ADVERTISEMENT

ಕೆಂಪು ತೊಗರಿ ಬೆಳೆಗೆ ಹೆಚ್ಚಿದ ಕೀಟಬಾಧೆ

ಚಳ್ಳಕೆರೆ ತಾಲ್ಲೂಕಿನ ವಿವಿಧ ಗ್ರಾಮಗಳ ಬೆಳೆಗಾರರಲ್ಲಿ ಮಡುಗಟ್ಟಿದ ಆತಂಕ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 6:04 IST
Last Updated 3 ಡಿಸೆಂಬರ್ 2021, 6:04 IST
ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಿಹಳ್ಳಿ ಗ್ರಾಮದ ತೊಗರಿ ಬೆಳೆ ಹೊಲದಲ್ಲೇ ಮೊಳಕೆಯೊಡೆದಿದೆ.
ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಿಹಳ್ಳಿ ಗ್ರಾಮದ ತೊಗರಿ ಬೆಳೆ ಹೊಲದಲ್ಲೇ ಮೊಳಕೆಯೊಡೆದಿದೆ.   

ಶಿವಗಂಗಾ ಚಿತ್ತಯ್ಯ

ಚಳ್ಳಕೆರೆ: ಹವಾಮಾನ ವೈಪರೀತ್ಯದಿಂದಾಗಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಕೆಂಪು ತೊಗರಿ ಬೆಳೆಗೆ ಕೀಟಬಾಧೆ ಕಾಣಿಸಿಕೊಂಡಿದೆ.

ಮೀರಾಸಾಬಿಹಳ್ಳಿ, ನಗರಂಗೆರೆ, ಕರಿಕೆರೆ, ಕಾಲುವೆಹಳ್ಳಿ, ದೇವರಮರಿಕುಂಟೆ, ಸೂರನಹಳ್ಳಿ, ಚಿಕ್ಕೇನಹಳ್ಳಿ, ದೊಡ್ಡಉಳ್ಳಾರ್ತಿ, ನೇರಲಗುಂಟೆ, ದುರ್ಗಾವರ, ನನ್ನಿವಾಳ, ಸಾಣಿಕೆರೆ, ಜಡೇಕುಂಟೆ, ಮೈಲನಹಳ್ಳಿ, ಕಾಮಸಮುದ್ರ, ಪುರ್ಲೆಹಳ್ಳಿ ಮುಂತಾದ ಗ್ರಾಮದಲ್ಲಿ ತೊಗರಿ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ.

ADVERTISEMENT

ಬಿತ್ತನೆ ಸಂದರ್ಭದಲ್ಲಿ ವಾಯುಭಾರ ಕುಸಿತ ಹಾಗೂ ಮಳೆಯ ಕಣ್ಣಾ ಮುಚ್ಚಾಲೆಯಿಂದ ಬೆಳೆಗಿಂತ ಕಳೆಯೇ ಮುಂದಾಗಿ ಬೆಳೆದಿತ್ತು. ಈ ಕಳೆ ಬೆಳೆಗೆ ಮಾರಕವಾಗಿತ್ತು. ಹಾಗಾಗಿ ಬೆಳೆಯ ಮಧ್ಯೆ ಇದ್ದ ಕಳೆ ಕೀಳಲು ಅಧಿಕ ವೆಚ್ಚ ಮಾಡಿದ್ದರು. ಒಂದೂವರೆ ವರ್ಷದಿಂದ ಕೋವಿಡ್ ಸಂಕಷ್ಟಕ್ಕೆ ಸಿಲುಕಿದ್ದ ರೈತ, ಈ ಬಾರಿ ಸಕಾಲಕ್ಕೆ ಉತ್ತಮ ಮಳೆಯಾಗಿದ್ದರಿಂದ ಸ್ವಲ್ಪ ಆರ್ಥಿಕವಾಗಿ ಚೇತರಿಸಿಕೊಳ್ಳುವ ನಿರೀಕ್ಷೆ ಹೊಂದಿದ್ದರು.

ಆಗಸ್ಟ್-ಸೆಪ್ಟೆಂಬರ್ ನಡುವೆ ವಾಡಿಕೆ ಮಳೆಯೂ ಬೀಳಲಿಲ್ಲ. ಇದರಿಂದ ಬೆಳೆ ಕುಂಠಿತಗೊಂಡಿತ್ತು. ಆಗೊಮ್ಮೆ ಈಗೊಮ್ಮೆ ಬಿದ್ದ ಮಳೆಗೆ ಉತ್ತಮವಾಗಿ ಬೆಳೆದಿತ್ತು. ಆದರೆ, ಅಕಾಲಿಕ ಮಳೆ ಮತ್ತು ಪ್ರತಿಕೂಲ ವಾತಾವರಣದ ಪರಿಸ್ಥಿತಿಯಿಂದ ಗಿಡದಲ್ಲಿನ ಹೂವು ಉದುರುವುದರ ಜತೆಗೆ ಗಿಡದಲ್ಲಿ ಅಲ್ಲಲ್ಲಿ ಇದ್ದ ಕಾಯಿಗಳಿಗೆ ಕೀಟಬಾಧೆ ವ್ಯಾಪಕವಾಗಿ ಹರಡಿ ಬೆಳೆ ನಾಶವಾಗಿದೆ ಎಂದು ದೇವರಮರಿಕುಂಟೆ ಗ್ರಾಮದ ಬೆಳೆಗಾರ ವೀರಭದ್ರಪ್ಪ ಆತಂಕ ವ್ಯಕ್ತಪಡಿಸಿದರು.

ಬೇಸಾಯ, ಬೀಜ, ಗೊಬ್ಬರ, ಕಳೆ, ಔಷಧ, ಬೆಳೆಯ ನಿರ್ವಹಣೆಗೆ ಅಧಿಕ ವೆಚ್ಚ ಮಾಡಿ ಉತ್ತಮ ಆದಾಯ ನಿರೀಕ್ಷಿಸಲಾಗಿತ್ತು. ಹವಾಮಾನ ವೈಪರೀತ್ಯದಿಂದ ಕಂಡ ಕನಸು ಕಮರಿ ಹೋಯಿತು ಎಂದು ಬೇಸರಿಸಿದರು.

ಅಕಾಲಿಕ ಮಳೆಗೆ ಸಿಕ್ಕಿದ ಬೆಳೆಯಲ್ಲಿನ ಹೂವಿನ ರಸ ಹೀರುವ ಮತ್ತು ಕಾಯಿಕೊರಕ ಹುಳು ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ ಕೀಟನಾಶಕ ಸಿಂಪಡಣೆ ಸಾಧ್ಯವಾಗಿಲ್ಲ. ಈ ಪರಿಸ್ಥಿತಿಯ ನಡುವೆಯೂ ಉಳಿದು ಬೆಳೆದ ಮೊದಲ ಸುತ್ತಿನ ಗಿಡದ ಕಾಂಡ ಮಳೆಗೆ ನೆನೆದು ಗಿಡದಲ್ಲೇ ಕಾಳು ಮೊಳಕೆಯೊಡೆದು ಹೊಲದಲ್ಲಿನ ಇಡೀ ಬೆಳೆ ನಷ್ಟವಾಗಿದೆ. ಬೆಳೆ ನಷ್ಟ ಅನುಭವಿಸುತ್ತಿರುವ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಫಸಲ್ ಬಿಮಾ ಯೋಜನೆಯಡಿ ಹೆಚ್ಚಿನ ಬೆಳೆಪರಿಹಾರ ಒದಗಿಸಬೇಕು ಎಂದು ಮೀರಾಸಾಬಿಹಳ್ಳಿ ಸಿ. ಶಿವಲಿಂಗಪ್ಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದರು.

ಕೃಷಿ ಸಹಾಯಕ ನಿರ್ದೇಶಕ ಅಶೋಕ್, ‘ತಾಲ್ಲೂಕಿನಲ್ಲಿ 8,620 ಹೆಕ್ಟೇರ್‌ ಪ್ರದೇಶದಲ್ಲಿ ಕೆಂಪು ತೊಗರಿ ಪ್ರಧಾನವಾಗಿ ಬಿತ್ತನೆ ಮಾಡಲಾಗಿದೆ. 15-20 ದಿವಸ ಸದಾ ಮೋಡಕವಿದ ವಾತಾವರಣ ಇರುವ ಕಾರಣ ಕೆಲವೆಡೆ ತೊಗರಿ ಬೆಳೆಗೆ ಅಲ್ಲಲ್ಲಿ ಕೀಟಬಾಧೆ ಕಾಣಿಸಿಕೊಂಡಿದೆ. ಅಗತ್ಯ ಔಷಧ ಸಿಂಪಡಿಸುವಂತೆ ರೈತರಿಗೆ ಸಲಹೆ ನೀಡಲಾಗಿದೆ. ಬೆಳೆ ಸಮೀಕ್ಷೆ ಮಾಡಿಲ್ಲ. ಹೀಗಾಗಿ ಎಷ್ಟು ಪ್ರಮಾಣದ ಬೆಳೆ ಹಾನಿಯಾಗಿದೆ ಎಂದು ಈಗಲೇ ಹೇಳಲು ಆಗುವುದಿಲ್ಲ. ಮುಂದಿನ ದಿನಗಳಲ್ಲಿ ರೈತರ ಹೊಲಕ್ಕೆ ಭೇಟಿ ನೀಡಿ ಬೆಳೆ ಸಮೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.