ADVERTISEMENT

ಚಿತ್ರದುರ್ಗ: ಯುವತಿ ಅತ್ಯಾಚಾರ ಖಂಡಿಸಿ ಪ್ರತಿಭಟನೆ

ಉತ್ತರಪ್ರದೇಶ ಸರ್ಕಾರದ ವಿರುದ್ಧ ಕಿಡಿ, ಕಠಿಣ ಶಿಕ್ಷೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 12:12 IST
Last Updated 1 ಅಕ್ಟೋಬರ್ 2020, 12:12 IST
ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಅಖಿಲ ಭಾರತೀಯ ಮಹಿಳಾ ಸಾಂಸ್ಕೃತಿಕ ಸಂಘಟನೆ ನೇತೃತ್ವದಲ್ಲಿ ಗುರುವಾರ ‍ಪ್ರತಿಭಟನೆ ನಡೆಯಿತು.
ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಅಖಿಲ ಭಾರತೀಯ ಮಹಿಳಾ ಸಾಂಸ್ಕೃತಿಕ ಸಂಘಟನೆ ನೇತೃತ್ವದಲ್ಲಿ ಗುರುವಾರ ‍ಪ್ರತಿಭಟನೆ ನಡೆಯಿತು.   

ಚಿತ್ರದುರ್ಗ: ಉತ್ತರಪ್ರದೇಶದ ಹತ್ರಾಸ್‌ ಜಿಲ್ಲೆಯಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಪ್ರಕರಣ ಖಂಡಿಸಿ ಅಖಿಲ ಭಾರತೀಯ ಮಹಿಳಾ ಸಾಂಸ್ಕೃತಿಕ ಸಂಘಟನೆಯ (ಎಐಎಂಎಸ್‍ಎಸ್ ) ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ಒನಕೆ ಓಬವ್ವ ವೃತ್ತದಲ್ಲಿ ಪ್ಲೆಕಾರ್ಡ್‌ ಪ್ರದರ್ಶಿಸಿದ ಪ್ರತಿಭಟನಾಕಾರು, ಉತ್ತರಪ್ರದೇಶ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅತ್ಯಾಚಾರ ಮತ್ತು ಕೊಲೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.

‘ಬೇಟಿ ಬಜಾವೊ– ಬೇಟಿ ಪಡಾವೊ ಕೇವಲ ಘೋಷಣೆಗೆ ಸೀಮಿತವಾಗಿವೆ. ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಯುವಕರ ವಿರುದ್ಧ ಕಾನೂನು ಕ್ರಮ ಜರುಗಿಸುವಲ್ಲಿ ಉತ್ತರಪ್ರದೇಶ ಸರ್ಕಾರ ವಿಫಲವಾಗಿದೆ. ಅತ್ಯಚಾರ, ದೌರ್ಜನ್ಯಕ್ಕೆ ಪ್ರೇರಣೆ ನೀಡುವ ಅಶ್ಲೀಲ ಜಾಲತಾಣ, ಸಿನಿಮಾ ಹಾಗೂ ಮಾದಕ ವಸ್ತುಗಳನ್ನು ನಿಷೇಧಿಸಬೇಕು’ ಎಂದು ಎಐಎಂಎಸ್‍ಎಸ್ ಜಿಲ್ಲಾ ಸಹ ಸಂಚಾಲಕಿ ತ್ರಿವೇಣಿ ಸೇನ್ ಒತ್ತಾಯಿಸಿದರು.

ADVERTISEMENT

ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಯೂಥ್‌ ಆರ್ಗನೈಸೇಷನ್‌ (ಎಐಡಿವೈಓ) ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ್‌, ‘ಅತ್ಯಾಚಾರ ಎಸಗಿದ ದುಷ್ಕರ್ಮಿಗಳು ಯುವತಿಯ ನಾಲಿಗೆ ಕತ್ತರಿಸಿ ವಿಕೃತಿ ಮೆರೆದಿದ್ದಾರೆ. ಚಿಕಿತ್ಸೆ ನೀಡಿ ಸಂತ್ರಸ್ತೆಗೆ ನೆರವಾಗುವ ಬದಲು ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ. ಆಸ್ಪತ್ರೆಗೆ ದಾಖಲಿಸದೇ ನಿರ್ಲಕ್ಷ್ಯ ತೋರಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಉತ್ತರಪ್ರದೇಶದ ಆಡಳತಾರೂಢ ಬಿಜೆಪಿ ಸರ್ಕಾರ ಮಹಿಳಾ ವಿರೋಧಿ ಧೋರಣೆ ಅನುಸರಿಸುತ್ತಿದೆ. ಮಹಿಳೆಯರು ಮತ್ತು ಮಕ್ಕಳ ಮೇಲಾಗುತ್ತಿರುವ ಅತ್ಯಾಚಾರ ಹಾಗೂ ಕೊಲೆಗೆ ಕೊನೆ ಇಲ್ಲದಂತಾಗಿದೆ. ಈ ಪ್ರಕರಣವನ್ನು ನ್ಯಾಯಾಲಯ ತ್ವರಿತವಾಗಿ ವಿಲೇವಾರಿ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು’ ಎಂದು ಮನವಿ ಮಾಡಿದರು.

ಮುಖಂಡರಾದ ಹೇಮಲತಾ, ಸಂಧ್ಯಾ, ಸಿಂಧೂ, ರೂಪ, ಯುವರಾಜ್, ರವಿ, ಸಂಜಯ್‌ ಇದ್ದರು.

ರಾಷ್ಟ್ರಪತಿಗೆ ಮನವಿ

ಹತ್ರಾಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಕಾಂಗ್ರೆಸ್ ಪದವೀಧರ ವಿಭಾಗ ರಾಷ್ಟ್ರಪತಿಗೆ ಮನವಿ ರವಾನೆ ಮಾಡಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಕಾಂಗ್ರೆಸ್‌ ಕಾರ್ಯಕರ್ತರು ಯುವತಿ ಸಾವಿಗೆ ಶೋಕ ವ್ಯಕ್ತಪಡಿಸಿದರು. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ಮುದಾಸೀರ್‌ ನವಾಜ್‌, ಡಿ.ಎನ್.ಮೈಲಾರಪ್ಪ, ಅಜ್ಜಪ್ಪ, ಶಬ್ಬೀರ್‌ ಬಾಷಾ ಇದ್ದರು.

ಹಿಂದೂ ಯುವಸೇನೆ ಖಂಡನೆ

ಅತ್ಯಾಚಾರ ಎದಸಿಗದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಹಿಂದೂ ಯುವ ಸೇನೆಯ ಒತ್ತಾಯಿಸಿದೆ.

‘ಯುವತಿಯ ಮೇಲೆ ಅತ್ಯಾಚಾರ ಎಸಗಿ ನಾಲಿಗೆ ಸೀಳಿ ಕೊಲೆ ಮಾಡಿದ್ದು ಅಮಾನುಷವಾಗಿದೆ. ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯ ಇದಾಗಿದೆ. ಈ ಘಟನೆಯನ್ನು ಹಿಂದೂ ಯುವ ಸೇನೆ ಖಂಡಿಸುತ್ತದೆ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಇ.ನಾಗರಾಜ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.