ADVERTISEMENT

ಮೂಲಸೌಲಭ್ಯ ಕೊರತೆಗೆ ನಲುಗುತ್ತಿವೆ ಕಾಲೇಜು

ಪ್ರಯೋಗಾಲಯ, ಕೊಠಡಿಗಳ ಕೊರತೆ: ಹಾಸ್ಟೆಲ್ ಸೌಲಭ್ಯ ಮರೀಚಿಕೆ

ಜಿ.ಬಿ.ನಾಗರಾಜ್
Published 2 ಜುಲೈ 2022, 3:57 IST
Last Updated 2 ಜುಲೈ 2022, 3:57 IST
ಚಿತ್ರದುರ್ಗದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸ್ಥಿತಿ.
ಚಿತ್ರದುರ್ಗದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸ್ಥಿತಿ.   

ಚಿತ್ರದುರ್ಗ: ಜಿಲ್ಲೆಯ ಹಲವು ಪದವಿ ಪೂರ್ವ ಕಾಲೇಜುಗಳು ಮೂಲಸೌಲಭ್ಯ ಕೊರತೆಯಿಂದ ನಲುಗುತ್ತಿವೆ. ಕೊಠಡಿ, ಪೀಠೋಪಕರಣ, ಪ್ರಯೋಗಾಲಯ ಇಲ್ಲದೇ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯುವಂತಾಗಿದೆ. ಶಿಥಿಲಾವಸ್ಥೆಯ ಕಟ್ಟಡ, ಉಪಕರಣಗಳೇ ಇಲ್ಲದ ಪ್ರಯೋಗಾಲಯದಲ್ಲಿ ಶಿಕ್ಷಣ ಪಡೆಯುವ ದುಃಸ್ಥಿತಿ ಬಂದೊದಗಿದೆ.

ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಈ ಸಮಸ್ಯೆ ತೀವ್ರವಾಗಿದೆ. ಇದು ದ್ವಿತೀಯ ಪಿಯು ಅಂತಿಮ ಪರೀಕ್ಷೆಯ ಫಲಿತಾಂಶದ ಮೇಲೆ ನಕಾರಾತ್ಮಕ ಪರಿಣಾಮವನ್ನುಂಟು ಮಾಡುತ್ತಿದೆ. ಅನುದಾನಿತ ಹಾಗೂ ಅನುದಾನರಹಿತ ಕಾಲೇಜುಗಳಲ್ಲಿ ಮೂಲಸೌಲಭ್ಯ ಕೊರತೆ ಅಷ್ಟಾಗಿಲ್ಲ.

ಶಿಥಿಲಾವಸ್ಥೆ ಕಟ್ಟಡ: ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಕಟ್ಟಡಗಳು ಬಹುತೇಕ ಶಿಥಿಲಾವಸ್ಥೆಯಲ್ಲಿವೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಕಾಲೇಜು ಸ್ಥಿತಿಯಲ್ಲಿ ಭಿನ್ನತೆ ಇಲ್ಲ. ಹಾಳಾದ ಚಾವಣಿ, ಮಾಸಿಹೋದ ಬಣ್ಣ, ಬೀಳುವ ಹಂತದಲ್ಲಿರುವ ಕಿಟಕಿ, ಬಾಗಿಲುಗಳ ನಡುವೆ ವಿದ್ಯಾರ್ಥಿಗಳು ಪಾಠ ಕೇಳಬೇಕಾಗಿದೆ. ಕೆಲವು ಕೊಠಡಿಗಳಲ್ಲಿ ಮಕ್ಕಳು ಜೀವಭಯದಲ್ಲಿ ಕುಳಿತು ಪಾಠ ಕೇಳುವ ಸ್ಥಿತಿ ಚಿತ್ರದುರ್ಗದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿದೆ. ಮೊಳಕಾಲ್ಮುರು ಪದವಿಪೂರ್ವ ಕಾಲೇಜಿನಲ್ಲಿ ಏಳು ಕೊಠಡಿಗಳನ್ನು ಬಳಕೆ ಮಾಡುತ್ತಿಲ್ಲ.

ADVERTISEMENT

ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಕಟ್ಟಡವೂ ದುಃಸ್ಥಿತಿ ತಲುಪಿದೆ. ಸರಿಸುಮಾರು ಎರಡು ಸಾವಿರ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಕೊಠಡಿಗಳ ಸಂಖ್ಯೆ ವಿದ್ಯಾರ್ಥಿಗಳಿಗೆ ಅನುಗುಣವಾಗಿಲ್ಲ. ಕೊಠಡಿಗಳ ಕೊರತೆ ನೀಗಿಸಲು ವಿಭಾಗವಾರು ಸರದಿ ನಿಗದಿ ಮಾಡಲಾಗಿದೆ. ಕೆಲ ವಿಷಯ, ವಿಭಾಗದ ತರಗತಿ ನಡೆಯುತ್ತಿರುವಾಗ ಉಳಿದವರು ಹೊರಗೆ ಕಾಯುತ್ತಿರುತ್ತಾರೆ.

ತುಂಬಿತುಳುಕುವ ಕೊಠಡಿ: 60 ವಿದ್ಯಾರ್ಥಿಗಳು ಕುಳಿತು ಪಾಠ ಕೇಳುವ ಸಾಮರ್ಥ್ಯವಿರುವ ಕೊಠಡಿಗಳಿವೆ. ಇತ್ತೀಚೆಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಸರಾಸರಿ100 ವಿದ್ಯಾರ್ಥಿಗಳು ಕುಳಿತುಕೊಳ್ಳುತ್ತಿದ್ದಾರೆ. ನಾಲ್ಕು ವಿದ್ಯಾರ್ಥಿಗಳು ಕುಳಿತುಕೊಳ್ಳುವ ಬೆಂಚಿನಲ್ಲಿ ಆರು ವಿದ್ಯಾರ್ಥಿಗಳು ಆಸೀರಾಗುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಮೇಲೆ ನಿಗಾ ಇಡಲು ಉಪನ್ಯಾಸಕರಿಗೆ ಸಾಧ್ಯವಾಗುತ್ತಿಲ್ಲ.

‘ಸರ್ಕಾರ ರೂಪಿಸಿದ ನೀತಿಯ ಪ್ರಕಾರ ಯಾವುದೇ ವಿದ್ಯಾರ್ಥಿಗೆ ಪ್ರವೇಶ ನಿರಾಕರಿಸುವಂತಿಲ್ಲ. ಎಷ್ಟೇ ವಿದ್ಯಾರ್ಥಿಗಳು ಪ್ರವೇಶ ಕೋರಿದರೂ ಅವಕಾಶ ನೀಡಬೇಕು. ಹೀಗಾಗಿ, ಪ್ರತಿ ತರಗತಿಗೆ ಸರಾಸರಿ 100 ವಿದ್ಯಾರ್ಥಿಗಳಾಗುತ್ತಿದ್ದಾರೆ. ಉಪನ್ಯಾಸಕರು, ಕೊಠಡಿಗಳ ಕೊರತೆಯಿಂದ ಇಷ್ಟು ಮಕ್ಕಳನ್ನು ಒಂದೆಡೆ ಕೂರಿಸುವುದು ಅನಿವಾರ್ಯವಾಗಿದೆ’ ಎನ್ನುತ್ತಾರೆ ನಗರರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಉಪನ್ಯಾಸಕರು.

ಪ್ರಯೋಗಾಲಯ, ಶೌಚಾಲಯ ಇಲ್ಲ: ವಿಜ್ಞಾನದ ವಿದ್ಯಾರ್ಥಿಗಳಿಗೆ ಪ್ರಯೋಗಾಲಯ ಅತಿ ಮುಖ್ಯ. ತರಗತಿಯಲ್ಲಿ ಉಪನ್ಯಾಸಕರು ಮಾಡಿದ ಪಾಠಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ಪ್ರಾಯೋಗಿಕ ಜ್ಞಾನ ಪಡೆಯಲು ಪ್ರಯೋಗಾಲಯ ಅತ್ಯಗತ್ಯ. ಆದರೆ, ಜಿಲ್ಲೆಯ ಹಲವು ಸರ್ಕಾರಿ ಕಾಲೇಜುಗಳಲ್ಲಿ ಪ್ರಯೋಗಾಲಯಗಳ ಕೊರತೆ ಇದೆ. ಪ್ರಯೋಗಾಲಯಕ್ಕೆ ಕೊಠಡಿ ನಿಗದಿಪಡಿಸಿದರೂ ಉಪಕರಣಗಳಿರುವುದಿಲ್ಲ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವ ಕಾಲೇಜುಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶದ ಕಾಲೇಜುಗಳಲ್ಲಿ ಈ ಸಮಸ್ಯೆ ತೀವ್ರವಾಗಿದೆ.

ಒಂದೂವರೆ ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮೂರು ಶೌಚಾಲಯಗಳಿವೆ. ಇವು ಕೂಡ ಬಾಗಿಲು ಮುಚ್ಚಿವೆ. ಚಿತ್ರದುರ್ಗ ತಾಲ್ಲೂಕಿನ ಅನ್ನೇಹಾಳ್‌ನ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಅತ್ಯಾಧುನಿಕ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಇವು ಎರಡು ವರ್ಷಗಳಿಂದ ಬಾಗಿಲು ಮುಚ್ಚಿವೆ.

ಸಮಸ್ಯೆಗಳಿಗೆ ಸಮಿತಿಯ ಬೇಲಿ
ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಗೆ ಶಾಸಕರೇ ಅಧ್ಯಕ್ಷರು. ಶಿಕ್ಷಣದ ಬಗೆಗೆ ಕಾಳಜಿ ಹೊಂದಿದವರು, ಪೋಷಕರು ಸೇರಿದಂತೆ ಊರಿನ ಪ್ರಮುಖರನ್ನು ಸದಸ್ಯರನ್ನಾಗಿ ಮಾಡಬೇಕು ಎಂಬುದು ನಿಯಮ. ಆದರೆ, ಬಹುತೇಕ ಸಮಿತಿಗಳಲ್ಲಿ ಶಾಸಕರ ಹಿಂಬಾಲಕರಿದ್ದಾರೆ.

ಕಾಲೇಜು ಅಭಿವೃದ್ಧಿಯ ವಿಚಾರಗಳು ಸಮಿತಿಯಲ್ಲಿ ಚರ್ಚೆಯಾಗಿ ಅನುಮೋದನೆ ಪಡೆಯಬೇಕು. ಸಮಸ್ಯೆಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾದರೆ ಶಾಸಕರಿಗೆ ಕೆಟ್ಟ ಹೆಸರು ಬರಬಹುದು ಎಂಬುದು ಸಮಿತಿಯ ಸದಸ್ಯರ ನಂಬಿಕೆ. ಬಹುತೇಕ ಸಮಸ್ಯೆಗಳು ಕಾಲೇಜಿನ ಕಾಂಪೌಂಡ್‌ ದಾಟಿ ಹೊರಗೆ ಬರುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.