ADVERTISEMENT

ಇನ್ನು ಮುಂದೆ ಕ್ರಾಂತಿಕಾರಿ ಹೋರಾಟ: ಜಯಮೃತ್ಯುಂಜಯ ಸ್ವಾಮೀಜಿ

ಕೋಟೆನಾಡು ಪ್ರವೇಶಿಸಿದ ಪಂಚಮಸಾಲಿ ಮೀಸಲಾತಿ ಪಾದಯಾತ್ರೆಗೆ ಪೂರ್ಣಕುಂಬ ಸ್ವಾಗತ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 5:44 IST
Last Updated 1 ಫೆಬ್ರುವರಿ 2021, 5:44 IST
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಕೂಡಲಸಂಗಮದಿಂದ ಬೆಂಗಳೂರಿಗೆ ಸಾಗುತ್ತಿರುವ ಪಂಚಲಕ್ಷ ಹೆಜ್ಜೆ ಪಾದಯಾತ್ರೆ ಭಾನುವಾರ ಕೋಟೆ ಜಿಲ್ಲೆ ಪ್ರವೇಶಿಸಿತು
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಕೂಡಲಸಂಗಮದಿಂದ ಬೆಂಗಳೂರಿಗೆ ಸಾಗುತ್ತಿರುವ ಪಂಚಲಕ್ಷ ಹೆಜ್ಜೆ ಪಾದಯಾತ್ರೆ ಭಾನುವಾರ ಕೋಟೆ ಜಿಲ್ಲೆ ಪ್ರವೇಶಿಸಿತು   

ಭರಮಸಾಗರ: ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಭಾನುವಾರ ಚಿತ್ರದುರ್ಗ ಜಿಲ್ಲೆ ಪ್ರವೇಶಿಸಿತು.

ಭರಮಸಾಗರ ಸಮೀಪದ ಹೆಬ್ಬಾಳು ಗ್ರಾಮದಿಂದ ಪಾದಯಾತ್ರೆ ಮುಂದುವರಿಸಿ ಎಮ್ಮೇಹಟ್ಟಿಯಲ್ಲಿ ಉಪಾಹಾರ ಸ್ವೀಕರಿಸಿದ ನಂತರ ಭರಮಸಾಗರಕ್ಕೆ ಬಂದಿತು. ಬೈಪಾಸ್ ರಸ್ತೆಯ ಈದ್ಗಾ ಮೈದಾನದ ಬಳಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಗೆ ಮಾಲಾರ್ಪಣೆಯೊಂದಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಮಹಿಳೆಯರು ಪೂರ್ಣಕುಂಭದೊಂದಿಗೆ ಪಾದಯಾತ್ರೆಯನ್ನು ಪಟ್ಟಣದೊಳಗೆ ಬರಮಾಡಿಕೊಂಡರು.

ಹೋಬಳಿಯ ಸುತ್ತಲಿನ ಗ್ರಾಮಗಳಿಂದ ಬಂದ ಸಮಾಜದ ಯುವಕರು ‘ಹರ ಹರ ಪಂಚಮಸಾಲಿ’ ಎಂದು ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಪಾದಯಾತ್ರೆಯ ಮುಂದೆ ಕೀಲುಕುದುರೆ, ಗೊಂಬೆ ಕುಣಿತ, ಡೊಳ್ಳು, ಉರಿಮೆ, ಕಹಳೆ ವಾದನಗಳು ಮೆರುಗು ತಂದವು. ಯುವಕರು ಸಮಾಜದ ಲಾಂಛನದ ಕೇಸರಿ ಧ್ವಜಗಳನ್ನು ಬೀಸುತ್ತಾ ನಡೆದರು.

ADVERTISEMENT

ವಿನಾಯಕ ಚಿತ್ರಮಂದಿರದ ವೃತ್ತದಿಂದ ಪಟ್ಟಣದ ಬಿದರಿಕೆರೆ ರಸ್ತೆ, ದೊಡ್ಡಪೇಟೆ, ವಾಸವಿಮಹಲ್
ರಸ್ತೆ, ಆಸ್ಪತ್ರೆ ರಸ್ತೆ, ಶಿವಕುಮಾರ ಸ್ವಾಮೀಜಿ ರಸ್ತೆ ಮೂಲಕ ಹಳೆ ರಾಷ್ಟ್ರೀಯ ಹೆದ್ದಾರಿ ಬಳಿಯ ಎಸ್‌ಎಂಎಲ್ ಮೋಟರ್ಸ್‌ವರೆಗೆ ಮೆರವಣಿಗೆ ಸಾಗಿತು. ದಾರಿಯುದ್ದಕ್ಕೂ ಭಕ್ತರು ಸ್ವಾಮೀಜಿಗೆ ಪುಷ್ಪಮಾಲೆ ಹಾಕಿ ಭಕ್ತಿ ಸಮರ್ಪಿಸಿದರು. ಭಾನುವಾರ ಪಟ್ಟಣದಲ್ಲಿ ವಾಸ್ತವ್ಯ ಹೂಡಲಿದ್ದು, ಸೋಮವಾರ ಸಿರಿಗೆರೆ ವೃತ್ತದ ಮೂಲಕ ಪಾದಯಾತ್ರೆ ಸಾಗಿ ಲಕ್ಷ್ಮೀಸಾಗರದಲ್ಲಿ ವಾಸ್ತವ್ಯ ಮಾಡಲಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ‘ಇಲ್ಲಿಯವರೆಗೆ ಶಾಂತಿ, ಸಹನೆ, ಪ್ರೀತಿಯಿಂದ 2ಎ ಮೀಸಲಾತಿ ಕೇಳಿದ್ದೇವೆ. ಇನ್ನು ಮುಂದೆ ಕ್ರಾಂತಿಯ ಮೂಲಕ ಕೇಳುತ್ತೇವೆ. ಜಿಲ್ಲಾ ಕೇಂದ್ರಕ್ಕೆ ಪಾದಯಾತ್ರೆ ತಲುಪುವ ಮೊದಲು 2ಎ ಘೋಷಣೆ ಮಾಡಬೇಕು. ಇಲ್ಲದೇ ಹೋದರೆ ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳಲಿದೆ’ ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎನ್. ತಿಪ್ಪೇಸ್ವಾಮಿ, ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶೆಪ್ಪನವರ್, ಸಿದ್ದಬಸಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.