ADVERTISEMENT

ಎಂಟು ತಿಂಗಳಲ್ಲಿ 27 ವಿದ್ಯುತ್‌ ಅವಘಡ

ಬೆಸ್ಕಾಂ ನೌಕರರಿಗೆ ವಿದ್ಯುತ್ ಸುರಕ್ಷತಾ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 4:48 IST
Last Updated 25 ನವೆಂಬರ್ 2022, 4:48 IST
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಬೆಸ್ಕಾಂ ನೌಕರರು ವಿದ್ಯುತ್‌ ಸುರಕ್ಷತೆಯ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಬೆಸ್ಕಾಂ ನೌಕರರು ವಿದ್ಯುತ್‌ ಸುರಕ್ಷತೆಯ ಪ್ರತಿಜ್ಞಾವಿಧಿ ಸ್ವೀಕರಿಸಿದರು.   

ಚಿತ್ರದುರ್ಗ: ಪ್ರಸಕ್ತ ವರ್ಷದ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಜಿಲ್ಲೆಯಲ್ಲಿ 27 ವಿದ್ಯುತ್‌ ಅವಘಡ ಸಂಭವಿಸಿವೆ. ಹಿರಿಯೂರು ಮತ್ತು ಚಿತ್ರದುರ್ಗ ತಾಲ್ಲೂಕಿನಲ್ಲಿ ಹೆಚ್ಚು ಅವಘಡಗಳಾಗಿವೆ. ಮುಂಬರುವ ದಿನಗಳಲ್ಲಿ ಇಂತಹ ಅವಘಡ ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದು ಬೆಸ್ಕಾಂ ಮುಖ್ಯ ಎಂಜಿನಿಯರ್ ಕೆ.ವಿ. ಗೋವಿಂದಪ್ಪ ಸಲಹೆ ನೀಡಿದರು.

ನಗರದ ತರಾಸು ರಂಗಮಂದಿರದಲ್ಲಿ ಬೆಸ್ಕಾಂ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ವಿದ್ಯುತ್ ಸುರಕ್ಷತಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯುತ್ ಅವಘಡ ಆಕಸ್ಮಿಕವಾಗಿ ಸಂಭವಿಸುತ್ತವೆ. ಗಡಿಯಲ್ಲಿ ದೇಶ ಕಾಯುವ ಸೈನಿಕರಂತೆ ಬೆಸ್ಕಾಂ ನೌಕರರೂ ಸದಾ ಎಚ್ಚರಿಂದ ಇರಬೇಕು. ವಿದ್ಯುತ್‌ ಅಪಾಯದಿಂದ ಜನರನ್ನು ಕಾಪಾಡಬೇಕು. ರೈತರು, ಸಾರ್ವಜನಿಕರಿಗೆ ವಿದ್ಯುತ್‌ ಬಗ್ಗೆ ತಿಳಿವಳಿಕೆ ನೀಡಿ ಅವಘಡ ತಪ್ಪಿಸಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ವಿದ್ಯುತ್ ಕಣ್ಣಿಗೆ ಕಾಣದ ವಾಹಕ. ಇದರೊಂದಿಗೆ ಕಾರ್ಯನಿರ್ವಹಿಸುವಾಗ ಸಾಕಷ್ಟು ಎಚ್ಚರಿಕೆಯ ಅಗತ್ಯವಿದೆ. ವಿದ್ಯುತ್‌ ಮಾರ್ಗ ಪರಿಶೀಲನೆ, ದುರಸ್ತಿಗೆ ತೆರಳುವಾಗ ಕನಿಷ್ಠ ಇಬ್ಬರು ಅಥವಾ ಮೂವರು ಸಿಬ್ಬಂದಿ ಇರಬೇಕು. ಬೆಸ್ಕಾಂ ಒದಗಿಸಿರುವ ಎಲ್ಲ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ನಿಮ್ಮ ಸುರಕ್ಷತೆ, ನಿಮ್ಮ ಜೀವ, ನಿಮ್ಮ ಕೈಯಲ್ಲಿದೆ. ಇದನ್ನು ಅರಿತು ಕಾರ್ಯನಿರ್ವಹಿಸಬೇಕು’ ಎಂದರು.

‘ಇತ್ತೀಚಿನ ದಿನಗಳಲ್ಲಿ ಬೇಜಾಬ್ದಾರಿ ಹಾಗೂ ಅಜಾಗರೂಕತೆಯಿಂದಾಗಿ ವಿದ್ಯುತ್ ಅವಘಡ ಹೆಚ್ಚಾಗುತ್ತಿವೆ. ವಿದ್ಯುತ್‌ ಮಾರ್ಗಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಕೆಲಸ ಮಾಡುವಾಗ ಮಾರ್ಗವನ್ನು ವಿದ್ಯುತ್‌ ಮುಕ್ತವಾಗಿಸಿಕೊಳ್ಳಬೇಕು. ಕಡ್ಡಾಯವಾಗಿ ಅರ್ಥಿಂಗ್ ಮಾಡಿಕೊಳ್ಳಬೇಕು. ಹಗ್ಗ, ಏಣಿ, ಬೆಲ್ಟ್, ಹೆಲ್ಮೆಟ್, ಕೈಗವಸು, ಲೈನ್ ಟೆಸ್ಟರ್, ಕಟಿಂಗ್ ಪ್ಲೇಯರ್, ಅರ್ಥಿಂಗ್ ರಾಡ್ ಸೇರಿ ಇತ್ಯಾದಿ ಸುರಕ್ಷತಾ ಸಾಮಾಗ್ರಿಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು’ ಎಂದರು.

‘ವಿದ್ಯುತ್‌ ಕೆಲಸ ಮಾಡುವಾಗ ಏಕಾಗ್ರತೆ ಮುಖ್ಯ. ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುವಾಗ ಮೊಬೈಲ್ ಬಳಕೆ ಮಾಡಬಾರದು. ಯಾವುದೇ ಕಾರಣಕ್ಕೂ ಉದಾಸೀನತೆ ತೋರದೇ ತಾಳ್ಮೆಯಿಂದ ಕೆಲಸ ಮಾಡಬೇಕು. ಆಗ ಮಾತ್ರ ಇಂತಹ ಅವಘಡ ತಪ್ಪಿಸಬಹುದು’ ಎಂದು ಹೇಳಿದರು.

ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ಜಯಣ್ಣ ಮಾತನಾಡಿ, ‘ಬೆಸ್ಕಾಂ ನೌಕರರು ಸುರಕ್ಷತಾ ಸಾಮಗ್ರಿಗಳನ್ನು ಧರಿಸಿಕೊಂಡು ಕೆಲಸ ಮಾಡಬೇಕು. ಸುರಕ್ಷತಾ ವಲಯ ನಿರ್ಮಿಸಿಕೊಂಡು ಕಾರ್ಯನಿರ್ವಹಿಸುವ ಮೂಲಕ ಅಪಘಾತ ರಹಿತ ವಿಭಾಗವನ್ನಾಗಿ ಮಾಡಲು ಶ್ರಮಿಸಬೇಕು’ ಎಂದು ಹೇಳಿದರು.

ಬೆಸ್ಕಾಂ ದಾವಣಗೆರೆ ವಿಭಾಗದ ಅಧೀಕ್ಷಕ ಎಂಜಿನಿಯರ್ ಬಿ.ಎಸ್.ಜಗದೀಶ್, ಗುಣಮಟ್ಟ ಸುರಕ್ಷತಾ ಮತ್ತು ಪ್ರಮಾಣಿತ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಮತ, ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಎಂಜಿನಿಯರ್ ಶಾಜಿಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.