ADVERTISEMENT

ಗ್ರಾ.ಪಂ. ಸದಸ್ಯರಿಂದ ಅನಿರ್ದಿಷ್ಟಾವಧಿ ಮುಷ್ಕರ

ತೆರಿಗೆ ಕಟ್ಟದೆ ವಂಚಿಸಿದ ಖಾಸಗಿ ಸೋಲಾರ್ ವಿದ್ಯುತ್ ಕಂಪನಿಗಳು: ಆರೋಪ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 17:07 IST
Last Updated 14 ಡಿಸೆಂಬರ್ 2018, 17:07 IST
ತೆರಿಗೆ ಕಟ್ಟದ ಸೋಲಾರ್ ಕಂಪೆನಿಗಳ ವಿರುದ್ಧ ನಾಯಕನಹಟ್ಟಿ ಹೋಬಳಿಯ ನೇರಲಗುಂಟೆ ಗ್ರಾಮ ಪಂಚಾಯಿತಿ ಸದಸ್ಯರು ಪ್ರತಿಭಟನೆ ನಡೆಸಿದರು
ತೆರಿಗೆ ಕಟ್ಟದ ಸೋಲಾರ್ ಕಂಪೆನಿಗಳ ವಿರುದ್ಧ ನಾಯಕನಹಟ್ಟಿ ಹೋಬಳಿಯ ನೇರಲಗುಂಟೆ ಗ್ರಾಮ ಪಂಚಾಯಿತಿ ಸದಸ್ಯರು ಪ್ರತಿಭಟನೆ ನಡೆಸಿದರು   

ನಾಯಕನಹಟ್ಟಿ: ಖಾಸಗಿ ಸೋಲಾರ್ ವಿದ್ಯುತ್ ಕಂಪನಿಗಳು ನಾಲ್ಕು ವರ್ಷದಿಂದ ಗ್ರಾಮ ಪಂಚಾಯಿತಿಗೆ ತೆರಿಗೆ ಕಟ್ಟದೆ ವಂಚಿಸಿದ್ದು, ಕೂಡಲೇ ತೆರಿಗೆ ಕಟ್ಟಬೇಕು ಎಂದು ಒತ್ತಾಯಿಸಿ ಎನ್. ದೇವರಹಳ್ಳಿ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಸ್. ದಿವಾಕರರೆಡ್ಡಿ, ‘ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರವು ಕಾವಲು ಪ್ರದೇಶದಲ್ಲಿ 993 ಎಕರೆ ಪ್ರದೇಶದಲ್ಲಿ ಪ್ರದೇಶದಲ್ಲಿ ಸ್ಯಾಜಿಟರಿ, ಎಂ-ಪ್ಲಸ್, ಗ್ರೀನ್ ಕೊ, ಫೋಟಾನ್ ಕಂಪನಿಗಳು ಸೋಲಾರ್ ವಿದ್ಯುತ್ ಘಟಕಗಳನ್ನು ಸ್ಥಾಪಿಸಿವೆ. ಇವು ಆರಂಭದಲ್ಲಿ ಯಾವುದೇ ನಿರಾಕ್ಷೇಪಣಾ ಪತ್ರವನ್ನು ಗ್ರಾಮ ಪಂಚಾಯಿತಿಯಿಂದ ತೆಗೆದುಕೊಂಡಿಲ್ಲ. ಪ್ರತಿ ವರ್ಷ ಗ್ರಾಮ ಪಂಚಾಯಿತಿಗೆ ಪ್ರತಿ ಮೆಗಾವಾಟ್‌ಗೆ ₹5 ಸಾವಿರ ತೆರಿಗೆ ಕಟ್ಟಬೇಕು ಎಂದು ಸರ್ಕಾರದ ಆದೇಶವಿದ್ದರೂ ಸೋಲಾರ್ ಕಂಪನಿಗಳು ಆದೇಶವನ್ನು ಉಲ್ಲಂಘಿಸಿವೆ’ ಎಂದು ಆರೋಪಿಸಿದರು.

ಈವರೆಗೆ ಯಾವುದೇ ತೆರಿಗೆ ಕಟ್ಟದೆ ಲಕ್ಷಾಂತರ ರೂಪಾಯಿ ತೆರಿಗೆ ವಂಚಿಸಿವೆ. ಈ ಹಿಂದೆ ಸುಮಾರು 6 ಬಾರಿ ತೆರಿಗೆ ಪಾವತಿಸುವಂತೆ ಕಂಪನಿಗಳಿಗೆ ನೋಟಿಸ್‌ ನೀಡಿದ್ದರೂ ಮಾಡಿದರೂ ಸೌಜನ್ಯಕ್ಕಾದರೂ ಪ್ರತ್ಯುತ್ತರ ನೀಡಿಲ್ಲ. ಹಾಗಾಗಿ ಈ ಕೂಡಲೇ ಗ್ರಾಮ ಪಂಚಾಯಿತಿಗೆ ತೆರಿಗೆ ಪಾವತಿಸಿದ್ದರೆ ಅನಿರ್ದಿಷ್ಟಾವದಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದಾದಾಯ್ಯ, ‘ಯಾವುದೇ ಕೈಗಾರಿಕೆಗಳು, ಉದ್ದಿಮೆಗಳು, ಮೊಬೈಲ್ ಟವರ್‌ಗಳನು ಸ್ಥಾಪಿಸಿದಾಗ ಕಂಪನಿಗಳು ತೆರಿಗೆ ಪಾವತಿಸಬೇಕು. ಉದ್ದಿಮೆಯ ಲಾಭಂಶದಲ್ಲಿ ಆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹಳ್ಳಿಗಳ ಮೂಲಸೌಕರ್ಯಗಳಿಗೆ, ಶಿಕ್ಷಣಕ್ಕೆ ಆರ್ಥಿಕ ಧನ ಸಹಾಯ ಒದಗಿಸಬೇಕು ಎನ್ನುವುದು ನಿಯಮ. ಆದರೆ ನಮ್ಮ ಕಂದಾಯ ಭೂಮಿಯಲ್ಲಿ 4 ವರ್ಷಗಳಿಂದ ದಿನವೊಂದಕ್ಕೆ 165 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಿದರೂ ಈವರೆಗೂ ಒಂದು ಪೈಸೆ ತೆರಿಗೆ ಕಟ್ಟಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಹಾರ ಸೂಚಿಸದ್ದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಸ್ಯಾಜಿಟರಿ ಸೋಲಾರ್ ಘಟಕದ ವ್ಯವಸ್ಥಾಪಕ ಸೂರ್ಯನಾರಾಯಣ, ‘ಗ್ರಾಮ ಪ್ರತಿಭಟನೆಯ ವಿಷಯವನ್ನು ಕಂಪನಿಯ ಉನ್ನತಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಈ ತಿಂಗಳ ಅಂತ್ಯದೊಳಗಡೆ ತೆರಿಗೆ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆಂಚಮ್ಮ, ಸದಸ್ಯರಾದ ಪಿ.ನಾಗರಾಜ್, ರುದ್ರಪ್ಪ, ಸುಮಿತ್ರಮ್ಮ ತಿಪ್ಪೇಸ್ವಾಮಿ, ಪುಷ್ಪಲತಾ, ಸುಮಿತ್ರಮ್ಮ ರಾಜಣ್ಣ, ಲಕ್ಷ್ಮಣನಾಯ್ಕ, ತಿಪ್ಪೇಸ್ವಾಮಿ, ಶಾಂತಮ್ಮ, ಜಯಮ್ಮ, ಮುಖಂಡರಾದ ಎಚ್.ನಾಗರಾಜ್, ಪಾಲಯ್ಯ, ಮಲ್ಲೇಶಪ್ಪ, ಕೆಂಡಪ್ಪ, ಕರಿಯಪ್ಪ, ರಾಜಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.