ಚಿತ್ರದುರ್ಗ: ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗುವಂತೆ ಮಾತನಾಡಿರುವ ನಟ ಕಮಲ ಹಾಸನ್ ಅವರ ‘ಥಗ್‌ಲೈಫ್’ ಚಿತ್ರ ಬಿಡುಗಡೆಗೆ ರಾಜ್ಯದಲ್ಲಿ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಕರವೇ (ನಾರಾಯಣಗೌಡ ಬಣ) ಕಾರ್ಯಕರ್ತರು ಶುಕ್ರವಾರ ಒನಕೆ ಓಬವ್ವ ವೃತ್ತದಲ್ಲಿ ನಟನ ಭಾವಚಿತ್ರ ಸುಟ್ಟು ಪ್ರತಿಭಟನೆ ನಡೆಸಿದರು.
ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ಹೇಳಿಕೆ ನೀಡಿರುವ ಕಮಲ ಹಾಸನ್ ನಡೆ ಖಂಡನೀಯ. ಕನ್ನಡ ಭಾಷೆಯ ಇತಿಹಾಸ ತಿಳಿಯದೆ ಕಮಲಹಾಸನ್ ಲಘುವಾಗಿ ಮಾತನಾಡಿರುವುದು ಯಾರೂ ಒಪ್ಪುವುದಿಲ್ಲ. ಕನ್ನಡ ಭಾಷೆಗೆ ಐದು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ಲಿಪಿಗೆ ಲಿಪಿಗಳ ರಾಣಿ ಎಂದು ಕರೆಯುತ್ತಾರೆ. ನಮ್ಮ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ವಾಸ್ತವವನ್ನು ಅರಿಯದ ಅವರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಟ ಕಮಲ ಹಾಸನ್ ತನ್ನ ಪ್ರಚಾರಕ್ಕಾಗಿ ದೊಡ್ಡ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಅಪಮಾನ ಮಾಡಿದ್ದಾರೆ. ಈ ಅಸಂಬದ್ಧ ಹೇಳಿಕೆ ಕನ್ನಡದ ಅಸ್ಮಿತೆಗೆ ಧಕ್ಕೆಯಾಗಿದೆ. ಅವರ ಸಿನಿಮಾ ರಾಜ್ಯದಲ್ಲಿ ಬಿಡುಗಡೆ ಆಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಚಿತ್ರದ ವಿತರಕರು ತಮ್ಮ ಹೂಡಿಕೆ ರಕ್ಷಿಸಿಕೊಳ್ಳಲು ಬೇರೆ ಕ್ರಮ ಕೈಗೊಳ್ಳಬೇಕು. ತಮಿಳು ಭಾಷೆಯಿಂದ ಕನ್ನಡ ಭಾಷೆ ಉಗಮವಾಯಿತು ಎಂಬ ತಪ್ಪು ಭಾವನೆ ಮೂಡಿಸಲು ಯತ್ನಿಸಿರುವ ಅವರು ಕ್ಷಮೆ ಕೋರದಿರುವುದು ಉದ್ದಟತನದ ಪರಮಾವಧಿಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನಟ ಜೊತೆಗೆ ರಾಜಕಾರಣಿಯೂ ಆಗಿರುವ ಕಮಲ ಹಾಸನ್ ಅವರ ಹೇಳಿಕೆ ಅಸಂಬದ್ಧವಾಗಿದೆ. ಕನ್ನಡ ಭಾಷೆಯ ಶ್ರೀಮಂತ ಇತಿಹಾಸದ ಬಗ್ಗೆ ಅವರಿಗೆ ಅರಿವಿಲ್ಲ. ಅವರ ಹೇಳಿಕೆ ಕನ್ನಡ ಸಂಸ್ಕೃತಿ ಮತ್ತು ಕನ್ನಡಿಗರ ಸ್ವಾಭಿಮಾನಕ್ಕೆ ತೀವ್ರ ಅಘಾತವನ್ನುಂಟು ಮಾಡಿದೆ. ಅವರ ಹೊಸ ಚಿತ್ರ ‘ಥಗ್‌ಲೈಪ್’ ಚಿತ್ರ ಜೂನ್ 5ರಂದು ಬಿಡುಗಡೆಗೆ ಸಿದ್ಧವಾಗಿದೆ. ಕರ್ನಾಟಕದಲ್ಲಿ ಈ ಚಿತ್ರದ ಬಿಡುಗಡೆಗೆ ಯಾವುದೇ ಸಹಕಾರವನ್ನು ನೀಡಬಾರದು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ನಟ ಕಮಲಹಾಸನ್ ರವರ ಭಾವಚಿತ್ರಕ್ಕೆ ಬೆಂಕಿ ಹಚ್ಚುವುದರ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು. ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಟಿ.ರಮೇಶ್, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ರಾಜಪ್ಪ, ನಗರಾಧ್ಯಕ್ಷ ಪಿ.ರಮೇಶ್, ಮುಖಂಡರಾದ ಎಸ್.ಬಿ.ಗಣೇಶ್, ಆರ್.ಬಿ.ಲಕ್ಷ್ಮಣ, ನೀಲಕಂಠ, ಘನಶ್ಯಾಮ್, ಪ್ರಸಾದ್ ಮಲ್ಲ, ರಮೇಶ್, ರಾಮು, ರಾಮಕೃಷ್ಣಪ್ಪ, ದಾದಾಪೀರ್, ಚಂದ್ರಕಲಾ, ದ್ರಾಕ್ಷಾಯಿಣಿ. ಮಂಜುಳಾ, ಸುಮಾ ಇದ್ದರು.
Highlights - ಕನ್ನಡ ಭಾಷಿಗರ ಸ್ವಾಭಿಮಾನಕ್ಕೆ ಧಕ್ಕೆ ಕ್ಷಮೆ ಕೋರದೇ ಇರುವುದು ಉದ್ಧಟತನ ಚಿತ್ರ ಬಿಗುಡಗಡೆ ತಡೆಯೊಡ್ಡಲು ಒತ್ತಾಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.