ADVERTISEMENT

ಒಂದೇ ಮರದಲ್ಲಿ 250 ಹಲಸಿನ ಹಣ್ಣುಗಳು !

ಪ್ರತಿ ಗೊನೆಯಲ್ಲಿ 15ರಿಂದ 20 ಹಣ್ಣು, ಬುಡದಿಂದ ತುದಿಯವರೆಗೆ ನಾಟಿ ಹಲಸು

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 4:29 IST
Last Updated 6 ಜುಲೈ 2022, 4:29 IST
ಹೊಳಲ್ಕೆರೆ ತಾಲ್ಲೂಕಿನ ಗುಡ್ಡದ ಸಾಂತೇನಹಳ್ಳಿಯ ನಾಗರಾಜ್ ಎಂಬುವರ ತೋಟದಲ್ಲಿ ಹಲಸಿನ ಹಣ್ಣುಗಳು ಬಿಟ್ಟಿರುವ ದೃಶ್ಯ.
ಹೊಳಲ್ಕೆರೆ ತಾಲ್ಲೂಕಿನ ಗುಡ್ಡದ ಸಾಂತೇನಹಳ್ಳಿಯ ನಾಗರಾಜ್ ಎಂಬುವರ ತೋಟದಲ್ಲಿ ಹಲಸಿನ ಹಣ್ಣುಗಳು ಬಿಟ್ಟಿರುವ ದೃಶ್ಯ.   

ಸಾಂತೇನಹಳ್ಳಿ ಸಂದೇಶ್‌ ಗೌಡ

ಹೊಳಲ್ಕೆರೆ: ತಾಲ್ಲೂಕಿನ ಗುಡ್ಡದ ಸಾಂತೇನಹಳ್ಳಿಯ ಟಿ. ನಾಗರಾಜಪ್ಪ ಎಂಬುವವರ ತೋಟದಲ್ಲಿನ ಹಲಸಿನ ಮರ 250ಕ್ಕೂ ಹೆಚ್ಚು ಹಣ್ಣುಗಳನ್ನು ಬಿಡುವ ಮೂಲಕ ಅಚ್ಚರಿ ಮೂಡಿಸಿದೆ.

ಈ ಮರದ ಪ್ರತಿ ಗೊನೆಯಲ್ಲಿ 15ರಿಂದ 20 ಹಣ್ಣುಗಳಿವೆ. ಇವು ಸಾಮಾನ್ಯ ಗಾತ್ರದ ಹಲಸಿನ ಹಣ್ಣುಗಳಾಗಿದ್ದು, ಹೆಚ್ಚು ಸಿಹಿ ಹೊಂದಿವೆ. ಕಾಂಡದ ತುಂಬ ಹಣ್ಣುಗಳು ಬಿಟ್ಟಿದ್ದು, ಕೆಲವು ಗೊನೆಗಳು ಕಾಂಡದಿಂದ ನೆಲಕ್ಕೆ ಸ್ಪರ್ಶಿಸಿವೆ.

ADVERTISEMENT

‘20 ವರ್ಷಗಳ ಹಿಂದೆ ಸಂತೆಯಲ್ಲಿ ತಂದ ಹಲಸಿನ ಹಣ್ಣನ್ನು ಕೊಯ್ದು ತಿಂದು ಹಿತ್ತಲಿನಲ್ಲಿ ಬೀಜ ಬಿಸಾಡಿದ್ದೆವು. ಅದರಲ್ಲಿ ಒಂದು ಗಿಡ ಹುಟ್ಟಿತ್ತು. ಅದನ್ನು ಅಲ್ಲಿಂದ ಕಿತ್ತು ಅಡಿಕೆ ತೋಟದ ಬದುವಿನಲ್ಲಿ ನೆಟ್ಟಿದ್ದೆವು. ಅದು ಮರವಾಗಿ, ಮೂರ್ನಾಲ್ಕು ವರ್ಷಗಳಿಂದ ಹಣ್ಣು ಬಿಡುತ್ತಿದೆ. ಮೊದಲ ಎರಡು ವರ್ಷ ಕಡಿಮೆ ಹಣ್ಣು ಬಿಟ್ಟಿತ್ತು. ವರ್ಷದಿಂದ ವರ್ಷಕ್ಕೆ ಹಣ್ಣುಗಳ ಸಂಖ್ಯೆ ಹೆಚ್ಚುತ್ತಿದೆ. ಯಾವ ತಳಿ ಎಂದು ಗೊತ್ತಿಲ್ಲ. ಆದರೆ, ಹಣ್ಣು ಹೆಚ್ಚು ರುಚಿಯಾಗಿದೆ. ಹಣ್ಣಿನ ತುಂಬ ತೊಳೆಗಳಿದ್ದು, ಅಕ್ಕಪಕ್ಕದ ದಳಗಳೂ ಕೂಡ ಸಿಹಿಯಾಗಿವೆ’ ಎನ್ನುತ್ತಾರೆ ರೈತ ನಾಗರಾಜಪ್ಪ.

‘ನಾವು ಹಲಸಿನ ಹಣ್ಣುಗಳನ್ನು ಮಾರಾಟ ಮಾಡುವುದಿಲ್ಲ. ನಾವು ತಿಂದು ಸಂಬಂಧಿಕರಿಗೆ, ನೆರೆಹೊರೆಯವರಿಗೆ, ಸ್ನೇಹಿತರಿಗೆ ಹಂಚುತ್ತೇವೆ. ಹಲಸಿನ ಮರ ಸುಮಾರು 50 ಅಡಿಗೂ ಹೆಚ್ಚು ಎತ್ತರ ಬೆಳೆದಿದ್ದು, ಮೇಲೆ ಬಿಟ್ಟಿರುವ ಹಣ್ಣುಗಳನ್ನು ಬಿದಿರು ಗಳದಿಂದ ಕೀಳಬಹುದು. ಆದರೆ, ಅವನ್ನು ಪಕ್ಷಿಗಳಿಗಾಗಿ ಕೀಳದೆ ಹಾಗೆಯೇ ಬಿಡುತ್ತೇವೆ. ಅವುಗಳನ್ನು ಪಕ್ಷಿಗಳು, ಕೋತಿಗಳು, ಅಳಿಲುಗಳು ತಿನ್ನುತ್ತವೆ. ಒಮ್ಮೊಮ್ಮೆ ಕರಡಿಗಳು ಕೆಳಗಿನ ಹಣ್ಣುಗಳನ್ನೂ ತಿನ್ನುತ್ತವೆ’ ಎನ್ನುತ್ತಾರೆ ಅವರು.

ಹೈಬ್ರಿಡ್ ಹಲಸು ತೊಳೆ ದಪ್ಪವಿದ್ದರೂ ರುಚಿ ಕಡಿಮೆ. ಆದರೆ, ನಮ್ಮ ತೋಟದ ನಾಟಿ ಹಲಸು ಹೆಚ್ಚು ಸಿಹಿಯಾಗಿರುತ್ತದೆ.

ಟಿ. ನಾಗರಾಜಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.