕಿನ ತಿಮ್ಮಜ್ಜಿಗೆ ವಾಸಕ್ಕೆ ಜೋಡಿಯೇ ಆಧಾರ
ಚಳ್ಳಕೆರೆ ತಾಲ್ಲೂಕಿನ ಕಾಲುವೆಹಳ್ಳಿ ಗ್ರಾಮದ ಶತಾಯುಷಿ ಸೂಲಗಿತ್ತಿ ತಳುಕಿನ ತಿಮ್ಮಜ್ಜಿಗೆ ವಾಸಕ್ಕೆ ಜೋಡಿಯೇ ಆಧಾರ   

ಚಳ್ಳಕೆರೆ: ಗ್ರಾಮೀಣ ಪ್ರದೇಶದ ನೂರಾರು ಮಹಿಳೆಯರಿಗೆ ‘ಸಹಜ ಹೆರಿಗೆ ಸೇವೆ’ ನೀಡಿ ಮನೆ ಮಾತಾಗಿರುವ ತಾಲ್ಲೂಕಿನ ಗಡಿ ಗ್ರಾಮ ಕಾಲುವೆಹಳ್ಳಿಯ ಶತಾಯುಷಿ,ಸೂಲಗಿತ್ತಿ, ತಳುಕಿನ ತಿಮ್ಮಜ್ಜಿ ಅವರಿಗೆ ಸ್ವಂತಕ್ಕೆ ಸೂರಿಲ್ಲದ ಕಾರಣ ತೆಂಗಿನ ಗರಿ ಜೋಪಡಿಯೇ ಗತಿಯಾಗಿದೆ.

ಪತಿ ಮತ್ತು ಹೆತ್ತ ಮಕ್ಕಳಿಬ್ಬರನ್ನೂ ಕಳೆದುಕೊಂಡಿರುವ ಅಜ್ಜಿ ಈಗ ಮೊಮ್ಮಗಳು ಪಾಲಕ್ಕನ ಆಶ್ರಯದಲ್ಲಿದ್ದಾರೆ. ಅವರಿಗೆ ಈಗ 103 ವರ್ಷ ವಯಸ್ಸು. ಖಾಲಿ ನಿವೇಶನದಲ್ಲಿ ನಿರ್ಮಿಸಿಕೊಂಡ ಗುಡಿಸಲಲ್ಲೇ ದಿನ ದೂಡುತ್ತಿದ್ದಾರೆ. ತಾಲ್ಲೂಕಿನ ಯಾದಲಗಟ್ಟೆ, ಗೌಡರಹಟ್ಟಿ ಕ್ಯಾತಗೊಂಡನಹಳ್ಳಿ, ಕಾಲುವೆಹಳ್ಳಿ, ಹಾಲಗೊಂಡನಹಳ್ಳಿ, ನಾಗಗೊಂಡನಹಳ್ಳಿ, ದೊಡ್ಡಉಳ್ಳಾರ್ತಿ, ಜಾಜೂರು, ಪಗಡಲಬಂಡೆ ಮುಂತಾದ ಗ್ರಾಮಗಳ ಮಹಿಳೆಯರಿಗೆ ಇವರು ಅನೇಕ ವರ್ಷಗಳ ಕಾಲ ‘ಸಹಜ ಹೆರಿಗೆ ಸೇವೆ’ ನೀಡಿದ್ದಾರೆ. ಅದೂ ಯಾವುದೇ ಫಲಾಪೇಕ್ಷೆಯಿಲ್ಲದೆ.

ಮಗ ಕಾಯಿಲೆಯಿಂದ ಬಳಲುವಾಗ ಅವರನ್ನು ಉಳಿಸಿಕೊಳ್ಳಲು ಇದ್ದ ಎರಡು ಎಕರೆ ಜಮೀನನ್ನೂ ಕಳೆದುಕೊಂಡಿರುವ ಇವರಿಗೀಗ ಈಗ ಕಣ್ಣು ಕಾಣುವುದಿಲ್ಲ, ಕಿವಿ ಕೇಳಿಸುವುದಿಲ್ಲ. ಗ್ರಾಮ ಪಂಚಾಯಿತಿ ನೀಡಿರುವ ಖಾಲಿ ನಿವೇಶನ ಬಿಟ್ಟರೆ ಈ ಅಜ್ಜಿಯ ಹೆಸರಿಗೆ ಏನೂ ಇಲ್ಲ.

ADVERTISEMENT

ವಾಸಕ್ಕೆ ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿದ್ದ ತೆಂಗಿನ ಗರಿ ಜೋಡಿ ಅಲ್ಲಲ್ಲಿ ಕಿತ್ತು ಹೋಗಿದೆ. ಅಲ್ಪ ಪ್ರಮಾಣದ ಮಳೆ ಬಿದ್ದರೆ ಸಾಕು ಜೋಪಡಿ ಸೋರುತ್ತದೆ. ಮಳೆ ಬಂದಾಗ ಅಜ್ಜಿ ಮತ್ತು ಮೊಮ್ಮಗಳು ಟಾರ್ಪಲ್ ಹೊದ್ದು ನಿದ್ದೆ ಇಲ್ಲದೆ ಇಡೀ ರಾತ್ರಿ ಕಳೆಯುವ ಪರಿಸ್ಥಿತಿ ಇದೆ. ಅಜ್ಜಿ ಜೀವನಕ್ಕೆ ಸರ್ಕಾರದ ಪಡಿತರ ಅಕ್ಕಿ , ಗೃಹಲಕ್ಷ್ಮಿ, ವೃದ್ಧಾಪ್ಯ ವೇತನ ಊರು ಗೋಲಾಗಿದೆ. ಸೂಲಗಿತ್ತಿ ಸೇವೆ ಪಡೆದವರು ಮತ್ತು ಗ್ರಾಮಾಡಳಿತದವರೂ ಅಜ್ಜಿ ವಾಸದ ಬಗ್ಗೆ ಗಮನ ಹರಿಸಿಲ್ಲ.

‘ನಮ್ಮ ಅಜ್ಜಿಯಿಂದ ಹೆರಿಗೆ ಮಾಡಿಸುವುದನ್ನು ಕಲಿತೆ. ದಿನ ತುಂಬಿದ ಮೇಲೆ ಗರ್ಭಿಣಿಯರಿಗೆ ನೋವು ಕಾಣಿಸಿಕೊಂಡ ತಕ್ಷಣ ಮನೆಗೆ ಬಂದು ಹೆರಿಗೆ ಮಾಡಿಸಲು ನನ್ನನ್ನು ಪ್ರೀತಿಯಿಂದ ಕರೆದುಕೊಂಡು ಹೋಗುತ್ತಿದ್ದರು. ಅಜ್ಜಿಯಿಂದಲೇ ನನಗೂ ಬಂದ ಕಾಯಕವನ್ನು ಪ್ರೀತಿಯಿಂದ ಮಾಡಿದ್ದೇನೆ. ನೋವಾಗದಂತೆ ಹೆರಿಗೆ ಮಾಡಿಸಿ 5—6 ದಿನ ಬಾಣಂತಿ ಮತ್ತು ಕೂಸಿಗೆ ಬಿಸಿನೀರು ಎರೆದು, ಎಣ್ಣೆ ಸ್ನಾನ ಮಾಡಿಸಿ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದೆ. ಮರಳುವಾಗ ಆ ಮನೆಯವರು ಪ್ರೀತಿಯಿಂದ ನೀಡಿದ ದವಸ- ಧಾನ್ಯ, ಬಟ್ಟೆಯಂಥ ಉಡುಗೊರೆ ಪಡೆಯುತ್ತಿದ್ದೆ. ಗ್ರಾಮದಲ್ಲಿ ಏನೂ ಇಲ್ಲ’ ಎಂದು ತಿಪ್ಪಜ್ಜಿ ಕಣ್ಣೀರಿಟ್ಟರು.

ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣವೇ ಸ್ವಲ್ಪ ಹೊತಿನಲ್ಲಿಯೇ ಸಹಜ ಹೆರಿಗೆ ಮಾಡಿಸುವ ಕಲೆ ಈ ಅಜ್ಜಿಗೆ ಕರಗತ. ಕೈಗೆ ಹರಳೆಣ್ಣೆ ಹಚ್ಚಿಕೊಂಡು ಅನಾಯಾಸ ಅನ್ನಿಸುವಷ್ಟರ ಮಟ್ಟಿಗೆ ಮಗುವನ್ನು ಹೊರತೆಗೆದು ಬಿದಿರ ಮೊರದಲ್ಲಿ ಹಾಕಿ ತೋರಿಸಿದ ನೆನಪು ಇನ್ನೂ ಮಾಸಿಲ್ಲ’ ಎನ್ನುತ್ತಾರೆ ಗ್ರಾಮದ ಮಹಿಳೆ ರಮ್ಯಾ.

‘ಗ್ರಾಮೀಣ ಭಾಗದಲ್ಲಿ ನೂರಾರು ಮಹಿಳೆಯರಿಗೆ ಸಹಜ ಹೆರಿಗೆ ಸೇವೆ ನೀಡಿರುವ ಈ ತಿಮ್ಮಜ್ಜಿಗೆ ಮನೆ ನಿರ್ಮಿಸಿ ಕೊಡುವುದರ ಜತೆಗೆ ಮೂಲ ಸೌಲಭ್ಯ ಒದಗಿಸಬೇಕು’ ಎಂದು ಜಿಲ್ಲಾ ನವ ಜಾಗೃತಿ ಯುವ ವೇದಿಕೆ ಸದಸ್ಯರು ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳನ್ನು ಒತ್ತಾಯಿಸಿದೆ.

‘ಸಹಜ ಹೆರಿಗೆ ಸೇವೆ’ಯನ್ನು ಗುರುತಿಸಿ ಈಚೆಗೆ ಬೆಂಗಳೂರು ಪ್ರೆಸ್‍ ಕ್ಲಬ್ ತಿಮ್ಮಜ್ಜಿಗೆ ಕರ್ನಾಟಕ ಮಹಿಳಾ ರತ್ನ ರಾಜ್ಯ ಪ್ರಶಸ್ತಿ, ಮತ್ತು ಚಳ್ಳಕೆರೆ ಶ್ರೀಶಾರಾಶ್ರಮ, ಆಹಾರ ಧಾನ್ಯದ ಕಿಟ್ ಮತ್ತು ಹಾಸಿಗೆ ಹೊದಿಕೆ ವಿತರಿಸಿ ಸನ್ಮಾನಿಸಿದೆ.

ಚಳ್ಳಕೆರೆ ತಾಲ್ಲೂಕಿನ ಕಾಲುವೆಹಳ್ಳಿ ಗ್ರಾಮದ ಶತಾಯುಷಿ ಸೂಲಗಿತ್ತಿ ತಳುಕಿನ ತಿಮ್ಮಜ್ಜಿಗೆ ವಾಸಕ್ಕೆ ಜೋಪಡಿಯೇ ಆಧಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.