ADVERTISEMENT

ರಸ್ತೆ ಡಾಂಬರೀಕರಣಕ್ಕೆ ಪ್ಲಾಸ್ಟಿಕ್ ಮರುಬಳಕೆ

ಹೊಸದುರ್ಗ ಪುರಸಭೆಯಿಂದ ವಿನೂತನ ಪ್ರಯೋಗ l ಹೆಚ್ಚಲಿದೆ ರಸ್ತೆಯ ಗುಣಮಟ್ಟ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 2:36 IST
Last Updated 23 ಅಕ್ಟೋಬರ್ 2020, 2:36 IST
ಹೊಸದುರ್ಗದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಬಳಸಿ ರಸ್ತೆ ಡಾಂಬರೀಕರಣ ಮಾಡಿರುವುದನ್ನು ವೀಕ್ಷಿಸುತ್ತಿರುವ ಪುರಸಭೆ ಮುಖ್ಯಾಧಿಕಾರಿ ಡಿ.ಉಮೇಶ್‌
ಹೊಸದುರ್ಗದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಬಳಸಿ ರಸ್ತೆ ಡಾಂಬರೀಕರಣ ಮಾಡಿರುವುದನ್ನು ವೀಕ್ಷಿಸುತ್ತಿರುವ ಪುರಸಭೆ ಮುಖ್ಯಾಧಿಕಾರಿ ಡಿ.ಉಮೇಶ್‌   

ಹೊಸದುರ್ಗ: ರಾಜ್ಯದ ವಿವಿಧೆಡೆ ರಸ್ತೆ ನಿರ್ಮಾಣದ ಡಾಂಬರೀಕರಣಕ್ಕೆ ಪ್ಲಾಸ್ಟಿಕ್‌ ತ್ಯಾಜ್ಯ ಬಳಸುತ್ತಿದ್ದು, ಪಟ್ಟಣದ ಪುರಸಭೆ ಸಹ ಈ ಪ್ರಯತ್ನಕ್ಕೆ ಮುಂದಾಗಿದೆ.

ಪಟ್ಟಣದಲ್ಲಿ 23 ವಾರ್ಡ್‌ಗಳು, 6,570 ಮನೆಗಳು ಹಾಗೂ 28,370ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಪಟ್ಟಣದ ಸ್ವಚ್ಛತೆ ಕಾಡುವ ಮೂಲಕ 2019ರಲ್ಲಿ ಕೇಂದ್ರ ಸರ್ಕಾರದಿಂದ ‘ಸ್ವಚ್ಛ ಹೊಸದುರ್ಗ’ ಎಂದು ಪ್ರಶಸ್ತಿ ಪಡೆದಿದ್ದ ಇಲ್ಲಿನ ಪುರಸಭೆ, 2020–21ನೇ ಸಾಲಿಗೆ ಮತ್ತೊಂದು ವಿನೂತನ ಪ್ರಯೋಗಕ್ಕೆ ಕೈಹಾಕಿದೆ.

ಪ್ರತಿದಿನ ಮನೆ ಮತ್ತು ಅಂಗಡಿ, ಮುಂಗಟ್ಟು, ವಾಣಿಜ್ಯ ಮಳಿಗೆಗಳಿಂದ ಹಸಿ ಹಾಗೂ ಒಣ ಕಸವನ್ನು ಮೂಲದಲ್ಲಿಯೇ ಪ್ರತ್ಯೇಕಿಸಿ ಸಂಗ್ರಹಿಸಲಾಗುತ್ತಿದೆ. ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸದ ವಾಸನೆ ಬರದಂತೆ ಬಯೋ ಮತ್ತು ಒಡೋರ್‌ ಕಲ್ಚರ್‌ ಆಯುರ್ವೇದಿಕ್‌ ಔಷಧ ಸಿಂಪಡಿಸಲಾಗುತ್ತದೆ. ಸಂಗ್ರಹವಾಗಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರು ವಿಂಗಡಣೆ ಮಾಡಲಾಗುತ್ತದೆ. ಮರುಬಳಕೆಗೆ ಬರುವಂತಹ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಪುರಸಭೆ ಪರಿಸರ ಎಂಜಿನಿಯರ್‌ ಜಿ.ವಿ.ತಿಮ್ಮರಾಜು ತಿಳಿಸಿದರು.

ADVERTISEMENT

ಮರುಬಳಕೆಗೆ ಯೋಗ್ಯವಲ್ಲದ ಬಹು ಪದರ ಹೊಂದಿರುವ ಪ್ಲಾಸ್ಟಿಕ್ ಚೀಲಗಳನ್ನು ಸಂಸ್ಕರಿಸಲು ತೊಂದರೆಯಾಗುತ್ತಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಲ್ಲಿ ಸಿಮೆಂಟ್ ಕಾರ್ಖಾನೆಗಳಲ್ಲಿ ಉರವಲು ಆಗಿ ಬಳಕೆ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಆದರೆ, ಸಿಮೆಂಟ್ ಕಾರ್ಖಾನೆಗಳು ಪಟ್ಟಣದಿಂದ ದೂರದಲ್ಲಿ ಇರುವುದರಿಂದ ಸಾಗಿಸಲು ಪುರಸಭೆಗೆ ಅರ್ಥಿಕವಾಗಿ ಹೆಚ್ಚು ಹೊರೆ ಆಗುತ್ತಿದೆ. ಇದರಿಂದಾಗಿ ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಪಟ್ಟಣದ ವ್ಯಾಪ್ತಿಯಲ್ಲಿ ನಿರ್ಮಾಣ ಆಗುತ್ತಿರುವ ರಸ್ತೆ ಡಾಂಬರೀಕರಣಕ್ಕೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಡಾಂಬರ್‌ನೊಂದಿಗೆ ಕರಗಿಸಿ ಬಳಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮೃದುವಾದ (ತೆಳು) ಪ್ಲಾಸ್ಟಿಕ್‌ ಸಾಮಗ್ರಿಯನ್ನು 10 ಕೆ.ಜಿ.ಗೆ ಒಂದರಂತೆ ಬಂಡಲ್‌ ಮಾಡಲಾಗುತ್ತದೆ. ರಸ್ತೆ ನಿರ್ಮಾಣ ಆಗುತ್ತಿರುವ ಸ್ಥಳಕ್ಕೆ ಆ ಪ್ಲಾಸ್ಟಿಕ್‌ ತ್ಯಾಜ್ಯದ ಬಂಡಲ್‌ಗಳನ್ನು ತರಲಾಗುತ್ತದೆ. ಆ ಪ್ಲಾಸ್ಟಿಕ್‌ ಅನ್ನು ಚಿಕ್ಕ, ಚಿಕ್ಕ ತುಂಡುಗಳನ್ನಾಗಿ ಕತ್ತರಿಸಲಾಗುತ್ತದೆ. ನಂತರ ಡಾಂಬರೀಕರಣದ ಹೀಟರ್‌ಗೆ ಪ್ಲಾಸ್ಟಿಕ್‌ ತುಂಡುಗಳನ್ನು ಹಾಕಲಾಗುತ್ತದೆ. ಬಳಿಕ ಡಾಂಬರ್‌ ಜತೆಗೆ ರಸ್ತೆಗೆ ಇದನ್ನು ಸುರಿಯಲಾಗುತ್ತದೆ. ಇದರಿಂದ ಡಾಂಬರ್‌ ಬಳಕೆ ಮಿತಗೊಳ್ಳುತ್ತದೆ. ರಸ್ತೆ ಗುಣಮಟ್ಟ ಹೆಚ್ಚಾಗುವುದರಿಂದ ರಸ್ತೆಯು ಹೆಚ್ಚು ದಿನ ಬಾಳಿಕೆ ಬರುತ್ತದೆ.

‘ಇದರಿಂದ ಪರಿಸರ ಮಾಲಿನ್ಯ ಆಗುವುದನ್ನು ಹಾಗೂ ಪ್ಲಾಸ್ಟಿಕ್‌ ಹಾನಿ ತಡೆಯಲು ನೆರವಾಗಿದೆ. ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಪರ್ಯಾಯ ಕಂಡುಕೊಳ್ಳಲಾಗಿದೆ. ಪಟ್ಟಣವನ್ನು ಪ್ಲಾಸ್ಟಿಕ್‌ ಮುಕ್ತಗೊಳ್ಳಿಸಲು ನೆರವಾಗಿದೆ’ ಎಂದು ಎಂದು ಪುರಸಭೆ ಮುಖ್ಯಾಧಿಕಾರಿ ಡಿ.ಉಮೇಶ್‌ ‘ಪ್ರಜಾವಾಣಿ’ಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.