ADVERTISEMENT

ಚಿತ್ರದುರ್ಗ: 161 ಕಲಾವಿದರ ಬೃಹತ್‌ ವೀಣಾವಾದನ

ಹುತಾತ್ಮ ಸೈನಿಕರಿಗೆ ಗೌರವ ಸಮರ್ಪಣೆ, ಮೇ 28ರಂದು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಮೇ 2022, 13:28 IST
Last Updated 19 ಮೇ 2022, 13:28 IST

ಚಿತ್ರದುರ್ಗ: ಹುತಾತ್ಮ ಸೈನಿಕರು ಹಾಗೂ ಗೋಶಾಲೆಗಳಿಗೆ ಗೌರವ ಸಮರ್ಪಣೆಯ ಅಂಗವಾಗಿ ಒಂದೇ ವೇದಿಕೆಯಲ್ಲಿ 161ಕ್ಕೂ ಹೆಚ್ಚು ಕಲಾವಿದರಿಂದ ವೀಣಾ ವಾದನವನ್ನು ಮೇ 28ರಂದು ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಬದರೀನಾಥ್ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ರಾಷ್ಟ್ರೀಯತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶೇಷ ಸಮಾರಂಭವನ್ನು ಆಯೋಜಿಸಲಾಗಿದೆ. ವಿಶ್ವ ಹಿಂದೂ ಪರಿಷತ್, ವೀರಮದಕರಿ ಸೇವಾ ಟ್ರಸ್ಟ್‌ ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ನಗರದ ಹಲವರು ಕೈಜೋಡಿಸಿದ್ದಾರೆ. ಅಂದು ಸಂಜೆ 5.30ರಿಂದ ರಾತ್ರಿಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ’ ಎಂದು ಮಾಹಿತಿ ನೀಡಿದರು.

‘ವೀಣಾ ವಾದನಕ್ಕೆ ರಾಜ್ಯದ ಹಲವೆಡೆಯಿಂದ ಕಲಾವಿದರು ಆಗಮಿಸಲಿದ್ದಾರೆ. ಇಷ್ಟೊಂದು ಕಲಾವಿದರು ಒಂದೇ ವೇದಿಕೆಯಲ್ಲಿ ಸೇರುತ್ತಿರುವುದು ಇದೇ ಮೊದಲು. ಶಿವಮೊಗ್ಗದಲ್ಲಿ 108 ಕಲಾವಿದರು ವೀಣೆ ನುಡಿಸಿದ್ದರು. ಅಂದು ಬೆಳಿಗ್ಗೆ 9ಕ್ಕೆ ದೇಸಿ ತಳಿಯ ಗೋವುಗಳ ಪ್ರದರ್ಶನ ಹಾಗೂ ಸ್ಫರ್ಧೆ ನಡೆಯಲಿದೆ’ ಎಂದು ಹೇಳಿದರು.

ADVERTISEMENT

‘ಹುತಾತ್ಮರಾದ ಏಳು ಯೋಧರ ಕುಟುಂಬ ಹಾಗೂ ಭಯೋತ್ಪಾದಕರ ವಿರುದ್ಧ ಹೋರಾಡಿ ಶೌರ್ಯ ಪ್ರಶಸ್ತಿಗೆ ಭಾಜನರಾಗಿರುವ ಒಬ್ಬ ಯೋಧರಿಗೆ ಗೌರವ ಸಮರ್ಪಣೆ ಮಾಡಲಾಗುತ್ತಿದೆ. ಯಾದಗಿರಿ ಜಿಲ್ಲೆ ಶಹಾಪುರದ ವಿಶ್ವಮಾತಾ ಗೋಶಾಲೆ, ಹಾವೇರಿ ಜಿಲ್ಲೆ ಇನಾಂಲಕ್ಮಾಪುರದ ಗೋಪಾಲನ ಕುಟೀರ ಹಾಗೂ ಚಿತ್ರದುರ್ಗದ ಆದಿಚುಂಚನಗಿರಿ ಮಠದ ಗೋಶಾಲೆಗಳಿಗೆ ನಿಧಿ ಸಮರ್ಪಿಸಲಾಗುತ್ತದೆ’ ಎಂದರು.

‘ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿಎಚ್‍ಪಿ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಕಾರ್ಯಕ್ರಮ ಉದ್ಘಾಟಿಸುವರು. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ಅಧ್ಯಕ್ಷ ಅನೂರು ಅನಂತಕೃಷ್ಣ ಶರ್ಮ, ಚಕ್ರವರ್ತಿ ಸೂಲಿಬೆಲೆ ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳಿದರು.

ಸ್ವಾಗತ ಸಮಿತಿ ಅಧ್ಯಕ್ಷ ಡಾ.ಕೆ.ಎಸ್.ಮುಕುಂದರಾವ್, ಪ್ರಧಾನ ಕಾರ್ಯದರ್ಶಿ ಡಾ.ಸಿದ್ಧಾರ್ಥ್ ಗುಂಡಾರ್ಪಿ, ಸಂಚಾಲಕ ಪ್ರಭಂಜನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.