ADVERTISEMENT

ನೆರೆ ಸಂತ್ರಸ್ತರಿಗೆ ಮಿಡಿದ ಮಠಾಧೀಶರು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 20:00 IST
Last Updated 11 ಸೆಪ್ಟೆಂಬರ್ 2019, 20:00 IST
ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದಲ್ಲಿ ಸಚಿವ ಕೆ.ಎಸ್‌.ಈಶ್ವರಪ್ಪ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಮಾಧುಸ್ವಾಮಿ, ಬಿ.ಶ್ರೀರಾಮುಲು, ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಅವರನ್ನು ಮಠಾಧೀಶರು ಸನ್ಮಾನಿಸಿದರು  -– ಪ್ರಜಾವಾಣಿ ಚಿತ್ರ
ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದಲ್ಲಿ ಸಚಿವ ಕೆ.ಎಸ್‌.ಈಶ್ವರಪ್ಪ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಮಾಧುಸ್ವಾಮಿ, ಬಿ.ಶ್ರೀರಾಮುಲು, ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಅವರನ್ನು ಮಠಾಧೀಶರು ಸನ್ಮಾನಿಸಿದರು  -– ಪ್ರಜಾವಾಣಿ ಚಿತ್ರ   

ಚಿತ್ರದುರ್ಗ: ಪ್ರವಾಹ ಪರಿಸ್ಥಿತಿಯಿಂದ ನೆಲೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಸೂರು ಕಲ್ಪಿಸಿ ಬದುಕು ಕಟ್ಟಿಕೊಳ್ಳಲು ನೆರವಾಗುವಂತೆ ದಲಿತ ಮತ್ತು ಹಿಂದುಳಿದ ವರ್ಗಗಳ ಮಠಾಧೀಶರ ಒಕ್ಕೂಟ ರಾಜ್ಯ ಸರ್ಕಾರವನ್ನು ಕೋರಿತು.

ಮಾದಾರ ಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿದ್ದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ನೇತೃತ್ವದ ಸಚಿವರ ನಿಯೋಗ 28 ಮಠಾಧೀಶರೊಂದಿಗೆ ಚರ್ಚೆ ನಡೆಸಿತು. ನೆರೆ ಪರಿಹಾರ ಹಾಗೂ ಭದ್ರಾ ಮೇಲ್ದಂಡೆ ಯೋಜನೆಯ ತ್ವರಿತ ಅನುಷ್ಠಾನಕ್ಕೆ ಮಠಾಧೀಶರು ಮನವಿ ಮಾಡಿದರು.

ಒಕ್ಕೂಟದ ಅಧ್ಯಕ್ಷರೂ ಆಗಿರುವ ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ‘ಬೆಳಗಾವಿ ಮತ್ತು ಬಾಗಲ
ಕೋಟೆ ಸೇರಿ ರಾಜ್ಯದ ಹಲವೆಡೆ ಪ್ರವಾಹಕ್ಕೆ ಜನಜೀವನ ತತ್ತರಿಸಿದೆ. ಮಠಗಳೂ ಸೇರಿ ಹಲವು ಸಂಸ್ಥೆಗಳು ವಿತರಿಸಿದ ಪರಿಹಾರ ಸಾಮಗ್ರಿಗಳು ಸಂತ್ರಸ್ತರ ಉಪಯೋಗಕ್ಕೆ ಬಂದಿವೆ. ಆದರೆ, ಬದುಕು ಕಟ್ಟಿಕೊಳ್ಳಲು ನೆರವು ನೀಡಬೇಕು’ ಎಂದು ಕೋರಿದರು.

ADVERTISEMENT

‘ನೆರೆಗೆ ಬದುಕು ಕಳೆದುಕೊಂಡವರಲ್ಲಿ ದಲಿತರು ಹಾಗೂ ಹಿಂದುಳಿದ ವರ್ಗಗಳ ಜನರೇ ಹೆಚ್ಚಾಗಿದ್ದಾರೆ. ಜೀವನ ರೂಪಿಸಿಕೊಳ್ಳಲು ಸಂತ್ರಸ್ತರಿಗೆ ಸಹಾಯ ಮಾಡಬೇಕಿದೆ. ಮಧ್ಯ ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಯಾದ ಭದ್ರಾ ಮೇಲ್ದಂಡೆ ತ್ವರಿತವಾಗಿ ಅನುಷ್ಠಾನಗೊಳ್ಳಬೇಕು. ಇದರಿಂದ ಬರ ಪರಿಸ್ಥಿತಿಯನ್ನು ಹೋಗಲಾಡಿಸಲು ಸಾಧ್ಯವಿದೆ’ ಎಂದರು.

‘ಅನುದಾನ ಕೇಳುವ ಉದ್ದೇಶದಿಂದ ಸಚಿವರ ನಿಯೋಗ ಕರೆಸಿಲ್ಲ. ದಲಿತ, ಹಿಂದುಳಿದ ಮಠಾಧೀಶರೂ ಸಮಾಜಮುಖಿ ಎಂಬುದನ್ನು ತೋರಿಸಿದ್ದೇವೆ’ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.

"ಅನುದಾನ ಕೇಳುವ ಉದ್ದೇಶದಿಂದ ಸಚಿವರ ನಿಯೋಗವನ್ನು ಕರೆಸಿಲ್ಲ. ದಲಿತ ಮತ್ತು ಹಿಂದುಳಿದ ಮಠಾಧೀಶರು ಕೂಡ ಸಮಾಜಮುಖಿಯಾಗಿದ್ದಾರೆ ಎಂಬುದನ್ನು ತೋರಿಸಿದ್ದೇವೆ"
–ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ,ಮಾದಾರ ಚನ್ನಯ್ಯ ಗುರುಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.