ಚಿತ್ರದುರ್ಗ: ‘ತುರುವನೂರು ಹೋಬಳಿ ವ್ಯಾಪ್ತಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಪ್ರಮುಖ ಆದ್ಯತೆ ನೀಡಲಾಗಿದ್ದು ₹ 30 ಕೋಟಿಗಿಂತ ಹೆಚ್ಚು ಅನುದಾನ ಒದಗಿಸಲಾಗಿದೆ. ಪಿಯು ಕಾಲೇಜು, ಬಾಲಕಿಯರ ಕಾಲೇಜು, ನೂತನ ಇಂಧಿರಗಾಂಧಿ ವಸತಿ ಶಾಲೆ ನಿರ್ಮಣ ಮಾಡಿದ್ದು ಸುತ್ತಮುತ್ತಲಿನ ನೂರಾರು ಹಳ್ಳಿಗಳ ಮಕ್ಕಳಿಗೆ ಶಿಕ್ಷಣಕ್ಕೆ ಅನುಕೂಲವಾಗುತ್ತಿದೆ’ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ತಾಲ್ಲೂಕಿನ ತುರುವನೂರು ಗ್ರಾಮದಲ್ಲಿ ನಡೆದ ಸರ್ಕಾರಿ ಹಿರಿಯ ಬಾಲಕರ ಶಾಲೆಯ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
‘ ₹ 2 ಕೋಟಿ ವೆಚ್ಚದಲ್ಲಿ ಹಿರಿಯ ಬಾಲಕರ ಶಾಲೆ ಅಭಿವೃದ್ಧಿ ಮಾಡುತ್ತಿದೆ. ಸರ್ಕಾರಿ ಹಿರಿಯ ಬಾಲಕರ ಶಾಲೆಯ ನಿರ್ಮಾಣಕ್ಕೆ ಡಿಎಂಎಫ್ ಅನುದಾನದಲ್ಲಿ ₹ 2 ಕೋಟಿ ನೀಡಿದ್ದು ಸುಂದರವಾದ ಕಟ್ಟಡದಲ್ಲಿ ಎಂಟು ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಸರ್ಕಾರಿ ಹಿರಿಯ ಬಾಲಕರ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಪ್ರಾರಂಭೋತ್ಸವ ಮಾಡಲಾಗುತ್ತಿದೆ. ತುರುವನೂರು ಗ್ರಾಮದಲ್ಲಿ ಪಬ್ಲಿಕ್ ಶಾಲೆ ಆರಂಭಿಸಲು ಎಲ್ಲಾ ಪ್ರಯತ್ನ ನಡೆಸಲಾಗಿದೆ’ ಎಂದರು.
‘ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಾಗಿದೆ. ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಸರ್ಕಾರಿ ಶಾಲೆಗಳ ಕಡೆ ಹೆಜ್ಜೆ ಹಾಕುವಂತೆ ಮಾಡಬೇಕಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡಲಾಗುತ್ತಿದ್ದು ಹಂತ ಹಂತವಾಗಿ ಎಲ್ಲಾ ಶಾಲೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಇಡೀ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್ ಫಲಿತಾಂಶ ಸುಧಾರಣೆಗಾಗಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗರತ್ನಮ್ಮ ಮಾರ್ಕಂಡಯ್ಯ, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಡಿಡಿಪಿಐ ಮಂಜುನಾಥ, ಬಿಇಓ ಎಸ್. ನಾಗಭೂಷಣ್, ಶಿಕ್ಷಣ ಸಂಯೋಜಕ ಸಂಪತ್ ಕುಮಾರ್, ಮುಖಂಡರಾದ ಬಾಬುರೆಡ್ಡಿ, ಸಂತೋಷ್, ಪಾಪಣ್ಣ, ಮಂಜುನಾಥ, ವಿವೇಕನಂದಪ್ಪ, ಚಂದ್ರಪ್ಪ, ಖಾಕಿ ಹನುಮಂತರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.