ಚಿತ್ರದುರ್ಗ: ‘ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಶೇ 90ರಷ್ಟು ಪೂರ್ಣಗೊಂಡಿದೆ. ಕೆಲವು ಕಡೆಗಳಲ್ಲಿ ಮಾತ್ರ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಇದೆ. ಎಲ್ಲಾ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿ 2027ರ ಡಿಸೆಂಬರ್ ವೇಳೆಗೆ ಯೋಜನೆಯನ್ನು ಲೋಕಾರ್ಪಣೆ ಮಾಡಲಾಗುವುದು’ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ದಾವಣಗೆರೆ -ಚಿತ್ರದುರ್ಗ- ತುಮಕೂರು ನೇರ ರೈಲ್ವೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಬಾಕಿ ಉಳಿದಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ವಿಶೇಷ ಭೂಸ್ವಾಧೀನಾಧಿಕಾರಿ ಶ್ರಮಿಸುತ್ತಿದ್ದಾರೆ. ಎಲ್ಲಾ ಪ್ರಕ್ರಿಯೆ ಶೀಘ್ರ ಪೂರ್ಣಗೊಳ್ಳಲಿದೆ. ರೈಲ್ವೆ ಇಲಾಖೆಗೆ ಭೂಮಿ ಹಸ್ತಾಂತರ ಮಾಡಿದ ಕೂಡಲೇ ಕಾಮಗಾರಿ ಆರಂಭಗೊಳ್ಳಲಿದ್ದು ಸಮರೋಪಾದಿಯಲ್ಲಿ ಕಾಮಗಾರಿ ನಡೆಯಲಿದೆ’ ಎಂದರು.
‘ದೇಶದಾದ್ಯಂತ 20–30 ವರ್ಷಗಳಿಂದಲೂ ನನೆಗುದಿಗೆ ಬಿದ್ದಿರುವ 7.25 ಲಕ್ಷ ರೈಲ್ವೆ ಯೋಜನೆಗಳಿವೆ. ಈ ಯೋಜನೆಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ದೇಶ ಅಭಿವೃದ್ಧಿಯಾಗಬೇಕಾದರೆ ಎಲ್ಲಾ ರಾಜ್ಯಗಳು ಅಭಿವೃದ್ಧಿಯಾಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆ’ ಎಂದರು.
‘ರಾಯದುರ್ಗ-ತುಮಕೂರು ಯೋಜನೆ ಕೂಡ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಟೆಂಡರ್ ಕರೆಯಲಾಗಿದ್ದು, ಇನ್ನೂ ಎರಡು ಕಡೆ ಶೀಘ್ರದಲ್ಲಿ ಕೆಲಸ ಪ್ರಾರಂಭವಾಗಲಿದೆ. ಇದು ಕೂಡ 2027ರ ವೇಳೆಗೆ ಪೂರ್ಣಗೊಳ್ಳಲಿದೆ. ಹೊಸದಾಗಿ ನಿರ್ಮಾಣವಾಗುವ ರೈಲ್ವೆ ಮೇಲ್ಸೇತುವೆ ಹಾಗೂ ಕೆಳಸೇತುವೆಗಳಿಗೆ ಭೂಸ್ವಾಧೀನ ಆಗಬೇಕಾಗಿದೆ. ರಾಜ್ಯ ಸರ್ಕಾರಕ್ಕೆ ಭೂಸ್ವಾಧೀನ ಮಾಡುವಂತೆ ಮನವಿ ಮಾಡಲಾಗಿದೆ. ಭೂಸ್ವಾಧೀನಕ್ಕೆ ಹಾಗೂ ಸೇತುವೆಗಳ ಕಾಮಗಾರಿಗೆ ತಗಲುವ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ’ ಎಂದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ ‘ಚಿತ್ರದುರ್ಗ ಹಾಗೂ ಹಿರಿಯೂರು ತಾಲ್ಲೂಕಿನಲ್ಲಿ 1,211 ಎಕರೆ ಜಮೀನಿನ ಅವಶ್ಯಕತೆ ಇದೆ. ಈ ಪೈಕಿ 1,026 ಎಕರೆ ಜಮೀನಿನ ಮಾಲೀಕರಿಗೆ ಪರಿಹಾರ ವಿತರಿಸಲಾಗಿದೆ. ಭರಮಸಾಗರ-ಚಿತ್ರದುರ್ಗ ಮಾರ್ಗದ 36 ಕಿ.ಮೀ. ವ್ಯಾಪ್ತಿಯಲ್ಲಿ 348 ಎಕರೆ ಪೈಕಿ 312 ಎಕರೆಯನ್ನು ಈಗಾಗಲೇ ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದ್ದು ಕಾಮಗಾರಿ ಆರಂಭವಾಗಿದೆ’ ಎಂದರು.
‘ಹೆಚ್ಚುವರಿಯಾಗಿ 41 ಎಕರೆ ಭೂಮಿಗೆ ರೈಲ್ವೆ ಇಲಾಖೆ ಬೇಡಿಕೆ ಸಲ್ಲಿಸಿದ್ದು, ಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಚಿತ್ರದುರ್ಗ-ಹಿರಿಯೂರು ಮಾರ್ಗದ 36 ಕಿ.ಮೀ. ವ್ಯಾಪ್ತಿಯಲ್ಲಿ ಅಗತ್ಯವಿರುವ 383 ಎಕರೆ ಪೈಕಿ 338 ಎಕರೆಯನ್ನು ಇಲಾಖೆಗೆ ಹಸ್ತಾಂತರಿಸಲಾಗಿದೆ. 44 ಎಕರೆ ಹೆಚ್ಚುವರಿಯಾಗಿ ಡಿ.ಎಸ್. ಹಳ್ಳಿಯಲ್ಲಿ ನಿಲ್ದಾಣ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಬೇಡಿಕೆ ಸಲ್ಲಿಸಿದ್ದು, ಸ್ವಾಧೀನ ಪ್ರಕ್ರಿಯೆ ನಡೆದಿದೆ. ಹಿರಿಯೂರು-ತಾವರೆಕೆರೆ ಮಾರ್ಗದ 29 ಕಿ.ಮೀ. ವ್ಯಾಪ್ತಿಯಲ್ಲಿ 478 ಎಕರೆ ಪೈಕಿ 374 ಎಕರೆ ಜಮೀನನ್ನು ಹಸ್ತಾಂತರಿಸಲಾಗಿದೆ. ಬಾಕಿ 104 ಎಕರೆ ಜಮೀನನ್ನು ಕೂಡ ರೈಲ್ವೆ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆದಿದೆ’ ಎಂದರು.
‘ರಾಜ್ಯದಲ್ಲಿ ಉತ್ತಮ ನೀರಾವರಿ ವ್ಯವಸ್ಥೆ ಇದ್ದು, ಗುಣಮಟ್ಟದ ಕೃಷಿ ಬೆಳೆ ಬೆಳೆಯಲಾಗುತ್ತಿದೆ. ಆದರೆ, ಸೂಕ್ತ ರೀತಿಯಲ್ಲಿ ಮಾರುಕಟ್ಟೆ ಮತ್ತು ಸಾಗಾಣಿಕೆ ವ್ಯವಸ್ಥೆ ಮಧ್ಯ ಕರ್ನಾಟಕದಲ್ಲಿ ಇಲ್ಲವಾಗಿದೆ. ಮಧ್ಯ ಕರ್ನಾಟಕಕ್ಕೆ ರೈಲ್ವೆ ಮಾರ್ಗದಲ್ಲಿ ಕೃಷಿ ಉತ್ಪನ್ನ ಸೇರಿದಂತೆ ವಿವಿಧ ಸಾಮಗ್ರಿಗಳ ಸಾಗಾಣಿಕೆಗೆ ರೈಲ್ವೆ ಕಾರ್ಗೋ ಕಾರಿಡಾರ್ ನಿರ್ಮಾಣ ಮಾಡುವ ಅವಶ್ಯಕತೆ ಇದೆ’ ಎಂದು ಶಿರಾ ಶಾಸಕ ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಒತ್ತಾಯಿಸಿದರು.
ಸಂಸದ ಸಂಸದ ಗೋವಿಂದ ಕಾರಜೋಳ, ಶಾಸಕ ಎಂ.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ರೈಲ್ವೆ ಇಲಾಖೆ ಮುಖ್ಯ ಆಡಳಿತಾಧಿಕಾರಿ ಅಜಯ್ ಶರ್ಮಾ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಇದ್ದರು.
ಕೆಳಸೇತುವೆ ಅಪಾಯ; ಅಸಮಾಧಾನ ನಗರದ ತುರುವನೂರು ರಸ್ತೆ ಹಾಗೂ ಮೆದೇಹಳ್ಳಿ ರಸ್ತೆಯಲ್ಲಿನ ರೈಲ್ವೆ ಕೆಳ ಸೇತುವೆಯಲ್ಲಿ ಉಂಟಾಗಿರುವ ಸಮಸ್ಯೆಯ ಬಗ್ಗೆ ಶಾಸಕ ಕೆ.ಸಿ.ವೀರೇಂದ್ರ ಅವರು ಛಾಯಾಚಿತ್ರಗಳ ಸಮೇತ ಗಮನ ಸೆಳೆದರು. ‘ರೈಲ್ವೆ ಕೆಳ ಸೇತುವೆಗಳು ಅವೈಜ್ಞಾನಿಕವಾಗಿದ್ದು ಮಳೆಗಾಲದಲ್ಲಿ ತೀವ್ರ ತೊಂದರೆಯಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ನಿಂತು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಪಘಾತಗಳ ತಾಣವೂ ಆಗಿವೆ’ ಎಂದರು. ಇದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ರೈಲ್ವೆ ಸಚಿವ ವಿ. ಸೋಮಣ್ಣ ‘ಕಳೆದ ಬಾರಿ ಜಿಲ್ಲೆಗೆ ಬಂದಾಗಲೇ ಈ ಕುರಿತು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಆದರೆ ರೈಲ್ವೆ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಸಮಸ್ಯೆ ಬಗೆಹರಿದಿಲ್ಲ. ಜಿಲ್ಲೆಯಾದ್ಯಂತ ಇರುವ ರೈಲ್ವೆ ಕೆಳ ಸೇತುವೆಗಳಲ್ಲಿ ಮಳೆ ನೀರು ಶೇಖರಣೆಯಾಗದಂತೆ ಸೂಕ್ತ ಪರಿಹಾರ ಕ್ರಮಕೈಗೊಳ್ಳಬೇಕು. ರೈಲ್ವೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಅಲ್ಲಿನ ವಸ್ತು ಸ್ಥಿತಿ ಬಗ್ಗೆ ಪರಿಶೀಲಿಸಬೇಕು. ಸಮಸ್ಯೆ ನಿವಾರಣೆಗೆ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಸಮಗ್ರ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದರು.
ಹಿರಿಯೂರು– ಚಳ್ಳಕೆರೆ ಮಾರ್ಗ ಬೇಕು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹಾಗೂ ಶಾಸಕ ಟಿ.ರಘುರ್ಮೂತಿ ಅವರು ‘ಚಳ್ಳಕೆರೆಯಿಂದ ಹಿರಿಯೂರಿಗೆ ಹೊಸದಾಗಿ ರೈಲ್ವೆ ಸಂಪರ್ಕ ಕಲ್ಪಿಸಬೇಕು. ಇದರಿಂದಾಗಿ ಉತ್ತರ ಕರ್ನಾಟಕದಿಂದ ಬೆಂಗಳೂರು ಮಾರ್ಗಕ್ಕೆ ನೇರ ರೈಲ್ವೆ ಮಾರ್ಗ ಕಲ್ಪಿಸಿದಂತಾಗುತ್ತದೆ’ ಎಂದು ಬೇಡಿಕೆ ಸಲ್ಲಿಸಿದರು. ‘ಈಗಾಗಲೇ ದಾವಣಗೆರೆ-ಚಿತ್ರದುರ್ಗ-ತುಮಕೂರು ರೈಲ್ವೆ ಮಾರ್ಗದಡಿ ಹಿರಿಯೂರು ತಾಲ್ಲೂಕಿನಲ್ಲಿ ರೈಲ್ವೆ ಮಾರ್ಗ ಸಾಗುತ್ತಿದೆ. ಈ ರೈಲ್ವೆ ಯೋಜನೆಗಳ ಜತೆಗೆ ಚಳ್ಳಕೆರೆಯಿಂದ ಹಿರಿಯೂರಿಗೆ ಹೊಸದಾಗಿ ರೈಲ್ವೆ ಸಂಪರ್ಕದ ಅವಶ್ಯಕತೆ ಇದೆ. ‘ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ವೇ ಮಾಡಿಸಿ ಸೂಕ್ತ ಕ್ರಮ ವಹಿಸಲಾಗುವುದು’ ಎಂದು ಸೋಮಣ್ಣ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.