ಚಿತ್ರದುರ್ಗ: ‘ವರನಟ ರಾಜ್‌ಕುಮಾರ್ ಅವರ ಇಚ್ಛೆಯಂತೆ ಕುಟುಂಬಸ್ಥರು ಅವರ ಮರಣದ ನಂತರ ನೇತ್ರದಾನ ಮಾಡಿದ್ದಾರೆ. ಇಂದಿಗೂ ಅಣ್ಣಾವ್ರ ಹೆಸರಿನಲ್ಲಿ ನೇತ್ರದಾನ ಶಿಬಿರಗಳು ನಡೆಯುತ್ತಿವೆ’ ಎಂದು ಶಾಸಕ ಕೆ.ಸಿ.ವೀರೇಂದ್ರ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ನಟಸಾರ್ವಭೌಮ ರಾಜ್ ಕುಮಾರ್ 97ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
‘ರಾಜ್‌ಕುಮಾರ್ ಚಲನಚಿತ್ರಗಳು ನಿತ್ಯದ ಜೀವನಕ್ಕೆ ಪಾಠವಾಗಿವೆ. ಅವರ ನಡೆ, ನುಡಿಯ ಜತೆ ಸಿನಿಮಾದಲ್ಲಿ ಸಹ ಅತ್ಯುತ್ತಮ ಸಂದೇಶ ನೀಡಿದ್ದಾರೆ. ಅವುಗಳನ್ನು ಪಾಲಿಸಿದರೆ ಸಾಕು ಜೀವನ ಹಾಲು– ಜೇನಿನಂತೆ ಸಾಗುತ್ತದೆ’ ಎಂದರು.
‘ಕುಗ್ರಾಮದ ಮುತ್ತುರಾಜ್ ಚಲನಚಿತ್ರ ಇತಿಹಾಸದಲ್ಲಿಯೇ ಮೈಲಿಗಲ್ಲಾಗಿದ್ದಾರೆ. ರಾಜ್‌ಕುಮಾರ್ ಆಗಿ ಜವಾಬ್ದಾರಿ ನಿಭಾಯಿಸುವುದರ ಜತೆಗೆ ನಮ್ಮೆಲ್ಲರಿಗೂ ಉತ್ತಮ ಸಂದೇಶ ನೀಡುವ 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿ, ಅರ್ಪಣೆ ಮಾಡಿದ್ದಾರೆ. 2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್‌ಕುಮಾರ್ ಅವರ ಜನ್ಮ ದಿನಾಚರಣೆಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಆದೇಶ ಮಾಡಿದರು’ ಎಂದು ಸ್ಮರಿಸಿದರು.
‘ಐಎಎಸ್, ಐಪಿಎಸ್ ಸೇರಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳ ಸ್ಥಾಪನೆ, ಅನಾಥಾಶ್ರಮಗಳಿಗೂ ನೆರವು ನೀಡಿದ್ದಾರೆ. ಅವರ ಮರಣದ ನಂತರ ಕುಟುಂಬಸ್ಥರು ಅನೇಕ ಕಾರ್ಯಕ್ರಮ ನಡೆಸುತ್ತ ನಾಡಿಗೆ ಮಾದರಿಯಾಗಿದ್ದಾರೆ’ ಎಂದರು.
‘ರಾಜ್‌ಕುಮಾರ್ ಚಲನಚಿತ್ರ, ಸಂಗೀತ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಮರಣದ ನಂತರ ಸಹ ಅವರ ಕಣ್ಣುಗಳು ಇನ್ನೊಬ್ಬರ ಬಾಳಿಗೆ ಬೆಳಕಾಗಿವೆ. ಅವರ ಸಂದೇಶದಂತೆ ನಾವೆಲ್ಲರೂ ಸಾಗೋಣ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
‘ರಾಜ್ ಸರಳತೆ ಮತ್ತು ಜೀವನ ಮೌಲ್ಯದ ತತ್ವಗಳ ಪಾಲನೆ ಮಾಡುವ ಮೂಲಕ ಬದುಕಿರುವವರೆಗೂ ಸದಾ ಲವಲವಿಕೆಯಿಂದ ಇದ್ದರು. ನಟನೆಯ ಪ್ರತಿಯೊಂದು ಚಿತ್ರದಲ್ಲಿಯೂ ಒಂದು ತತ್ವ ಹಾಗೂ ಸಂದೇಶವಿದೆ. ಮನೆಯ ಕುಟುಂಬದ ಸದಸ್ಯರೆಲ್ಲರೂ ಸೇರಿ ಒಟ್ಟಿಗೆ ಕುಳಿತು ನೋಡುವ ಚಲನಚಿತ್ರಗಳಾಗಿವೆ’ ಎಂದರು.
‘ರಾಜ್‌ಕುಮಾರ್ ಸರಳ, ಸಜ್ಜನಿಕೆ, ವಿನಯವಂತಿಕೆಯ ಆದರ್ಶ ವ್ಯಕ್ತಿ. ಅವರು ನಟಿಸಿದ ಸಿನಿಮಾಗಳೆಲ್ಲವೂ ಯಶಸ್ವಿ ಪ್ರದರ್ಶನ ಕಂಡಿವೆ. ಬೇಡರ ಕಣ್ಣಪ್ಪ ಅವರ ಮೊದಲನೇ ಸಿನಿಮಾ’ ಎಂದು ಸಾಹಿತಿ ಹುರಳಿ ಎಂ. ಬಸವರಾಜ್ ತಿಳಿಸಿದರು.
‘ತೆರೆಯ ಮೇಲಾದರೂ ಸರಿ ದುಶ್ಚಟ ಬಿಂಬಿಸುವ ಯಾವುದೇ ಪಾತ್ರವನ್ನು ರಾಜ್‌ಕುಮಾರ್ ಮಾಡಲಿಲ್ಲ. ರಾಜ್ ಅವರಿಗೂ ಚಿತ್ರದುರ್ಗಕ್ಕೂ ಬಹಳ ನಂಟಿದೆ. ‘ಕುಮಾರ ರಾಜ್’ ಎಂದು ಚಿತ್ರದುರ್ಗದವರು ಬಿರುದು ನೀಡಿದ್ದಾರೆ’ ಎಂದು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಸ್ಮರಿಸಿದರು.
ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಘಟಕದ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಕೆಡಿಪಿ ಸದಸ್ಯ ನಾಗರಾಜ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ರಂಗಕರ್ಮಿ ಕೆ.ಪಿ.ಎಂ. ಗಣೇಶಯ್ಯ ಇದ್ದರು.
ರಾಜ್ ನಟಿಸಿದ ಎಲ್ಲ ಪಾತ್ರಗಳಿಗೂ ಜೀವಕಳೆ ಕೊಟ್ಟಿದ್ದಾರೆ. ಹಳ್ಳಿ ಹೈದನಾಗಿ ಕುರಿ ಕಾಯುವವನಾಗಿ ರಾಜನಾಗಿ ಸಾಮ್ರಾಜ್ಯದ ಒಡೆಯನಾಗಿ ಮನೆಯ ಯಜಮಾನನಾಗಿ ನಟಿಸಿದ ಎಲ್ಲ ಚಿತ್ರಗಳಲ್ಲಿಯೂ ಅವರಿಗೆ ಅವರೇ ಸಾಟಿಹುರಳಿ ಎಂ. ಬಸವರಾಜ್ ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.