ADVERTISEMENT

ಚಿತ್ರದುರ್ಗ | ಬಸ್‌ ‘ಟಾಪ್‌’ ಪ್ರಯಾಣ; ಜೀವದ ಜೊತೆ ಚೆಲ್ಲಾಟ

ಜಿಲ್ಲೆಯಾದ್ಯಂತ ಜೀವ ತೆಗೆಯುತ್ತಿವೆ ಖಾಸಗಿ ಬಸ್‌ಗಳು, ಕಣ್ಣು ಮುಚ್ಚಿ ಕುಳಿತ ಆರ್‌ಟಿಒ ಅಧಿಕಾರಿಗಳು

ಎಂ.ಎನ್.ಯೋಗೇಶ್‌
Published 30 ಜೂನ್ 2025, 6:30 IST
Last Updated 30 ಜೂನ್ 2025, 6:30 IST
ಚಿತ್ರದುರ್ಗ ಆರ್‌ಟಿಒ ಕಚೇರಿಯ ಕೂಗಳತೆ ದೂರದಲ್ಲೇ ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಲು ಟಾಪ್‌ ಮೇಲೆ ಹತ್ತುತ್ತಿರುವುದು
ಚಿತ್ರದುರ್ಗ ಆರ್‌ಟಿಒ ಕಚೇರಿಯ ಕೂಗಳತೆ ದೂರದಲ್ಲೇ ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಲು ಟಾಪ್‌ ಮೇಲೆ ಹತ್ತುತ್ತಿರುವುದು   

ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಜೀವಕ್ಕೆ ಬೆಲೆಯೇ ಇಲ್ಲದಂತಾಗದೆ. ಹಣದ ಆಸೆಗಾಗಿ ಖಾಸಗಿ ಬಸ್‌ ಸಿಬ್ಬಂದಿ ಬಸ್‌ ಮೇಲೆ (ಟಾಪ್‌) ಪ್ರಯಾಣಿಕರನ್ನು ಕೂರಿಸಿಕೊಂಡು ಓಡಾಡುತ್ತಿದ್ದು ಮುಗ್ಧ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.

ಜಿಲ್ಲೆಯ ವಿವಿಧ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಇಲ್ಲ. ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶವಿದ್ದರೂ ಬಸ್‌ ಸೇವೆ ಇಲ್ಲದ ಕಾರಣ ಖಾಸಗಿ ಬಸ್‌ಗಳಲ್ಲೇ ಓಡಾಡುವ ಅನಿವಾರ್ಯತೆ ಇದೆ. ಜಿಲ್ಲೆಯ ನೂರಾರು ಹಳ್ಳಿಗಳಿಗೆ ಇಂದಿಗೂ ಬಸ್‌ ಸಂಪರ್ಕವೇ ಇಲ್ಲ ಎಂಬುದು ಆಶ್ಚರ್ಯ ಎನಿಸಿದರೂ ಸತ್ಯ. ಸಾರಿಗೆ ಸಂಸ್ಥೆ ಬಸ್‌ಗಳಿಲ್ಲದ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳಲ್ಲೇ ಜನರು ಓಡಾಡಬೇಕಾಗಿದೆ.

ರಸ್ತೆ ಸುರಕ್ಷತಾ ನಿಯಮ ಉಲ್ಲಂಘನೆ ಮಾಡುತ್ತಿರುವ ಖಾಸಗಿ ಬಸ್‌ಗಳ ಸಿಬ್ಬಂದಿ ಮಿತಿಗಿಂತ ಹೆಚ್ಚು ಜನರನ್ನು ದನಗಳಂತೆ ತುಂಬಿಕೊಂಡು ಓಡಾಡುತ್ತಿದ್ದಾರೆ. ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಓಡಾಡುವ ಬಸ್‌ಗಳು ಕೂಡ ಜನರನ್ನು ಬಸ್‌ ಮೇಲೆ ಕೂರಿಸುತ್ತಾರೆ. ನಗರ ಪ್ರವೇಶಿಸುತ್ತಿದ್ದಂತೆ ಮೇಲಿದ್ದ ಜನರನ್ನು ಬಸ್‌ನ ಒಳಗೆ ಕೂರಿಸುತ್ತಾರೆ. ಕೆಲವು ಮಾರ್ಗಗಳಲ್ಲಿ ಜನರು ನೇತಾಡಿಕೊಂಡು ಪ್ರಯಾಣ ಮಾಡುತ್ತಾರೆ.

ADVERTISEMENT

ಇಂತಹ ಅವ್ಯವಸ್ಥೆಗೆ ಅಂತ್ಯವಾಡಬೇಕಾದ ಆರ್‌ಟಿಒ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ. ಖಾಸಗಿ ಬಸ್‌ಗಳು ಮೇಲೆ ಕೂರಿಸಿಕೊಂಡು ಓಡಾಡುತ್ತಿರುವ ವಿಷಯ ಆರ್‌ಟಿಒ ಅಧಿಕಾರಿಗಳಿಗೆ ಗೊತ್ತಿಲ್ಲ ಎಂದೇನಿಲ್ಲ. ಗೊತ್ತಿದ್ದರೂ ಅವರು ಕ್ರಮ ಜರುಗಿಸುವುದಿಲ್ಲ. ಆರ್‌ಟಿಒ ಕಚೇರಿಯಿಂದ ಕೂಗಳತೆ ದೂರದಲ್ಲಿರುವ ತುರುವನೂರು ಕಡೆ ಓಡಾಡುವ ಖಾಸಗಿ ಬಸ್‌ಗಳು ಮೇಲೆ ಕೂರಿಸಿಕೊಂಡು ಓಡಾಡುತ್ತವೆ

ತುರುವನೂರು, ನಾಯಕನಹಟ್ಟಿ ಕಡೆಯಿಂದ ಬರುವ ಬಸ್‌ಗಳು ಆರ್‌ಟಿಒ ಕಚೇರಿಗೆ 100 ಮೀಟರ್‌ ವ್ಯಾಪ್ತಿಯ ತುರುವನೂರು ರಸ್ತೆಯ ಹೆದ್ದಾರಿ ಬ್ರಿಜ್‌ ಸಮೀಪದಲ್ಲೇ ಪ್ರಯಾಣಿಕರನ್ನು ಇಳಿಸುತ್ತವೆ. ಅಲ್ಲೊಬ್ಬರು ಟ್ರಾಫಿಕ್‌ ಪೊಲೀಸ್‌ ಕೂಡ ಕರ್ತವ್ಯದಲ್ಲಿರುತ್ತಾರೆ. ಅವರ ಕಣ್ಣ ಮುಂದೆಯೇ ಬಸ್‌ಗಳ ಮೇಲೆ ಪ್ರಯಾಣಿಕರು ಕುಳಿತಿದ್ದರೂ ಪೊಲೀಸ್‌ ಸಿಬ್ಬಂದಿ ತುಟಿ ಬಿಚ್ಚುವುದಿಲ್ಲ. ಈಚೆಗೆ ಯುವಕನೊಬ್ಬ ಬಸ್‌ ಮೇಲಿಂದ ಇಳಿಯುವಾಗ ಮೆಟ್ಟಿಲು ಜಾರಿ ಗಾಯಗೊಂಡಿದ್ದಾರೆ. ಇಷ್ಟಾದರೂ ಪೊಲೀಸರಾಗಲೀ, ಆರ್‌ಟಿಒ ಅಧಿಕಾರಿಗಳಾಗಲೀ ಯಾವುದೇ ಕ್ರಮ ಕೈಗೊಂಡಿಲ್ಲ.

‘ಬಹುತೇಕ ಮಾರ್ಗಗಳಿಗೆ ಚಿತ್ರದುರ್ಗದಿಂದ ಸಾರಿಗೆ ಸಂಸ್ಥೆ ಬಸ್‌ಗಳಿಲ್ಲ. ಹೀಗಾಗಿ ಜನರು ಖಾಸಗಿ ಬಸ್‌ಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಶಕ್ತಿ ಯೋಜನೆಯಿಂದ ಪ್ರಯಾಣಿಕರಿಲ್ಲ ಎಂದು ಖಾಸಗಿ ಬಸ್‌ ಸಿಬ್ಬಂದಿ ಗೋಳಿಡುತ್ತಾರೆ, ಆದರೆ ಅದು ನಿಜವಲ್ಲ. ಚಳ್ಳಕೆರೆ, ಬಳ್ಳಾರಿ ಕಡೆಗೆ ಓಡಾಡುವ ಯಾವ ಬಸ್‌ ಕೂಡ ಖಾಲಿ ಓಡಾಡುವುದಿಲ್ಲ. ಮಿತಿ ಮೀರಿ ಬಸ್‌ ಮೇಲೂ ಪ್ರಯಾಣಿಕರನ್ನು ಕೂರಿಸಿಕೊಂಡು ಓಡಾಡುತ್ತಾರೆ. ಇದಕ್ಕೆ ಆರ್‌ಟಿಒ ಅಧಿಕಾರಿಗಳ ಕಡಿವಾಣ ಇಲ್ಲವಾಗಿದೆ’ ಎಂದು ನಗರದ ಕೆ.ಶಿವಶಂಕರ ರೆಡ್ಡಿ ಹೇಳಿದರು.

ಎಲ್ಲೆಲ್ಲಿ ಸಾರಿಗೆ ಬಸ್‌ ಇಲ್ಲ: ಹಿರಿಯೂರು ತಾಲ್ಲೂಕಿನಲ್ಲೂ ಇದೇ ಪರಿಸ್ಥಿತಿ ಇದೆ. ಹಿರಿಯೂರಿನಿಂದ ಆದಿವಾಲ- ನಂದಿಹಳ್ಳಿ- ರಂಗನಾಥಪುರ-ಆರನಕಟ್ಟೆ- ಸಮುದ್ರದಹಳ್ಳಿ ಮೂಲಕ ಕೋಡಿಹಳ್ಳಿ ಮಾರ್ಗವಾಗಿ ಶಿರಾಕ್ಕೆ ಸಾರಿಗೆ ಸಂಸ್ಥೆ ಬಸ್ ವ್ಯವಸ್ಥೆ ಇಲ್ಲ. ಗನ್ನಾಯಕನಹಳ್ಳಿ -ಮಲ್ಲಪ್ಪನಹಳ್ಳಿ- ವದ್ದಿಕೆರೆ -ತಾಳವಟ್ಟಿ -ಐಮಂಗಲ-ಮರಡಿಹಳ್ಳಿ ಮಾರ್ಗವಾಗಿ ಚಿತ್ರದುರ್ಗಕ್ಕೂ ರಸ್ತೆ ಸಾರಿಗೆ ಸಂಸ್ಥೆ ಬಸ್ ವ್ಯವಸ್ಥೆ ಇಲ್ಲ. ಹೀಗಾಗಿ ಪ್ರಯಾಣಿಕರು ಅಸುರಕ್ಷಿತ ರೀತಿಯಲ್ಲಿ ಪ್ರಯಾಣ ಮಾಡುತ್ತಾರೆ. ಕೆಲವು ಮಾರ್ಗಗಳಲ್ಲಿ ಟಾಪ್‌ ಏರಿ ಪ್ರಯಾಣಿಸುತ್ತಾರೆ.

ಹಿರಿಯೂರಿನಿಂದ ಹೇಮದಳ- ಅಂಬಲಗೆರೆ -ರಂಗೇನಹಳ್ಳಿ- ಶಿಡ್ಲಯ್ಯನ ಕೋಟೆ ಮಾರ್ಗವಾಗಿ ಧರ್ಮಪುರ ಭಾಗಕ್ಕೂ ರಸ್ತೆ ಸಾರಿಗೆ ಸಂಸ್ಥೆ ಬಸ್ ಇಲ್ಲದ ಕಾರಣ ಜನರು ಪರದಾಡುವ ಪರಿಸ್ಥಿತಿ ಇದೆ. ಧರ್ಮಪುರ– ಕೋಡಿಹಳ್ಳಿ, ಧರ್ಮಪುರ- ಬೇತೂರು, ಬೇತೂರು ಪಾಳ್ಯ, ಬುರುಡುಕುಂಟೆ, ಯಳವರಹಟ್ಟಿ, ಧರ್ಮಪುರ– ಹರಿಯಬ್ಬೆ– ಚಿಲ್ಲಹಳ್ಳಿ ಮಾರ್ಗವಾಗಿ ಹಿರಿಯೂರಿಗೆ ಎರಡೇ ಕೆಎಸ್ಆರ್‌ಟಿಸಿ ಬಸ್ ಇವೆ. ಇವೂ ಸರಿಯಾಗಿ ಓಡಾಡದ ಕಾರಣ ಜನರು ಖಾಸಗಿ ಬಸ್‌ಗಳ ಮೇಲೆಯೇ ಅವಲಂಬಿತರಾಗಿದ್ದಾರೆ. ಧರ್ಮಪುರ– ಕಣಜನಹಳ್ಳಿ– ಸೂಗೂರು, ಹೊಸಹಳ್ಳಿ, ಗೂಳ್ಯ, ಶಿಡ್ಲಯ್ಯನಕೋಟೆ, ರಂಗೇನಹಳ್ಳಿ ಮಾರ್ಗವಾಗಿ ಹಿರಿಯೂರಿಗೂ ಸಾರಿಗೆ ಬಸ್‌ ಇಲ್ಲದಾಗಿದೆ.

ಹೊಸದುರ್ಗ ತಾಲ್ಲೂಕಿನ ಮತ್ತೋಡು ಹಾಗೂ ಮಾಡದಕೆರೆ ಹೋಬಳಿಗಳಲ್ಲಿ ಬೆರಳೆಣಿಕೆಯಷ್ಟು ಕೆಎಸ್‌ಆರ್‌ಟಿಸಿ ಬಸ್ ಸಂಚರಿಸುತ್ತವೆ. ಈ ಭಾಗದಲ್ಲಿ ಖಾಸಗಿ ಬಸ್‌ಗಳದ್ದೇ ದರ್ಬಾರ್‌. ಹಾಲುರಾಮೇಶ್ವರ, ಹೊನ್ನೇನಹಳ್ಳಿ, ಜಾನಕಲ್, ದೇವಪುರ, ಕಂಠಾಪುರ, ಮತ್ತೋಡು ಹೋಬಳಿಯ ಅರೇಹಳ್ಳಿ, ಮತ್ತೋಡು, ಮಾಡದಕೆರೆ ಹೋಬಳಿಯ ಹಲವು ಹಳ್ಳಿಗಳಿಗೆ ಖಾಸಗಿ ಬಸ್‌ಗಳೇ ಆಧಾರ.

ಪ್ರತಿ ಸೋಮವಾರ ಹೊಸದುರ್ಗದಲ್ಲಿ ಸಂತೆ ಮಾರುಕಟ್ಟೆ ನಡೆಯುವುದರಿಂದ ಬಸ್‌ಗಳ ಟಾಪ್ ಭರ್ತಿಯಾಗಿರುತ್ತದೆ. ಬಸ್‌ ಮೇಲೆ ನೇತಾಡಿಕೊಂಡು ಪ್ರಯಾಣಿಸುತ್ತಾರೆ. ಹಣದ ಆಸೆಗಾಗಿ ಬಸ್‌ ಸಿಬ್ಬಂದಿ ಮಿತಿಮೀರಿ ಜನರನ್ನು ಕೂರಿಸುತ್ತಾರೆ. ಎಷ್ಟೋ ಜನ ಇಕ್ಕಟ್ಟಿನಲ್ಲಿ ಕೂರಲಾಗದೆ ಬಿದ್ದು ಗಾಯಗೊಂಡಿದ್ದಾರೆ.

ನಾಯಕನಹಟ್ಟಿ ಹೋಬಳಿಯಾದ್ಯಂತ ಹಲವು ವರ್ಷಗಳಿಂದ ಖಾಸಗಿ ಬಸ್‌ಗಳ ಕಾರುಬಾರು ಹೆಚ್ಚಾಗಿದೆ. ಒಟ್ಟು 48 ಗ್ರಾಮಗಳಲ್ಲಿ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ‌ ಖಾಸಗಿ ಬಸ್‌ಗಳಿವೆ. ಸ್ಥಳೀಯವಾಗಿ ಓಡಾಡುವ ಬಸ್‌ಗಳು ಜನರನ್ನು ಟಾಪ್‌ನಲ್ಲಿ ಕೂರಿಸುತ್ತವೆ. ಹಲವು ಬಾರಿ ರಾಜ್ಯ ರಸ್ತೆ ಸಾರಿಗೆ ಬಸ್ ಬಿಡಲು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ವಿಶೇಷವಾಗಿ ನಾಯಕನಹಟ್ಟಿ ಪಟ್ಟಣದಲ್ಲೇ 80ಕ್ಕೂ ಹೆಚ್ಚು ಖಾಸಗಿ ಬಸ್‌ ಹೊಂದಿರುವ ಮಾಲೀಕರಿದ್ದಾರೆ.

ಹೊಳಲ್ಕೆರೆ ತಾಲ್ಲೂಕು ಈಚಗಟ್ಟ, ನಗರಘಟ್ಟ, ನೆಲ್ಲಿಕಟ್ಟೆ, ಹೊರಕೆರೆ ದೇವರಪುರ, ನಂದನ ಹೊಸೂರು ಉಪ್ಪರಿಗೆನಹಳ್ಳಿ, ಕೊಳಾಳು ಮಾರ್ಗದಲ್ಲಿ ಸಾರಿಗೆ ಬಸ್‌ಗಳಿಲ್ಲದ ಕಾರಣ ಖಾಸಗಿ ಬಸ್‌ಗಳೇ ಆಧಾರವಾಗಿವೆ.

ಚಳ್ಳಕೆರೆಯಲ್ಲಿ ಆಟೊ ಮೇಲೆ ಪ್ರಯಾಣ ಮಾಡಿ ಕೆಳಗಿಳಿಯುತ್ತಿರುವ ವಿದ್ಯಾರ್ಥಿಗಳು
ಮೊಳಕಾಲ್ಮುರು: ಖಾಸಗಿ ಬಸ್‌ ದರ್ಬಾರ್‌
ಮೊಳಕಾಲ್ಮುರು ತಾಲ್ಲೂಕಿನಲ್ಲಿ ಸಾರಿಗೆ ಸಂಸ್ಥೆ ಸೌಲಭ್ಯ ತೀರಾ ಕಡಿಮೆ. ದೇವಸಮುದ್ರ ಹೋಬಳಿಯ ಶೇ80ರಷ್ಟು ಗ್ರಾಮಗಳಿಗೆ ಬಸ್ ಸೇವೆ ಇಲ್ಲ. ಜನರು ಆಟೊಗಳಲ್ಲಿ ಹೆದ್ದಾರಿಗೆ ಬರುತ್ತಾರೆ. ಇಲ್ಲವೇ ರಾಂಪುರಕ್ಕೆ ಬಂದು ಬಸ್ ಹತ್ತಬೇಕು. ಖಾಸಗಿ ಬಸ್‌ಗಳ ಜೊತೆಗೆ ಆಟೊ ಹಾವಳಿಯೂ ವಿಪರೀತವಾಗಿದೆ. ಇದರಿಂದ ಸಾಕಷ್ಟು ಅಪಘಾತ ನಡೆದು ಪ್ರಾಣಹಾನಿ ಆಗಿದೆ. 5 ವರ್ಷದ ಹಿಂದೆ ಆಟೊ ಅಪಘಾತದಲ್ಲಿ 18 ಜನ ಜೀವ ಕಳೆದುಕೊಂಡಿದ್ದರು. ವಿದ್ಯಾರ್ಥಿಗಳು ಸಹ ಪ್ರಾಣದ ಹಂಗು ತೊರೆದು ನಿತ್ಯ ಖಾಸಗಿ ಬಸ್‌ ಅಥವಾ ಆಟೊಗಳಲ್ಲೇ ಪ್ರಯಾಣ ಮಾಡಬೇಕಾಗಿದೆ. ಕೂಲಿ ಕಾರ್ಮಿಕರು ತಂಡ ಮಾಡಿಕೊಂಡು ಲಗೇಜ್ ಆಟೊಗಳಲ್ಲಿ ಬಳ್ಳಾರಿ ಸೇರಿದಂತೆ ಬೇರೆ ನಗರಗಳಿಗೆ ಹೋಗಿ ಬರುತ್ತಾರೆ. ರಾಂಪುರದಲ್ಲಿ 400ಕ್ಕೂ ಹೆಚ್ಚು ಪ್ರಯಾಣಿಕರ ಆಟೊಗಳು ಇವೆ.

ಆಟೊಗಳಲ್ಲೂ ಟಾಪ್‌ ಪ್ರಯಾಣ

ಬಸ್‌ ಟಾಪ್‌ ಪ್ರಯಾಣ ಒಂದು ಕಡೆಯಾದರೆ ಚಳ್ಳಕೆರೆ ತಾಲ್ಲೂಕಿನ ವಿವಿಧೆಡೆ ಜನರು ಆಟೊ ಟಾಪ್‌ನಲ್ಲಿ ಕುಳಿತು ಪ್ರಯಾಣಿಸುತ್ತಾರೆ. ಆಪೆ ಆಟೊಗಳ ಮೇಲೆ ಕುಳಿತು ಪ್ರಯಾಣಿಸುವ ರೀತಿಯಲ್ಲಿ ಚಾಲಕರು ಸಿದ್ಧಗೊಳಿಸಿಕೊಂಡಿರುತ್ತಾರೆ. ಒಂದು ಆಟೊದಲ್ಲಿ 20 ಪ್ರಯಾಣಿಕರನ್ನು ತುಂಬಿಕೊಂಡು ಓಡಾಡುತ್ತಾರೆ.ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮಪಂಚಾಯಿತಿ ವ್ಯಾಪ್ತಿಯ ಪೆತ್ತಮ್ಮನವರಹಟ್ಟಿ ಬೋಮ್ಮದೇವರಹಟ್ಟಿ ನೆರವಿನಿಂದ ಹುಟ್ಟಿ ಕರೆಕಾಟ್ಲಹಟ್ಟಿ ಬಂಗಾರದೇವರಹಟ್ಟಿ ಗಡ್ದಾರಹಟ್ಟಿ ಸೇರಿ 15 ಹಟ್ಟಿ ಜನರಿಗೆ ಬಸ್ ಸೌಲಭ್ಯವೇ ಇಲ್ಲದಾಗಿದೆ. ಈ ಭಾಗದ ಜನರು ಶಾಲಾ ಕಾಲೇಜು ವಿದ್ಯಾರ್ಥಿಗಳು ನಗರ ಪ್ರದೇಶಕ್ಕೆ ಬರಲು ಖಾಸಗಿ ಬಸ್‌ ಅಥವಾ ಆಟೊಗಳನ್ನೇ ಅವಲಂಬಿಸಿದ್ದಾರೆ. ಇನ್ನು ದುರ್ಗವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರಿ ನಿಂಗಯ್ಯಹಟ್ಟಿ ಭರಮಸಾಗರ ಬೊಮ್ಮಸಮುದ್ರ ರಂಗವ್ವನಹಳ್ಳಿ ಕಸ್ತೂರಿ ತಿಮ್ಮನಹಳ್ಳಿ ದೇವರಮರಿಕುಂಟೆ ಕೆಂಚವೀರನಹಳ್ಳಿ ಸೋಮಗುದ್ದು ಚಿಗತನಹಳ್ಳಿ ಗಂಜಿಗುಂಟೆ ಮುಂತಾದ ಗ್ರಾಮಗಳಿಗೆ ಬಸ್ ಸೌಲಭ್ಯವೇ ಇಲ್ಲ. ಸರ್ಕಾರಿ ಬಸ್ ಡಿಪೋ ಮತ್ತು ನಿಲ್ದಾಣವಿದ್ದರೂ ಸಾರಿಗೆ ಸಂಸ್ಥೆ ಬಸ್‌ ಇಲ್ಲದಿರುವುದು ದುರದೃಷ್ಟಕರ ಎಂದು ಸ್ಥಳೀಯರು ಹೇಳುತ್ತಾರೆ.

ಖಾಸಗಿ ಬಸ್‌ಗಳು ಟಾಪ್‌ನಲ್ಲಿ ಪ್ರಯಾಣಿಕರನ್ನು ಕೂರಿಸುತ್ತಿರುವ ಮಾಹಿತಿ ಇಲ್ಲ. ಈ ಕುರಿತು ಪರಿಶೀಲನೆ ಮಾಡಿ ಟಾಪ್‌ ಪ್ರಯಾಣ ಕಂಡುಬಂದರೆ ಬಸ್‌ ಮಾಲೀಕರು ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುವುದು.
– ಭರತ್‌ ಕಾಳಸಿಂಘೆ, ಪ್ರಾದೇಶಿಕ ಸಾರಿಗೆ ಅಧಿಕಾರಿ ಚಿತ್ರದುರ್ಗ
ಪೂರಕ ಮಾಹಿತಿ: ಸುವರ್ಣಾ ಬಸವರಾಜ್‌, ವೀರಣ್ಣ, ಕೊಂಡ್ಲಹಳ್ಳಿ ಜಯಪ್ರಕಾಶ್‌, ಸಂತೋಷ್‌, ಶಿವಗಂಗಾ ಚಿತ್ತಯ್ಯ, ಧನಂಜಯ, ತಿಮ್ಮಪ್ಪ, ಸಂದೇಶ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.