ADVERTISEMENT

ರಸ್ತೆ ಬದಿಯೇ ಅಂತ್ಯಸಂಸ್ಕಾರ

ಗನ್ನಾಯಕನಹಳ್ಳಿ: ಇದ್ದೂ ಇಲ್ಲದಂತಾದ ಸ್ಮಶಾನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 5:09 IST
Last Updated 2 ಅಕ್ಟೋಬರ್ 2022, 5:09 IST
ಹಿರಿಯೂರು ತಾಲ್ಲೂಕಿನ ಗನ್ನಾಯಕನಹಳ್ಳಿಯ ಸ್ಮಶಾನದ ಜಾಗದಲ್ಲಿ ಮುಳ್ಳಿನ ಪೊದೆ ಬೆಳೆದಿರುವುದು.
ಹಿರಿಯೂರು ತಾಲ್ಲೂಕಿನ ಗನ್ನಾಯಕನಹಳ್ಳಿಯ ಸ್ಮಶಾನದ ಜಾಗದಲ್ಲಿ ಮುಳ್ಳಿನ ಪೊದೆ ಬೆಳೆದಿರುವುದು.   

ಹಿರಿಯೂರು: ತಾಲ್ಲೂಕಿನ ಗನ್ನಾಯಕನಹಳ್ಳಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪ ಸಂಖ್ಯಾತರಿಗೆ ಮೂರು ಎಕರೆ ಸ್ಮಶಾನದ ಜಾಗ ಮಂಜೂರು ಮಾಡಿದ್ದರೂರಸ್ತೆ ಬದಿ ಅಂತ್ಯಸಂಸ್ಕಾರ ಮಾಡುವ ಅನಿವಾರ್ಯ ಇದೆ.

ಸ್ಮಶಾನದ ಜಾಗವನ್ನು ಹದ್ದುಬಸ್ತು ಮಾಡಿಲ್ಲ. ಅಲ್ಲಿ ಜಾಲಿ ಗಿಡಗಳು ಬೆಳೆದಿರುವ ಕಾರಣ ಶವಸಂಸ್ಕಾರ ಮಾಡಲು ಯೋಗ್ಯವಾಗಿಲ್ಲ.

ಈ ಬಗ್ಗೆ ಕ್ರಮ ಕೈಗೊಳ್ಳುವಂತೆಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಇಒಗೆ, ತಹಶೀಲ್ದಾರ್‌ ಹಾಗೂ ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಲಾಗಿದೆ. ಭೂಮಾಪನ ಇಲಾಖೆ ಅಧಿಕಾರಿಗಳು ಅಳತೆಗೆ ಬಂದು ಮುಳ್ಳು ಬೆಳೆದಿರುವುದನ್ನು ನೋಡಿ, ಸ್ವಚ್ಛ ಮಾಡಿದರೆ ಮಾತ್ರ ಅಳತೆ ಮಾಡುವುದಾಗಿ ಹೇಳಿ ಹೋದರು. ಪಂಚಾಯಿತಿಯವರು ಸ್ವಚ್ಛತೆ ಮಾಡಿಲ್ಲ. ಭೂಮಾಪನ ಇಲಾಖೆಯವರು ಬರುತ್ತಿಲ್ಲ. ಹೀಗಾಗಿ ಸ್ಮಶಾನದ ಜಾಗವಿದ್ದರೂ ಶವಸಂಸ್ಕಾರಕ್ಕೆ ಬಳಸದ ಪರಿಸ್ಥಿತಿ ಇದೆ ಎಂದು ಗ್ರಾಮದ ದಲಿತ ಮುಖಂಡ ಎಂ. ರಾಜಣ್ಣ ದೂರಿದರು.

ADVERTISEMENT

‘ಭೂರಹಿತ ಅಸ್ಪೃಷ್ಯರು ಮೃತಪಟ್ಟಲ್ಲಿ ಸಂಸ್ಕಾರಕ್ಕೆ ಊರಿನಲ್ಲಿ ಜಾಗವಿಲ್ಲ. ಬಾಲೇನಹಳ್ಳಿಗೆ ಹೋಗುವ ರಸ್ತೆಯಲ್ಲಿ ಸಂಸ್ಕಾರ ಮಾಡಬೇಕಿದೆ. ಸ್ಮಶಾನ ಜಾಗ ಇದ್ದರೂ ರಸ್ತೆ ಬದಿ ಸಂಸ್ಕಾರ ಏಕೆ ಮಾಡುತ್ತೀರಿ ಎಂದು ಊರಿನ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಾರೆ’ ಎಂದು ಅವರು ಬೇಸರಿಸಿದರು.

ಸ್ಮಶಾನಕ್ಕೆ ಮಂಜೂರು ಮಾಡಿರುವ ಜಾಗವನ್ನು ಶುಚಿಗೊಳಿಸಿ, ಹದ್ದುಬಸ್ತು ಮಾಡಿಸಬೇಕು. ‌ಸೌಲಭ್ಯಗಳನ್ನು ಕಲ್ಪಿಸಬೇಕು. ಇಲ್ಲವಾದಲ್ಲಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.