ADVERTISEMENT

13 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಿ: ಗೋವಿಂದ ಕಾರಜೋಳ

ಸಂಸದ ಕಾರಜೋಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2025, 15:37 IST
Last Updated 6 ಫೆಬ್ರುವರಿ 2025, 15:37 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಸಿರಿಗೆರೆ: ರಾಜ್ಯದಲ್ಲಿ ಇನ್ನೂ 13 ಲಕ್ಷ ಹೆಕ್ಟೇರ್‌ ಪ್ರದೇಶವನ್ನು ನೀರಾವರಿಗೆ ಒಳಪಡಿಸಬಹುದಾಗಿದ್ದು ಆ ಯೋಜನೆಯನ್ನು ಸರ್ಕಾರ ಕೂಡಲೇ ಕೈಗೆತ್ತಿಕೊಳ್ಳಬೇಕು. ಈ ವಿಚಾರದಲ್ಲಿ ಸಾಧ್ಯವಾದರೆ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಭೇಟಿ ಆಗಲು ನಾನು ಸಿದ್ಧನಿದ್ದೇನೆ ಎಂದು ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದರು.

ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಗುರುವಾರ ಮಾತನಾಡಿದರು.

ವೇದಿಕೆಯ ಮೇಲಿದ್ದ ಕಾಂಗ್ರೆಸ್‌ ಶಾಸಕರಾದ ಎಚ್.ಡಿ. ತಮ್ಮಯ್ಯ, ವೀರೇಂದ್ರ ಪಪ್ಪಿ, ಬಿ. ದೇವೇಂದ್ರಪ್ಪ, ಪ್ರಕಾಶ್‌ ಕೋಳಿವಾಡ ಅವರತ್ತ ನೋಡಿ ಈ ಒತ್ತಾಯವನ್ನು ಮುಖ್ಯಮಂತ್ರಿ ಮೇಲೆ ತರಬೇಕು. ಜೊತೆಗೆ ನಾನೂ ಬರುವೆ. ನೀವೆಲ್ಲ ಇನ್ನೂ 30 ವರ್ಷಗಳ ಕಾಲ ರಾಜಕೀಯದಲ್ಲಿ ಇರುವವರು. ಈ ಕೆಲಸ ಮಾಡಿ ಎಂದು ಹೇಳಿದರು.

ADVERTISEMENT

66 ಲಕ್ಷ ಹೆಕ್ಟೇರ್‌ ಭೂಮಿಯನ್ನು ನೀರಾವರಿಗೆ ಒಳಪಡಿಸಬಹುದಾಗಿದ್ದು, ಬೃಹತ್‌ ನೀರಾವರಿ ಇಲಾಖೆಯಿಂದ 40 ಲಕ್ಷ ಹೆಕ್ಟೇರ್‌ ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ 10 ಲಕ್ಷ ಹೆಕ್ಟೇರ್‌ ಭೂಮಿಗೆ ನೀರು ಸಿಕ್ಕಿದೆ. ರೈತರು ಸ್ವಂತ ಬಂಡವಾಳದಲ್ಲಿ  16 ಲಕ್ಷ ಎಕರೆ ಭೂಮಿಗೆ ನೀರಿನ ಸೌಲಭ್ಯ ಒದಗಿಸಿಕೊಂಡಿದ್ದಾರೆ. ಉಳಿದಿರುವ ಭೂಮಿಗೆ ನೀರಿನ ಅಗತ್ಯವಿದೆ. ಅದನ್ನು ಸರ್ಕಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಸಮಸಮಾಜ ನಿರ್ಮಾಣದ ಉದ್ದೇಶ ಹೊಂದಿ, ಬಸವತತ್ವದ ತೇರನ್ನು ಎಳೆಯುತ್ತಿರುವ ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗೆ ಸಾಮಾಜಿಕ ಕಳಕಳಿ ಇದೆ. ಆ ಕಾರಣದಿಂದಲೇ ಅವರು ಹಲವು ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಕಾರಣರಾಗಿದ್ದಾರೆ. ಅವರ ಸೇವಾ ಕಾರ್ಯದಲ್ಲಿ ಜನರು ಕೈಜೋಡಿಸಬೇಕು ಎಂದರು.

‘ಹಿಂದೆ ರಾಜಕಾರಣ ಸಮಾಜದ ಸೇವೆಗಾಗಿ ಬಳಕೆಯಾಗುತ್ತಿತ್ತು. ಇಂದು ರಾಜಕಾರಣ ಎಂದರೆ ಹಣ ಮತ್ತು ಅಧಿಕಾರಕ್ಕೆ ಬಳಕೆಯಾಗುತ್ತಿದೆ. ರಾಜಕಾರಣಿಗಳು ಬಡಜನರ ಚಿಂತೆ ಮಾಡಿ, ದೇಶದಲ್ಲಿ ಸಂವಿಧಾನವೂ, ಹಿಂದುತ್ವವೂ ಉಳಿಯುತ್ತದೆ’ ಎಂದು ಚಿತ್ರನಟ ಮುಖ್ಯಮಂತ್ರಿ ಚಂದ್ರು ಹೇಳಿದರು.

ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಕೆ.ಎಸ್.‌ ಬಸವಂತಪ್ಪ, ಬಿ.ಪಿ. ಹರೀಶ್‌, ವಿಧಾನಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ, ಎಚ್.ಕೆ. ಸುರೇಶ್‌, ಮಿಮಿಕ್ರಿ ಗೋಪಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.