ADVERTISEMENT

ತಂತ್ರಜ್ಞಾನದ ಜತೆ ಸಾಮಾಜಿಕ ಅಭಿವೃದ್ಧಿಗೆ ಮನ್ನಣೆ: ಪ್ರೊ.ಎಸ್.ಕೆ.ಸತೀಶ್

ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ: ಐಐಎಸ್ಸಿ ಡೀನ್ ಪ್ರೊ.ಎಸ್.ಕೆ.ಸತೀಶ್

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 14:14 IST
Last Updated 1 ಜುಲೈ 2025, 14:14 IST
ನಾಯಕನಹಟ್ಟಿ ಸಮೀಪದ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಮಂಗಳವಾರ ಐಐಎಸ್ಸಿ ಕೌಶಲಾಭಿವೃದ್ಧಿ ಕೆಂದ್ರದ ಡೀನ್ ಪ್ರೊ.ಎಸ್.ಕೆ.ಸತೀಶ್ ನೀರು ಪರೀಕ್ಷಾ ಕೇಂದ್ರವನ್ನು ಉದ್ಘಾಟಿಸಿದರು 
ನಾಯಕನಹಟ್ಟಿ ಸಮೀಪದ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಮಂಗಳವಾರ ಐಐಎಸ್ಸಿ ಕೌಶಲಾಭಿವೃದ್ಧಿ ಕೆಂದ್ರದ ಡೀನ್ ಪ್ರೊ.ಎಸ್.ಕೆ.ಸತೀಶ್ ನೀರು ಪರೀಕ್ಷಾ ಕೇಂದ್ರವನ್ನು ಉದ್ಘಾಟಿಸಿದರು    

ನಾಯಕನಹಟ್ಟಿ: ‘ಭಾರತೀಯ ವಿಜ್ಞಾನ ಸಂಸ್ಥೆಯು 15 ವರ್ಷಗಳಿಂದ ಉನ್ನತಮಟ್ಟದ ಜ್ಞಾನ ಪ್ರಸರಣದ ಜತೆಗೆ ಸಾಮಾಜಿಕ ಅಭಿವೃದ್ಧಿಗೆ ಪೂರಕವಾದ ಚಟುವಟಕೆಗಳಿಗೆ ಮನ್ನಣೆ ನೀಡುತ್ತಿದೆ’ ಎಂದು ಬೆಂಗಳೂರಿನ ಐಐಎಸ್ಸಿ ಕೌಶಲಾಭಿವೃದ್ಧಿ ಕೆಂದ್ರದ ಡೀನ್ ಪ್ರೊ.ಎಸ್.ಕೆ.ಸತೀಶ್ ಹೇಳಿದರು.

ಸಮೀಪದ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಮಂಗಳವಾರ ಶಿಕ್ಷಕರ ತರಬೇತಿ ಶಿಬಿರ, ಇವಿ ವಾಹನಗಳು, ಕುಡಿಯುವ ನೀರಿನ ಪರೀಕ್ಷಾ ಕೇಂದ್ರ ಮತ್ತು ಒಳಾಂಗಣ ಕ್ರೀಡಾ ಸಂಕೀರ್ಣ ಮತ್ತು ವ್ಯಾಯಾಮ ಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಿಶ್ವದಲ್ಲಿ ಇತ್ತೀಚಿನ ದಿನಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನವಾದ ಸೆಮಿಕಂಡಕ್ಟರ್‌ಗಳ ತಯಾರಿಕೆ, ಡ್ರೋನ್‌ಗಳ ಬಳಕೆ, ಕೃತಕ ಬುದ್ಧಿಮತ್ತೆ ತಯಾರಿಕೆಯಂತಹ ತಾಂತ್ರಿಕ ಕೌಶಲವು ದೇಶದಲ್ಲಿ ಶೇ 30ರಿಂದ 50ರಷ್ಟು ಹಿಂದುಳಿದಿದೆ ಎಂದು ಇತ್ತೀಚೆಗೆ ರಾಷ್ಟ್ರೀಯ ಕೌಶಾಲಾಭಿವೃದ್ಧಿ ನಿಗಮವು ಅಂಕಿ–ಅಂಶಗಳನ್ನು ಬಿಡುಗಡೆಗೊಳಿಸಿದೆ. ಅದಕ್ಕಾಗಿ ಐಐಎಸ್ಸಿ ಎಚ್‌ಎಎಲ್ ಸಹಯೋಗದಲ್ಲಿ ಕುದಾಪುರ ಕ್ಯಾಂಪಸ್‌ನಲ್ಲಿ ಕೌಶಲಾಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಿ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ದೇಶಕ್ಕೆ ಅಗತ್ಯವಾಗಿರುವ ತಾಂತ್ರಿಕ ಪರಿಣಿತರನ್ನು ತರಬೇತಿಗೊಳಿಸುವ ಹೊಣೆಗಾರಿಕೆ ಹೊಂದಿದೆ’ ಎಂದು ಹೇಳಿದರು.

ADVERTISEMENT

‘ಐಐಎಸ್ಸಿ ಕೌಶಾಲಾಭಿವೃದ್ಧಿ ಕೇಂದ್ರವು ದೇಶದಾದ್ಯಂತ ಯುವಜನರಲ್ಲಿ ಕೌಶಾಲಾಭಿವೃದ್ಧಿ ನೈಪುಣ್ಯವನ್ನು ಹೆಚ್ಚಿಸಲು ಯೋಜನೆಗಳನ್ನು ರೂಪಿಸಿದೆ. ಏನೂ ತಿಳಿಯದವರಿಗೆ ಸಾಮಾನ್ಯ ಕೌಶಲ ವೃದ್ಧಿಸುವುದು, ಈಗಾಗಲೇ ಒಂದು ಕ್ಷೇತ್ರದಲ್ಲಿ ಕೌಶಲ ಪಡೆದಿರುವವರಿಗೆ ಉನ್ನತಮಟ್ಟದ ಕೌಶಲ ತರಬೇತಿ ನೀಡುವ ಮೂಲಕ ತಂತ್ರಜ್ಞಾನದ ಜತೆಗೆ ಸಾಮಾಜಿಕ ಅಭಿವೃದ್ಧಿಗೆ ಭಾರತೀಯ ವಿಜ್ಞಾನ ಸಂಸ್ಥೆಯು ಮನ್ನಣೆ ನೀಡುತ್ತಿದೆ’ ಎಂದು ತಿಳಿಸಿದರು.

ಕುದಾಪುರ ಐಐಎಸ್ಸಿ ಕ್ಯಾಂಪಸ್ ಮುಖ್ಯಸ್ಥ ಡಾ.ಸುಬ್ಬಾರೆಡ್ಡಿ, ‘ಶಿಬಿರದಲ್ಲಿ ಗೋವಾ ರಾಜ್ಯದ 79 ಶಿಕ್ಷಕರು ಮತ್ತು ಕರ್ನಾಟಕ ರಾಜ್ಯದ ಬುಡಕಟ್ಟು ಅಭಿವೃದ್ಧಿ ನಿರ್ದೇಶನಾಲಯದ ಏಕಲವ್ಯ ಪ್ರೌಢಶಾಲೆಯ 30 ವಿಜ್ಞಾನ ಶಿಕ್ಷಕರು ಭಾಗವಹಿಸಿದ್ದಾರೆ. ಅವರಿಗೆ 12 ದಿನಗಳವರೆಗೆ ನಿರಂತರವಾಗಿ ಗಣಿತ, ರಸಾಯನ ವಿಜ್ಞಾನ, ಭೌತವಿಜ್ಞಾನ, ಜೀವವಿಜ್ಞಾನ ವಿಷಯಗಳ ಬಗ್ಗೆ ತರಗತಿ ಜತೆಗೆ ಪ್ರಯೋಗಿಕ ಕಲಿಕಾ ತರಬೇತಿ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

‘ಮಧ್ಯಕರ್ನಾಟಕದಲ್ಲಿ ಕುಡಿಯುವ ನೀರಿಗಾಗಿ ಸಾರ್ವಜನಿಕರು ಬಹುತೇಕ ಅಂತರ್ಜಲವನ್ನು ಬಳಸುತ್ತಾರೆ. ಈ ಭಾಗದಲ್ಲಿ ಅಂತರ್ಜಲದ ಗುಣಮಟ್ಟ ಎಷ್ಟಿದೆ? ಎಂಬುದನ್ನು ಕಂಡು ಹಿಡಿಯಲು ಐಐಎಸ್ಸಿ ಕ್ಯಾಂಪಸ್‌ನಲ್ಲಿ ಸುಸಜ್ಜಿತವಾದ ನೀರು ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರು ಮತ್ತು ಸ್ಥಳಿಯ ಆಡಳಿತ ಸಂಸ್ಥೆಗಳು ಈ ಸೇವೆಯನ್ನು ಬಳಸಿಕೊಳ್ಳಬಹುದು’ ಎಂದು ತಿಳಿಸಿದರು.

ಇದೇವೇಳೆ ರಾಜ್ಯ ಬುಡಕಟ್ಟು ಅಭಿವೃದ್ಧಿ ನಿರ್ದೇಶನಾಲಯದ ಅಧಿಕಾರಿಗಳಾದ ಶ್ರೀನಿವಾಸ್, ಕಣ್ಣಪ್ಪ, ಐಐಎಸ್ಸಿ ಪ್ರಾಧ್ಯಾಪಕರಾದ ಅರವಿಂದ್, ರಾಘವೇಂದ್ರ, ಪ್ರಸನ್ನ, ಎಂಜಿನಿಯರ್ ಹೇಮಂತ್ ಸಿಬ್ಬಂದಿ ಇದ್ದರು.

ನಾಯಕನಹಟ್ಟಿ ಸಮೀಪದ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ ಶಿಕ್ಷಕರು ಸಂಸ್ಥೆಯ ವಿಜ್ಞಾನಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.