ಚಿತ್ರದುರ್ಗ: ವಾಲ್ಮೀಕಿ ಜನಾಂಗಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 7.5 ರಷ್ಟು ಮೀಸಲಾತಿ ಕಲ್ಪಿಸುವಂತೆ ಒತ್ತಡ ಹಾಕಬೇಕಿದೆ. ಕೇಂದ್ರ ಸರ್ಕಾರದಲ್ಲಿರುವ ಮೀಸಲಾತಿ ಪ್ರಮಾಣ ರಾಜ್ಯ ಸರ್ಕಾರದಲ್ಲೂ ಅನ್ವಯವಾಗಬೇಕು ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ಮಹಾರಾಣಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಾಲ್ಮೀಕಿ ಜಾತ್ರೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ 7.5 ಮೀಸಲಾತಿ ಸಂಬಂಧ ಚರ್ಚೆಸಲು ಈಚೆಗೆ ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು.
‘ರಾಮಾಯಣದ ಮೂಲ ಪುರುಷ ವಾಲ್ಮೀಕಿ. ರಾಮ ಮಂದಿರದ ಆವರಣದಲ್ಲಿ ವಾಲ್ಮೀಕಿ ದೇವಾಲಯ ನಿರ್ಮಾಣ ಮಾಡುವುದು ಸೂಕ್ತ. ಇದ್ದರಿಂದ ವಾಲ್ಮೀಕಿ ಅವರಿಗೂ ಮನ್ನಣೆ ನೀಡಿದಂತಾಗುತ್ತದೆ. ರಾಮ ಮಂದಿರ ನಿರ್ಮಣದ ನೇತೃತ್ವ ವಹಿಸಿದವರು ಇದನ್ನು ಆಲೋಚಿಸಬೇಕು’ ಎಂದು ಸಲಹೆ ನೀಡಿದರು.
ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ಫೆ. 8 ಮತ್ತು 9ರಂದು ಆಯೋಜಿಸಿರುವ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಎಲ್ಲರೂ ಸಹಕಾರ ನೀಡಬೇಕು. ರಾಜ್ಯದ 119 ತಾಲ್ಲೂಕುಗಳಿಗೆ ಭೇಟಿ ನೀಡಿ ಜಾತ್ರಾ ಮಹೋತ್ಸವಕ್ಕೆ ಭಕ್ತರನ್ನು ಆಹ್ವಾನಿಸಲಾಗಿದೆ. ಎಲ್ಲರೂ ಸೇರಿ ವಾಲ್ಮೀಕಿ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳ್ಳಿಸಬೇಕಿದೆ. ಭಕ್ತರಿಗೆ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಜಾತ್ರಾ ಸಮಿತಿಯ ತಾಲ್ಲೂಕು ಅಧ್ಯಕ್ಷರಾಗಿ ನಿಂಗ ನಾಗತಿಹಳ್ಳಿ ತಿಪ್ಪೇಸ್ವಾಮಿ ಅವರನ್ನು ನೇಮಿಸಲಾಯಿತು. ವಾಲ್ಮೀಕಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಜೆ.ಕೃಷ್ಣಮೂರ್ತಿ, ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಕಾಂತರಾಜ್, ನಗರಸಭೆ ಸದ್ಯಸರಾದ ದೀಪು, ವೆಂಕಟೇಶ್, ನೌಕರ ಸಂಘದ ಪ್ರೊ.ಗುಡದೇಶಪ್ಪ, ಸದಾಶಿವಪ್ಪ, ರಾಜಪ್ಪ, ವಕೀಲ ಬೆಳಗಟ್ಟ ಅಶೋಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.