ಹಿರಿಯೂರು: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಯಾಗುವವರೆಗೆ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿಮಾಡಬಾರದು ಎಂದು ಒತ್ತಾಯಿಸಿ ದಲಿತಪರ ಸಂಘಟನೆಗಳ ಒಕ್ಕೂಟದ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ರಾಜೇಶ್ ಕುಮಾರ್ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪನವರು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಸಚಿವ ಸಂಪುಟ ಸಭೆ ಅನುಮೋದನೆ ಪಡೆಯಲು ಕಡತ ಸಿದ್ಧ ಮಾಡಿಕೊಂಡಿದ್ದಾರೆ. ಇದು ಒಳಮೀಸಲಾತಿ ವಿರೋಧಿ ನಡೆಯಾಗಿದೆ. ಒಳಮೀಸಲಾತಿ ಜಾರಿಯಾಗುವವರೆಗೂ ಯಾವುದೇ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಬಾರದು ಎಂದು ಮಹಾನಾಯಕ ದಲಿತ ಸೇನೆ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಕೆ.ಪಿ.ಶ್ರೀನಿವಾಸ್ ಸರ್ಕಾರವನ್ನು ಆಗ್ರಹಿಸಿದರು.
ಒಳಮೀಸಲಾತಿ ಜಾರಿಗೆ ದಶಕಗಳಿಂದ ಹೋರಾಟ ನಡೆಸುತ್ತಿರುವವರ ಆಶಯಕ್ಕೆ ವಿರುದ್ಧವಾಗಿ ಸರ್ಕಾರವು ತೀರ್ಮಾನ ಕೈಗೊಂಡಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ದಲಿತಪರ ಸಂಘಟನೆಗಳ ಒಕ್ಕೂಟದಿಂದ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀನಿವಾಸ್ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕೆ.ಆರ್. ರಘುನಾಥ್, ನಾಗರಾಜ್. ಹನುಮಂತರಾಯ, ಹನುಮಂತಪ್ಪ, ಬೋರನಕುಂಟೆ ಕರಿಯಣ್ಣ, ಕದುರಪ್ಪ, ರಾಘವೇಂದ್ರ, ಶಿವು, ದೇವೇಗೌಡ, ಎಂ.ಜಗದೀಶ್, ಚಂದ್ರಣ್ಣ, ರಾಜು ದೇವರಕೊಟ್ಟ, ಎನ್.ಪರಮೇಶ್, ಮಹಾಲಿಂಗಪ್ಪ, ರಾಘವೇಂದ್ರ, ಮೈಗಣ್ಣ, ಲಕ್ಷ್ಮಿಕಾಂತ್, ರಂಗಸ್ವಾಮಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.