ADVERTISEMENT

ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್‌ ಸಜ್ಜು

ಏ.13ರಂದು ರಾಹುಲ್‌ ಗಾಂಧಿ ಚಿತ್ರದುರ್ಗಕ್ಕೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 15:34 IST
Last Updated 10 ಏಪ್ರಿಲ್ 2019, 15:34 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ಚಿತ್ರದುರ್ಗ: ಬಿಜೆಪಿ ಪ್ರಚಾರ ರ‍್ಯಾಲಿಯ ಬೆನ್ನಲ್ಲೇ ಕಾಂಗ್ರೆಸ್‌–ಜೆಡಿಎಸ್‌ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿವೆ. ಏ.13ರಂದು ನಗರದ ವಿಜ್ಞಾನ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಆಹ್ವಾನ ನೀಡಿವೆ.

ಚಿತ್ರದುರ್ಗ ಸೇರಿ ರಾಜ್ಯದ ಮೂರು ಲೋಕಸಭಾ ಕ್ಷೇತ್ರದಲ್ಲಿ ರಾಹುಲ್‌ ಗಾಂಧಿ ಚುನಾವಣಾ ಪ್ರಚಾರ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಸಮಾವೇಶ ನಿಗದಿಯಾಗಿದ್ದು, ಲಕ್ಷ ಜನರನ್ನು ಸೇರಿಸಲು ಮೈತ್ರಿ ಪಕ್ಷಗಳು ಮುಂದಾಗಿವೆ.

ಪ್ರಧಾನಿ ನರೇಂದ್ರ ಮೋದಿ ರ‍್ಯಾಲಿ ನಡೆಸಿದ ವಿಜ್ಞಾನ ಕಾಲೇಜು ಮೈದಾನದಲ್ಲೇ ಕಾಂಗ್ರೆಸ್‌ ಸಮಾವೇಶ ನಡೆಯಲಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆಯಿಂದ ಕಾಂಗ್ರೆಸ್‌ ಅನುಮತಿ ಪಡೆದುಕೊಂಡಿದೆ. ಮೈತ್ರಿ ಪಕ್ಷಗಳ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪ ಹಾಗೂ ಮಾಜಿ ಸಚಿವ ಎಚ್‌.ಆಂಜನೇಯ ಸೇರಿ ಅನೇಕರು ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

ಏ.13ರಂದು ಬೆಳಿಗ್ಗೆ 11ಕ್ಕೆ ಕೋಲಾರದಲ್ಲಿ ನಡೆಯಲಿರುವ ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್‌ ಪಾಲ್ಗೊಳ್ಳಲಿದ್ದಾರೆ. ಅಲ್ಲಿಂದ ನೇರವಾಗಿ ಹೆಲಿಕಾಪ್ಟರ್‌ ಮೂಲಕ ಚಿತ್ರದುರ್ಗಕ್ಕೆ ಆಗಮಿಸಲಿದ್ದಾರೆ. ಸಭೆ ಉದ್ದೇಶಿಸಿ ಮಾತನಾಡಿ ಮೈಸೂರಿಗೆ ತೆರಳಲಿದ್ದಾರೆ.

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಡಿ.ಕೆ.ಶಿವಕುಮಾರ್‌ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಶಿರಾ, ಪಾವಗಡ ಸೇರಿ ಕ್ಷೇತ್ರ ವ್ಯಾಪ್ತಿಯ ಎಲ್ಲ ತಾಲ್ಲೂಕಿನ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಹುಲ್‌ ಗಾಂಧಿ ಅವರು ಚಿತ್ರದುರ್ಗಕ್ಕೆ ಭೇಟಿ ನೀಡುತ್ತಿರುವುದು ಮೂರನೇ ಬಾರಿ. 2009ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅವರು ಕೋಟೆ ನಾಡಿಗೆ ಬಂದಿದ್ದರು. 2018ರಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಹೊಳಲ್ಕೆರೆಯಲ್ಲಿ ರೋಡ್‌ ಷೋ ನಡೆಸಿದ್ದರು.

ಚುನಾವಣಾ ಪ್ರಚಾರ ಸಮಾವೇಶವನ್ನು ಹಿರಿಯೂರಿನಲ್ಲಿ ನಡೆಸಲು ಕಾಂಗ್ರೆಸ್‌ ಉದ್ದೇಶಿಸಿತ್ತು. ಮೂರು ಮೈದಾನಗಳನ್ನು ಗುರುತು ಮಾಡಲಾಗಿತ್ತು. ರಾಹುಲ್‌ ಗಾಂಧಿ ಅವರ ಭದ್ರತಾ ಸಿಬ್ಬಂದಿ ಒಪ್ಪಿಗೆ ಸೂಚಿಸದ ಪರಿಣಾಮ ಸಮಾವೇಶವನ್ನು ಚಿತ್ರದುರ್ಗಲ್ಲಿ ನಡೆಸಲಾಗುತ್ತಿದೆ.

**

ಚಂದ್ರಪ್ಪ ಅವರಿಗೆ ‘ಬಿ’ ಫಾರಂ ಸಿಕ್ಕಾಗಲೇ ರಾಹುಲ್ ಕರೆಸಲು ತೀರ್ಮಾನಿಸಲಾಗಿತ್ತು. ಇದಕ್ಕೆ ಕಾಲಾವಕಾಶ ಕೋರಿದ್ದೆವು. ಮೋದಿ ರ‍್ಯಾಲಿಗೆ ಪ್ರತಿಯಾಗಿ ಸಮಾವೇಶ ಮಾಡುತ್ತಿಲ್ಲ.
–ಎಚ್‌.ಆಂಜನೇಯ,ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.