ಹಿರಿಯೂರು: ‘ಗ್ರಾಮೀಣ ಕ್ರೀಡೆಗಳಾದ ಅಳುಗುಣಿಮಣಿ, ಚೌಕಬಾರ, ಕುಂಟೆಬಿಲ್ಲೆ, ಚಿನ್ನಿ ದಾಂಡು, ಲಗೋರಿ, ಕೊಕ್ಕೊ, ಕಬಡ್ಡಿ ಆಟಗಳನ್ನು ಆಡುವ ಮೂಲಕ ವಿದ್ಯಾರ್ಥಿಗಳು ದೈಹಿಕ, ಮಾನಸಿಕ ಸದೃಢತೆ ಬೆಳೆಸಿಕೊಳ್ಳಬೇಕು’ ಎಂದು ಹಿರಿಯೂರಿನ ‘ಸತ್ವ’ ಮಹಿಳಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಶಶಿಕಲಾ ರವಿಶಂಕರ್ ಸಲಹೆ ನೀಡಿದರು.
ತಾಲ್ಲೂಕಿನ ಆಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನ ಹಾಗೂ ಪುನಶ್ಚೇತನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಓದುವ ಸಮಯದಲ್ಲಿಯೇ ಕಷ್ಟದಲ್ಲಿರುವವರಿಗೆ ನೆರವು ನೀಡುವುದು, ಗುರು– ಹಿರಿಯರನ್ನು ಗೌರವಿಸುವುದು, ದುಡಿದು ತಿನ್ನುವ ಅಭ್ಯಾಸ ಬೆಳೆಸಿಕೊಂಡಲ್ಲಿ ಭವಿಷ್ಯದಲ್ಲಿ ಸಮಾಜ ಗುರುತಿಸುವಂತಹ ಮನುಷ್ಯರಾಗಿ ಹೊರಬರಲು ಸಾಧ್ಯ. ಶೋಷಣೆಯಿಂದ ಹೊರಬರಲು ಹೆಣ್ಣು ಮಕ್ಕಳಿಗೆ ಶಿಕ್ಷಣ ಅನಿವಾರ್ಯ. ಸರ್ಕಾರಿ ಶಾಲೆ ಎಂಬ ಕೀಳರಿಮೆ ಬದಿಗಿಟ್ಟು ಶಿಕ್ಷಕರು– ಪೋಷಕರ ಮಾರ್ಗದರ್ಶನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬೇಕು’ ಎಂದು ಅವರು ಹೇಳಿದರು.
10ನೇ ತರಗತಿಯ ಎಲ್ಲಾ ಮಕ್ಕಳಿಗೆ ಸತ್ವ ಮಹಿಳಾ ಸಂಘದ ಯೋಜನಾ ನಿರ್ದೇಶಕಿ ಇಂಪಾ ರಿತೇಶ್ ಡಿಕ್ಷನರಿಯನ್ನು ಕೊಡುಗೆ ನೀಡಿದರು. ಮುಖ್ಯಶಿಕ್ಷಕ ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸತ್ವ ಸಂಘದ ಸರ್ವಮಂಗಳಾ ರಮೇಶ್, ತ್ರಿವೇಣಿ ಸತೀಶ್, ತ್ರಿವೇಣಿ ಶಶಿಧರ್, ಗೀತಾ ಹಿಮಾಚಲೇಶ್, ಲತಾ ಶಿವಪ್ರಸಾದ್, ಶ್ರೀಕರ ರಾಜಣ್ಣ, ಯಮುನಾ ಉಮಕಾಂತ್, ರಾಜೇಶ್ವರಿ, ನಿರ್ಮಲಾ ಮಹಂತೇಶ್, ನಾಗರತ್ನಾ ಮಹೇಶ್ ಹಾಜರಿದ್ದರು. ಗಣಿತ ಶಿಕ್ಷಕ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.