ADVERTISEMENT

ಅವಸಾನದ ಅಂಚಿನಲ್ಲಿ ಪಂಚಲಿಂಗ ದೇವಾಲಯ

ಪ್ರಾಚೀನ ಕಲೆ, ವಾಸ್ತುಶಿಲ್ಪದ ಕುರುಹು ರಕ್ಷಿಸಲು ಗ್ರಾಮಸ್ಥರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಮೇ 2025, 6:01 IST
Last Updated 16 ಮೇ 2025, 6:01 IST
ಅವಸಾನದ ಅಂಚಿನಲ್ಲಿರುವ ಧರ್ಮಪುರದ ಭೀಮಲಿಂಗೇಶ್ವರ ದೇವಸ್ಥಾನ
ಅವಸಾನದ ಅಂಚಿನಲ್ಲಿರುವ ಧರ್ಮಪುರದ ಭೀಮಲಿಂಗೇಶ್ವರ ದೇವಸ್ಥಾನ   

ಧರ್ಮಪುರ: ವಿಜಯನಗರ, ನೊಳಂಬ ಮತ್ತಿತರ ಅರಸರ ಭವ್ಯ ಇತಿಹಾಸ ಸಾರುವ ಅನೇಕ ಸ್ಮಾರಕಗಳು ಗ್ರಾಮದಲ್ಲಿದ್ದು, ಸಂರಕ್ಷಣೆಯ ಕೊರತೆಯಿಂದಾಗಿ ಅಳಿವಿನ ಅಂಚು ತಲುಪಿವೆ.

ಇಲ್ಲಿನ ಪಂಚಲಿಂಗ ದೇವಾಲಯ, ಉಮಾ ಮಹೇಶ್ವರಿ, ಹನುಮಂತ ಮೂರ್ತಿ ಮಠ, ಜೈನರ ಶ್ರವಣಪ್ಪನ ಏಕಶಿಲಾ ವಿಗ್ರಹ, ವೀರಗಲ್ಲು, ಮಾಸ್ತಿಗಲ್ಲುಗಳು, ಶಾಸನ ಮತ್ತು ಪ್ರಾಚೀನ ಸ್ಮಾರಕಗಳನ್ನು ಮುಂದಿನ ಪೀಳಿಗೆಗೆ ಉಳಿಸಕೊಳ್ಳಬೇಕು ಎಂಬುದು ಗ್ರಾಮಸ್ಥರ ಕೋರಿಕೆಯಾಗಿದೆ.

ಮಹಾಭಾರತ ಕಾಲದಲ್ಲಿ ಪಾಂಡವರು ವನವಾಸದಲ್ಲಿದ್ದಾಗ ಕೆಲವು ದಿನ ಇಲ್ಲಿನ ಕಾಡಿನಲ್ಲಿ ತಂಗಿದ್ದರು. ಇಲ್ಲಿರುವ ಪಂಚಲಿಂಗ ದೇವಾಲಯಗಳನ್ನು ಅವರೇ ನಿರ್ಮಿಸಿದ್ದರು ಎಂದು ಪುರಾಣ ಪ್ರತೀತಿ ಸಾರುತ್ತವೆ.

ADVERTISEMENT

ಕ್ರಿ.ಶ. 7ನೇ ಶತಮಾನದಿಂದ ಕ್ರಿ.ಶ 11ನೇ ಶತಮಾನದವರೆಗೆ ಹೇಮಾವತಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿದ ನೊಳಂಬರ ಕಾಲದಲ್ಲಿ ಧರ್ಮಪುರ ಅವರ ಪ್ರಶ್ಚಿಮ ಪ್ರಾಂತ್ಯದ ಪ್ರಮುಖ ರಾಜಧಾನಿಯಾಗಿತ್ತು.

ಧರ್ಮ ಮಹಾದೇವಿ ಆಳ್ವಿಕೆ ಮಾಡಿದ್ದರಿಂದ ‘ಧರ್ಮವೊಳಲು’ ಎಂದಾಗಿ ನಂತರ ‘ಧರ್ಮಪುರ’ ಎಂಬುದಾಗಿದೆ. ನೊಳಂಬರ ಕಾಲದಲ್ಲಿ ಪಂಚಲಿಂಗ ದೇವಾಲಯಗಳು ನಿರ್ಮಾಣಗೊಂಡಿದ್ದು ಎಂದೂ ಇತಿಹಾಸದಿಂದ ತಿಳಿದುಬರುತ್ತದೆ. ಈ ಪೈಕಿ ಧರ್ಮಪುರ ಕೆರೆಯ ಏರಿಯ ಮೇಲೆ ಪಿ.ಡಿ. ಕೋಟೆ ಹತ್ತಿರ ಇರುವ ಭೀಮಲಿಂಗೇಶ್ವರ ದೇವಾಲಯ ಸಂಪೂರ್ಣವಾಗಿ ಶಿಥಿಲವಾಗಿದ್ದು, ಬಿದ್ದು ಹೋಗುವ ಸ್ಥಿತಿಯಲ್ಲಿದೆ.

ಪಂಚಲಿಂಗ ದೇವಾಲಯಗಳಾದ ಧರ್ಮರಾಯ, ಅರ್ಜುನ, ನಕುಲ ಮತ್ತು ಸಹದೇವ ದೇವಾಲಯಗಳಲ್ಲಿ ಆಕರ್ಷಕ ಲಿಂಗಗಳು ಮತ್ತು ಎದುರಿಗೆ ನಂದಿ ವಿಗ್ರಹಗಳನ್ನು ಕಾಣಬಹುದು. ಭೀಮಲಿಂಗೇಶ್ವರ ದೇವಸ್ಥಾನದ ಕಂಬಗಳು ಆಕರ್ಷಕ ಕೆತ್ತನೆಗಳಿಂದ ಕೂಡಿದ್ದು, ಇತಿಹಾಸ ಆಸಕ್ತರಿಗೆ ಮತ್ತು ಸಂಶೋಧನಾ ಆಸಕ್ತರಿಗೆ ಉಪಯುಕ್ತ ಮಾಹಿತಿ ನೀಡುತ್ತದೆ. ಆದರೆ, ಈ ದೇವಾಲಯದಲ್ಲಿನ ಶಿವಲಿಂಗ ಮತ್ತು ನಂದಿ ವಿಗ್ರಹಗಳು ಕಳುವಾಗಿದ್ದು, ಈಗ ಬಿಕೋ ಎನ್ನುತ್ತಿದೆ. ದೇವಾಲಯದ ಕಂಬಗಳು ವಾಲಿರುವುದರಿಂದ ದೇವಸ್ಥಾನ ಶಿಥಿಲಾವಸ್ಥೆ ತಲುಪಿದೆ.

ಜೀರ್ಣೋದ್ಧಾರ:

ಸ್ಥಳೀಯ ಯುವಕರು ಧರ್ಮರಾಯ, ಅರ್ಜುನ, ನಕುಲ, ಸಹದೇವ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡುವ ಮೂಲಕ ಸಂರಕ್ಷಣೆ ಕಾರ್ಯ ಕೈಗೊಂಡಿದ್ದಾರೆ. ಆದರೆ, ಭೀಮಲಿಂಗೇಶ್ವರ ದೇವಾಲಯ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಇದರಿಂದ ಈ ದೇವಾಲಯ ಜೂಜಾಡುವವರ ಮತ್ತು ಅನೈತಿಕ ಚಟುವಟಿಕೆ ನಡೆಸುವವರ ಅಡ್ಡೆಯಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.

‘ಹೊಸ ವರ್ಷ ಬಂತೆಂದರೆ ಶಾಲೆಯಲ್ಲಿನ ವಿದ್ಯಾರ್ಥಿಗಳನ್ನು ಇಲ್ಲಿನ ಶಿಕ್ಷಕರು ಭೀಮಲಿಂಗೇಶ್ವರ ದೇವಸ್ಥಾನಕ್ಕೆ ಪೂಜೆ ಮಾಡಿಸಲು ಕರೆದುಕೊಂಡು ಬರುತ್ತಿದ್ದರು. ಕೆಲವೊಮ್ಮೆ ಹೊರ ಸಂಚಾರಕ್ಕೂ ಇಲ್ಲಿಗೆ ಬರುತ್ತಿದ್ದೆವು. ಆದರೆ, ದೇವಸ್ಥಾನದ ಈಗಿನ ಸ್ಥಿತಿ ನೋಡಿದರೆ ತುಂಬಾ ವ್ಯಥೆಯಾಗುತ್ತದೆ’ ಎಂದು ಧರ್ಮಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶಿವಣ್ಣ ಬೇಸರ ವ್ಯಕ್ತಪಡಿಸಿದರು.

‘ಧರ್ಮಪುರ ಐತಿಹಾಸಿಕ ಕಣಜ. ಇಲ್ಲಿರುವ ಪ್ರಾಚ್ಯವಸ್ತುಗಳನ್ನೂ, ಪುರಾತನ ಸ್ಮಾರಕಗಳನ್ನು ಸಂರಕ್ಷಿಸಬೇಕಾದುದ್ದು ನಮ್ಮೆಲ್ಲರ ಕರ್ತವ್ಯ. ಸರ್ಕಾರ ಐದು ದೇವಾಲಯಗಳನ್ನು ಮುಜರಾಯಿ ಇಲಾಖೆಗೆ ವಹಿಸಿಕೊಂಡು ಜೀರ್ಣೋದ್ಧಾರ ಮಾಡಬೇಕು’ ಎಂದು ಗ್ರಾಮದ ಅಭಿಲಾಶ್, ಚಂದ್ರಮೌಳಿ ಒತ್ತಾಯಿಸಿದರು.

ಅವಸಾನದ ಅಂಚಿನಲ್ಲಿರುವ ಧರ್ಮಪುರದ ಭೀಮಲಿಂಗೇಶ್ವರ ದೇವಸ್ಥಾನ
ಧರ್ಮರಾಯ ದೇವಸ್ಥಾನದಲ್ಲಿನ ಲಿಂಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.