ADVERTISEMENT

ವೃತ್ತಿ ಬದುಕಿಗೆ ಕೌಟುಂಬಿಕ ಸಹಕಾರ ಅಗತ್ಯ

ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಡಾ.ಎ.ಎಸ್‌.ಎನ್‌.ಮೂರ್ತಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 13:52 IST
Last Updated 22 ಆಗಸ್ಟ್ 2019, 13:52 IST
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಏರ್ಪಡಿಸಿದ್ದ ಸಮಾರಂಭವನ್ನು ಲೋಕಾಯುಕ್ತ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಡಾ.ಎ.ಎಸ್‌.ಎನ್‌.ಮೂರ್ತಿ ಉದ್ಘಾಟಿಸಿದರು. ಎಸ್‌ಪಿ ಡಾ.ಕೆ.ಅರುಣ್‌, ಎಎಸ್‌ಪಿ ಎಂ.ಬಿ.ನಂದಗಾವಿ, ಡಿವೈಎಸ್‌ಪಿ ವಿಜಯಕುಮಾರ್‌ ಸಂತೋಷ್‌, ಜಿ.ಎಂ.ತಿಪ್ಪೇಸ್ವಾಮಿ ಇದ್ದಾರೆ.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಏರ್ಪಡಿಸಿದ್ದ ಸಮಾರಂಭವನ್ನು ಲೋಕಾಯುಕ್ತ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಡಾ.ಎ.ಎಸ್‌.ಎನ್‌.ಮೂರ್ತಿ ಉದ್ಘಾಟಿಸಿದರು. ಎಸ್‌ಪಿ ಡಾ.ಕೆ.ಅರುಣ್‌, ಎಎಸ್‌ಪಿ ಎಂ.ಬಿ.ನಂದಗಾವಿ, ಡಿವೈಎಸ್‌ಪಿ ವಿಜಯಕುಮಾರ್‌ ಸಂತೋಷ್‌, ಜಿ.ಎಂ.ತಿಪ್ಪೇಸ್ವಾಮಿ ಇದ್ದಾರೆ.   

ಚಿತ್ರದುರ್ಗ: ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ (ಡಿಎಆರ್‌) ಸೇವೆಗೆ ಸೇರಿದ 20ನೇ ವರ್ಷದ ಸಂಭ್ರಮಾಚರಣೆಯನ್ನು ಪೊಲೀಸರು ಗುರುವಾರ ಸಡಗರದಿಂದ ಆಚರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಹಾಡಿ ನಲಿದರು.

ಸಂಭ್ರಮಾಚರಣೆಯ ಅಂಗವಾಗಿ ತರಾಸು ರಂಗಮಂದಿರದ ಆವರಣವನ್ನು ಸಿಂಗರಿಸಲಾಗಿತ್ತು. ಕುಟುಂಬ ಸಮೇತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ರಕ್ತದಾನ, ದೇಹದಾನ ಹಾಗೂ ನೇತ್ರದಾನ ಮಾಡಿದರು. ಪೊಲೀಸ್‌ ಸೇವೆಗೆ ಕರೆತಂದ ಹಿರಿಯ ಅಧಿಕಾರಿಗಳನ್ನು ಸನ್ಮಾನಿಸಿದರು.

1999ರಲ್ಲಿ 100 ಕಾನ್‌ಸ್ಟೆಬಲ್‌ಗಳು ಡಿಎಆರ್‌ಗೆ ನೇಮಕಾತಿ ಹೊಂದಿದ್ದರು. ಇವರಲ್ಲಿ 9 ಜನ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇವರ ಕುಟುಂಬಕ್ಕೆ ಧೈರ್ಯತುಂಬಿದ ಸಹೋದ್ಯೋಗಿಗಳು, ಬದುಕಿಗೆ ಆಸರೆಯಾಗುವ ಭರವಸೆ ತುಂಬಿದರು. ರಸಮಂಜರಿ ಕಾರ್ಯಕ್ರಮ ನಡೆಸಿ ಸಂತಸ ಹಂಚಿಕೊಂಡರು.

ADVERTISEMENT

ಲೋಕಾಯುಕ್ತ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಡಾ.ಎ.ಎಸ್‌.ಎನ್‌.ಮೂರ್ತಿ, ‘ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ನೇಮಕಾತಿ ಅಧಿಕಾರ ಇತ್ತು. ಕಾನ್‌ಸ್ಟೆಬಲ್‌ ನೇಮಕಾತಿ ಹೊಣೆಯನ್ನು ಪೊಲೀಸ್ ವರಿಷ್ಠಾಧಿಕಾರಿಗೆ ನೀಡಲಾಗಿತ್ತು. ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಹಾಗೂ ದೈಹಿಕ ಸಾಮರ್ಥ್ಯ ಹೊಂದಿದ ಅರ್ಹರಿಗೆ ಅವಕಾಶ ನೀಡುತ್ತಿದ್ದೆವು. ಕಾನ್‌ಸ್ಟೆಬಲ್‌ ನೇಮಕಾತಿಗೆ ಈಗ ಕೇಂದ್ರೀಕೃತ ವ್ಯವಸ್ಥೆ ಜಾರಿಗೆ ತರಲಾಗಿದೆ’ ಎಂದರು.

‘ಡಿಎಆರ್‌ನಲ್ಲಿ ಕಾರ್ಯನಿರ್ವಹಿಸುವ ಪೊಲೀಸರಿಗೂ ಒತ್ತಡವಿದೆ. ಗಣ್ಯರ ಭದ್ರತೆ, ಬಂದೋಬಸ್ತ್‌ಗೆ ನಿಯೋಜಿಸಲಾಗುತ್ತದೆ. ಒತ್ತಡವನ್ನು ನಿರ್ವಹಿಸುವ ಬಗೆಯನ್ನು ಪೊಲೀಸರು ಕರಗತ ಮಾಡಿಕೊಳ್ಳಬೇಕು. ಆರೋಗ್ಯ ಹಾಗೂ ದೈಹಿಕ ಸಾಮರ್ಥ್ಯದ ಬಗೆಗೂ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

‘ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಲು ಕೌಟುಂಬಿಕ ಸಹಕಾರ ಅಗತ್ಯ. ವೃತ್ತಿ ಹಾಗೂ ಕೌಟುಂಬಿಕ ಬದುಕಿನ ನಡುವೆ ಸಮನೋಲನ ಕಾಯ್ದುಕೊಳ್ಳಬೇಕು. ಕುಟುಂಬಕ್ಕೂ ಸಮಯ ಮೀಸಲಿಡಬೇಕು’ ಎಂದು ಕಿವಿಮಾತು ಹೇಳಿದರು.

ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ಅರುಣ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಬಿ.ನಂದಗಾವಿ, ಐಮಂಗಲ ಪೊಲೀಸ್‌ ತರಬೇತಿ ಶಾಲೆಯ ಪ್ರಾಂಶುಪಾಲ ಪಿ.ಪಾಪಣ್ಣ, ನಿವೃತ್ತ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಎ.ಜೆ.ಈಶ್ವರಪ್ಪ, ಎಚ್‌.ಎಂ.ಜವರಯ್ಯ, ಡಿಎಆರ್‌ ಡಿವೈಎಸ್‌ಪಿ ಜಿ.ಎಂ.ತಿಪ್ಪೇಸ್ವಾಮಿ, ಡಿವೈಎಸ್‌ಪಿ ವಿಜಯಕುಮಾರ್‌ ಎಂ.ಸಂತೋಷ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.