
ಚಿತ್ರದುರ್ಗ: ಪೋಕ್ಸೊ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರು ಹಾಗೂ ಇತರ ಇಬ್ಬರು ಆರೋಪಿಗಳು ನಿರ್ದೋಷಿಗಳು ಎಂದು ನಗರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್ ನ್ಯಾಯಾಲಯ ಬುಧವಾರ ಆದೇಶ ಪ್ರಕಟಿಸಿತು.
2 ಪೋಕ್ಸೊ ಪ್ರಕರಣಗಳ ಪೈಕಿ ಮೊದಲ ಪ್ರಕರಣದ ವಿಚಾರಣೆ ಪೂರ್ಣಗೊಂಡಿತ್ತು. ನ್ಯಾಯಾಧೀಶರಾದ ಚನ್ನಬಸಪ್ಪ ಜಿ ಹಡಪದ ಆದೇಶ ಪ್ರಕಟಿಸಿದರು.
ಇನ್ನೊಂದು ಪ್ರಕರಣದ ವಿಚಾರಣೆಗೆ ಬಾಕಿ ಇದ್ದು, ಸದ್ಯ ಅದರ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ.
'ಪೋಕ್ಸೊ ಪ್ರಕರಣದ ಆರೋಪಿಗಳು ದೋಷಮುಕ್ತರಾಗಿದ್ದಾರೆ' ಎಂದು ನ್ಯಾಯಾಧೀಶರು ಒಂದು ಸಾಲಿನ ಆದೇಶ ಪ್ರಕಟಿಸಿದರು.
ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಇಬ್ಬರು ಸಂತ್ರಸ್ತೆಯರು, ಮೂವರು ಆರೋಪಿಗಳು ಹಾಗೂ 14 ಸಾಕ್ಷಿಗಳ ಸುದೀರ್ಘ ವಿಚಾರಣೆ ನಡೆದಿತ್ತು. ನ.18ರಂದು ಸಂತ್ರಸ್ತೆಯರ ಪರ ಸರ್ಕಾರಿ ವಕೀಲ ಎಚ್.ಆರ್.ಜಗದೀಶ್ ವಾದ ಮಾಡಿದ್ದರು. ಆರೋಪಿಗಳ ಪದ ಸಿ.ವಿ.ನಾಗೇಶ್ ವಾದ ಮಾಡಿದ್ದರು. ನ್ಯಾಯಾಧೀಶರು ನ.26ಕ್ಕೆ ಆದೇಶ ಕಾಯ್ದಿರಿಸಿದ್ದರು.
ಬುಧವಾರ ಬೆಳಿಗ್ಗೆ 10 ಗಂಟೆಗೆ ಆರೋಪಿಗಳಾದ ಶಿವಮೂರ್ತಿ ಶರಣರು, ಮಠದ ವ್ಯವಸ್ಥಾಪಕ ಪರಮಶಿವಯ್ಯ, ವಾರ್ಡನ್ ರಶ್ಮಿ ಹಾಜರಾಗಿದ್ದರು. ನ್ಯಾಯಾಧೀಶರು ಮಧ್ಯಾಹ್ನ 2.45ಕ್ಕೆ ಮುಂದೂಡಿದ್ದರು.
ಮಧ್ಯಾಹ್ನ 3 ಗಂಟೆ ವೇಳೆಗೆ ನ್ಯಾಯಾಧೀಶರು ಆದೇಶ ಪ್ರಕಟಿಸಿದರು.
ಹಿನ್ನೆಲೆ:
‘ಮುರುಘಾ ಶರಣರು ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿ ಇಬ್ಬರು ಬಾಲಕಿಯರು ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ 2022ರ ಆ. 26ರಂದು ದೂರು ದಾಖಲಿಸಿದ್ದರು. ನಂತರ, ಪೊಲೀಸರು ಶರಣರನ್ನು 2022ರ ಸೆ. 1ರಂದು ಬಂಧಿಸಿದ್ದರು.
ಆನಂತರ ಮತ್ತಿಬ್ಬರು ಬಾಲಕಿಯರು ಮುರುಘಾ ಶರಣರ ವಿರುದ್ದ ಲೈಂಗಿಕ ಕಿರುಕುಳ ಆರೋಪಿಸಿ ಮತ್ತೊಂದು ದೂರು ನೀಡಿದ್ದರು. ಈ ಪ್ರಕರಣ ವಿಚಾರಣೆಗೆ ಬಾಕಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.