ADVERTISEMENT

ಸಂಸದರ ಆದೇಶಕ್ಕೂ ಕ್ಯಾರೆ ಎನ್ನದ ಅಧಿಕಾರಿಗಳು

ಮೆದೇಹಳ್ಳಿ ಕೆಳಸೇತುವೆಯಲ್ಲಿ ನಿತ್ಯವೂ ಅಪಘಾತ, ಸಾರ್ವಜನಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ಮೇ 2025, 15:38 IST
Last Updated 9 ಮೇ 2025, 15:38 IST
ಮೆದೇಹಳ್ಳಿ ರೈಲ್ವೆ ಕೆಳಸೇತುವೆಯಲ್ಲಿ ಗುಂಡಿ ಹೆಚ್ಚಿರುವ ಕಾರಣ ವಾಹನ ಸವಾರರು ಪರದಾಡುತ್ತಿರುವುದು
ಮೆದೇಹಳ್ಳಿ ರೈಲ್ವೆ ಕೆಳಸೇತುವೆಯಲ್ಲಿ ಗುಂಡಿ ಹೆಚ್ಚಿರುವ ಕಾರಣ ವಾಹನ ಸವಾರರು ಪರದಾಡುತ್ತಿರುವುದು   

ಚಿತ್ರದುರ್ಗ: ನಗರದ ಮೆದೇಹಳ್ಳಿ ಮುಖ್ಯರಸ್ತೆಯ ರೈಲ್ವೆ ಕೆಳಸೇತುವೆಯಲ್ಲಿ ಗುಂಡಿಗಳು ಮತ್ತಷ್ಟು ದೊಡ್ಡದಾಗಿದ್ದು, ವಾಹನ ಸವಾರರು ನಿತ್ಯವೂ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಸಂಸದ ಗೋವಿಂದ ಕಾರಜೋಳ ಅವರು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ದುರಸ್ತಿಗೆ ಸೂಚನೆ ಕೊಟ್ಟಿದ್ದರೂ ನಗರಸಭೆ ಸಿಬ್ಬಂದಿ ದುರಸ್ತಿ ಮಾಡಿಲ್ಲ, ಸಂಸದರ ಆದೇಶಕ್ಕೂ ಕಿಮ್ಮತ್ತಿಲ್ಲವೇ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ನಗರದಿಂದ ಮೆದೇಹಳ್ಳಿ ಸೇರಿದಂತೆ ಹೊರವಲಯದ ಬಡಾವಣೆಗಳಿಗೆ, ಹಳ್ಳಿಗಳಿಗೆ ತೆರಳಲು ರೈಲ್ವೆ ಕೆಳ ಸೇತುವೆಯ ಒಂದೇ ಒಂದು ರಸ್ತೆ ಇದ್ದು, ಇದನ್ನೇ ಬಳಸಬೇಕು. ಸಂಜೆ, ರಾತ್ರಿ ಕೆಲಸ ಮುಗಿಸಿ ಅಪಾರ ಸಂಖ್ಯೆಯ ಸಾರ್ವಜನಿಕರು ಈ ರಸ್ತೆ ಮೂಲಕ ಮನೆಗೆ ತೆರಳುತ್ತಾರೆ. ಅಲ್ಲಿ ವಿದ್ಯುತ್‌ ದೀಪವೂ ಇಲ್ಲದ ಕಾರಣ ರಸ್ತೆಯಲ್ಲಿ ಸವಾರರು ಬಿದ್ದು ಗಾಯಗೊಳ್ಳುತ್ತಿದ್ಧಾರೆ. ಇಲ್ಲಿ ಅಪಘಾತ ಸಾಮಾನ್ಯವಾಗಿದ್ದು, ನಗರಸಭೆ ಜನರ ಜೀವ ತೆಗೆಯುತ್ತಿದೆ ಎಂದು ಜನರು ಆರೋಪಿಸುತ್ತಾರೆ.

‘ಗುಂಡಿ ಆಳವಾಗಿರುವ ಕಾರಣ ಬೈಕ್‌ ಸವಾರರು ತೀವ್ರ ಅಪಾಯ ಎದುರಿಸುತ್ತಿದ್ದಾರೆ. 2 ದಿನಗಳ ಹಿಂದೆ ಗುಂಡಿಗೆ ಬಿದ್ದ ಬೈಕ್‌ ಸವಾರರೊಬ್ಬರು ತೀವ್ರ ಗಾಯಗೊಂಡರು. ಅವರು ಬದುಕುವುದೇ ಕಷ್ಟವಾಗಿದೆ. ನಗರಸಭೆ ಸಿಬ್ಬಂದಿಗೆ ಒಂದು ಗುಂಡಿ ಮುಚ್ಚಲು ಸಾಧ್ಯವಾಗುತ್ತಿಲ್ಲವೇ, ಜನರ ಜೀವಕ್ಕೆ ಬೆಲೆ ಇಲ್ಲವೇ’ ಎಂದು ಬೈಕ್‌ ಸವಾರರೊಬ್ಬರು ಪ್ರಶ್ನಿಸಿದರು.

ADVERTISEMENT

‘ಇಲ್ಲಿ ಅವೈಜ್ಞಾನಿಕವಾಗಿ ಸೇತುವೆ ನಿರ್ಮಿಸಿರುವ ಕಾರಣ ಮೊದಲಿನಿಂದಲೂ ನೀರು ನಿಲ್ಲುತ್ತಿದೆ. ಮಳೆ ಬಂದಾಗ ಇಲ್ಲಿಯ ಸಮಸ್ಯೆ ತೀವ್ರಗೊಳ್ಳುತ್ತಿದ್ದು, ಜನರು ಅಪಾಯ ಎದುರಿಸುತ್ತಿದ್ದಾರೆ. ನೀರು ನಿಂತಾಗ ಗುಂಡಿಯ ಆಳ ತಿಳಿಯದೇ ವಾಹನ ಸವಾರರು ಬೀಳುತ್ತಿದ್ದಾರೆ. ನಿತ್ಯ ಓಡಾಡುವ ಜನರಿಗೆ ಕೊಳಚೆ, ಧೂಳಿನ ಹಾವಳಿ ತೀವ್ರವಾಗಿದೆ’ ಎಂದು ಆರೋಪಿಸಿದರು.

ಕೆಳಸೇತುವೆಯ ಕಿರಿದಾದ ರಸ್ತೆಯಲ್ಲಿ ಕೆರೆಯಂತಹ ಗುಂಡಿಯನ್ನು ತಪ್ಪಿಸಿ ಮುಂದೆ ಸಾಗಲು ವಾಹನ ಸವಾರರು ಪರದಾಡುತ್ತಿದ್ದಾರೆ. ಹೀಗಾಗಿ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಹೆಚ್ಚುತ್ತಿದೆ. ಈ ರಸ್ತೆ ನಾಲ್ಕೂ ಕಡೆಯಿಂದಲೂ  ಸಂಪರ್ಕಿಸುವ ಕಾರಣ ಎಲ್ಲಾ ಕಡೆಯಿಂದ ಹರಿದು ಬಂದ ನೀರು ಸೇತುವೆಯ ಕೆಳಗೆ ನಿಲ್ಲುತ್ತದೆ. ಅಲ್ಲಿ ವಾಹನಗಳು ಓಡಾಡುವ ಕಾರಣ ತಗ್ಗುಗಳು ಬಿದ್ದಿವೆ.

ನಾರಾಯಣಸ್ವಾಮಿ ಅವರು ಸಂಸದರಾಗಿದ್ದಾಗಲೂ ಇಲ್ಲಿ ಸಮಸ್ಯೆ ಇತ್ತು. ಅವರು ಬಂದು ಪರಿಶೀಲಿಸಿ ರಸ್ತೆ ದುರಸ್ತಿಗೆ ಸೂಚಿಸಿದ್ದರು. ಈಗಿನ ಸಂಸದರಾದ ಗೋವಿಂದ ಕಾರಜೋಳ ಅವರೂ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಆದರೂ ಅಧಿಕಾರಿಗಳು ರಸ್ತೆ ದುರಸ್ತಿಗೆ ಯಾವುದೇ ಕ್ರಮ ವಹಿಸುತ್ತಿಲ್ಲ. ಹದಗೆಟ್ಟ ರಸ್ತೆಯಿಂದ ಯಾರಾದರೂ ಬಿದ್ದು ಜೀವ ಕಳೆದುಕೊಂಡರೆ ನಗರಸಭೆ ಅಧಿಕಾರಿಗಳೇ ಹೊಣೆಯಾಗಬೇಕು ಎಂದು ಜನರು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.