ADVERTISEMENT

ಐ.ಪಿ. ಸೆಟ್‌ಗಳಿಗೆ ವಿದ್ಯುತ್‌ ಬಂದ್: ಆತಂಕದಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 16:20 IST
Last Updated 6 ಅಕ್ಟೋಬರ್ 2023, 16:20 IST
ಸಿರಿಗೆರೆ ೬೧ ಕೆವಿಎ ವಿದ್ಯುತ್‌ ವಿತರಣಾ ಕೇಂದ್ರ
ಸಿರಿಗೆರೆ ೬೧ ಕೆವಿಎ ವಿದ್ಯುತ್‌ ವಿತರಣಾ ಕೇಂದ್ರ   

ಸಿರಿಗೆರೆ: ರೈತರ ಐ.ಪಿ. ಸೆಟ್‌ಗಳಿಗೆ ಬೆಸ್ಕಾಂ ಗುರುವಾರ ರಾತ್ರಿಯಿಂದಲೇ ವಿದ್ಯುತ್‌ ಬಂದ್‌ ಮಾಡಿರುವುದರಿಂದ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಗುರುವಾರ ರಾತ್ರಿ 9 ಗಂಟೆವರೆಗೂ ವೇಳಾಪಟ್ಟಿಯಂತೆ ಎಲ್ಲ ಫೀಡರ್‌ಗಳಿಗೂ ವಿದ್ಯುತ್‌ ನೀಡಲಾಗಿದೆ. ರಾತ್ರಿ 9.30ರ ನಂತರ ಸಿರಿಗೆರೆಯ 16 ಕೆವಿಎ ವಿದ್ಯುತ್‌ ಜಾಲದಿಂದ ಎಲ್ಲ ಫೀಡರ್‌ಗಳಿಗೆ ವಿದ್ಯುತ್‌ ನಿಲುಗಡೆ ಮಾಡಲಾಗಿದೆ.

ವೇಳಾಪಟ್ಟಿಯಂತೆ ಎಫ್-‌11 ಫೀಡರ್‌ಗೆ ಬೆಳಿಗ್ಗೆ 6 ಗಂಟೆಯಿಂದ 8ರವರೆಗೆ ವಿದ್ಯುತ್‌ ನೀಡಬೇಕಿತ್ತು. ಆ ಸಮಯದಲ್ಲಿ ವಿದ್ಯುತ್‌ ವ್ಯತ್ಯಯವಾಗಿರುವುದನ್ನು ಗಮನಿಸಿದ ರೈತರು ಸಿರಿಗೆರೆಯ ವಿದ್ಯುತ್‌ ವಿತರಣಾ ಕಚೇರಿಯನ್ನು ಸಂಪರ್ಕಿಸಿದಾಗ ಬೆಸ್ಕಾಂ ಮೇಲಧಿಕಾರಿಗಳ ಸೂಚನೆಯಂತೆ ವಿದ್ಯುತ್‌ ಕಡಿತಗೊಳಿಸಲಾಗಿದೆ ಎಂಬ ಮಾಹಿತಿ ದೊರೆತಿದೆ.

ADVERTISEMENT

ಎ.ಎಲ್‌.ಡಿ.ಸಿ.ಯಿಂದ (ಏರಿಯಾ ಲೋಡ್‌ ಡಿಸ್ಪ್ಯಾಚ್‌ ಸೆಂಟರ್)‌ ಸೂಚನೆ ಬಂದಿರುವುದರಿಂದ ಎಲ್ಲ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ನಿಲ್ಲಿಸಲಾಗಿದೆ. ನಿರಂತರ ಜ್ಯೋತಿ ಸಂಪರ್ಕಗಳಿಗೆ ಮಾತ್ರವೇ ವಿದ್ಯುತ್‌ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಜಿಲ್ಲೆಯ ಬೇರೆ ವಿದ್ಯುತ್‌ ಜಾಲಗಳಿಂದ ರೈತರಿಗೆ ನಿತ್ಯವೂ 6 ಗಂಟೆಗಳಿಗೂ ಹೆಚ್ಚು ಕಾಲ ವಿದ್ಯುತ್‌ ನೀಡುತ್ತಿದ್ದಾರೆ. ಆದರೆ ಭರಮಸಾಗರ, ಸಿರಿಗೆರೆ, ಹಿರೇಗುಂಟನೂರು ಶಾಖಾ ವ್ಯಾಪ್ತಿಯ ಫೀಡರ್‌ಗಳಲ್ಲಿ ಮಾತ್ರ 5 ಗಂಟೆಯ ವಿದ್ಯುತ್‌ ನೀಡಲಾಗುತ್ತಿತ್ತು. ಈ ಕೊರತೆಯನ್ನು ನೀಗಿಸಬೇಕು ಎಂದು ರೈತರು ಹಲವು ಬಾರಿ ಮನವಿ ಮಾಡಿದ್ದರು. ಆದರೆ, ಈಗ ಬೆಸ್ಕಾಂ ಪೂರ್ತಿಯಾಗಿ ವಿದ್ಯುತ್‌ ಕಡಿತಗೊಳಿಸಿ ಸಂಕಷ್ಟಕ್ಕೆ ದೂಡಿದೆ’ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

‘ಸಿರಿಗೆರೆ ವಿತರಣಾ ಕೇಂದ್ರಕ್ಕೆ ಬರುವ ಇನ್‌ಪುಟ್‌ ಕಡಿಮೆಯಾಗಿದೆ. ಇದರಿಂದ ಐಪಿ ಸೆಟ್‌ ಫೀಡರ್‌ಗಳಿಗೆ ವಿದ್ಯುತ್‌ ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಮೇಲಿನ ಹಂತದಲ್ಲಿ ಮಾತುಕತೆ ನಡೆಯುತ್ತಿದೆ. ಮುಂದಿನ ಎರಡು– ಮೂರು ದಿನಗಳವರೆಗೂ ಇದೇ ಪರಿಸ್ಥಿತಿ ಮುಂದುವರಿಯಬಹುದು’ ಎಂದು ಸಿರಿಗೆರೆ ಬೆಸ್ಕಾಂ ಶಾಖಾಧಿಕಾರಿ ಹೊನ್ನೂಜಿ ತಿಳಿಸಿದರು.

ಪಂಪ್‌ಸೆಟ್‌ ನಂಬಿಕೊಂಡು 3 ಎಕರೆಯಲ್ಲಿ ಕೋಸು ಬೆಳೆಸಿದ್ದೇನೆ. ಈಗಾಗಲೇ ಐದು ಲಕ್ಷಕ್ಕೂ ಹೆಚ್ಚು ಹಣವನ್ನು ಸಾಲ ಮಾಡಿ ಖರ್ಚು ಮಾಡಿರುವೆ. ಬೆಳೆಗೆ ದಿನವೂ ನೀರು ಬೇಕು. ಮೂರ್ನಾಲ್ಕು ದಿನ ವಿದ್ಯುತ್‌ ಇಲ್ಲದಿದ್ದರೆ ಸಂಕಷ್ಟ ಎದುರಾಗಲಿದೆ.
-ಪ್ರಭು ರೈತ ಸಿರಿಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.