ADVERTISEMENT

ಶಬರಿಮಲೆ: ಮಹಿಳೆಯರ ಪ್ರವೇಶಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 11:33 IST
Last Updated 5 ಜನವರಿ 2019, 11:33 IST
ಹಿರಿಯೂರಿನಲ್ಲಿ ಶನಿವಾರ ಅಯ್ಯಪ್ಪ ಭಕ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು
ಹಿರಿಯೂರಿನಲ್ಲಿ ಶನಿವಾರ ಅಯ್ಯಪ್ಪ ಭಕ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು   

ಹಿರಿಯೂರು: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಖಂಡಿಸಿ ಅಯ್ಯಪ್ಪ ಭಕ್ತರು ಶನಿವಾರ ನಗರದ ಲಕ್ಕವ್ವನಹಳ್ಳಿ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇಗುಲದಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ದೇವಾಲಯದ ಗುರುಸ್ವಾಮಿ ಸದಾನಂದಸ್ವಾಮಿ, ‘ಶಬರಿಮಲೆ ಅಯ್ಯಪ್ಪಸ್ವಾಮಿಗೆ ಜಗತ್ತಿನಾದ್ಯಂತ ಕೋಟ್ಯಂತರ ಭಕ್ತರಿದ್ದು, ತನ್ನದೇ ಆದಂತಹ ನೀತಿ–ನಿಯಮ–ಪಾವಿತ್ರ್ಯ ಇದೆ. ಅಲ್ಲಿ ನೆಲೆಸಿರುವ ಸ್ವಾಮಿ ಯೋಗಭಂಗಿಯಲ್ಲಿದ್ದು, ಬ್ರಹ್ಮಚಾರಿಯಾಗಿರುವ ಕಾರಣ 10 ವರ್ಷ ಮೇಲ್ಪಟ್ಟು 50 ವರ್ಷ ಒಳಗಿನ ಸ್ತ್ರೀಯರಿಗೆ ಪ್ರವೇಶ ಇರಲಿಲ್ಲ. ಉಳಿದ ವಯೋಮಾನದವರು ಮುಕ್ತವಾಗಿ ದೇವರ ದರ್ಶನ ಮಾಡಬಹುದಿತ್ತು. ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬೇಕೆಂಬ ಉದ್ದೇಶದಿಂದ ಜ. 2 ರಂದು ಭಕ್ತಿಯೇ ಇಲ್ಲದ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಮೂಲಕ ಭಕ್ತರ ಭಾವನೆಗಳಿಗೆ ಘಾಸಿ ಉಂಟು ಮಾಡಲಾಗಿದೆ’ ಎಂದು ಆರೋಪಿಸಿದರು.

ಧರ್ಮ ಮತ್ತು ದೇವರು ಮನುಷ್ಯರ ನಂಬಿಕೆಗಳಿಗೆ ಸಂಬಂಧಿಸಿದ ಸಂಗತಿಗಳು. ಭಕ್ತರ ಅಂತರಂಗಕ್ಕೆ ಸಂಬಂಧಿಸಿದ ನಂಬಿಕೆ ಮತ್ತು ಆಚಾರಗಳ ವಿಚಾರದಲ್ಲಿ ಆಡಳಿತ ನಡೆಸುವವರು ಎಚ್ಚರದಿಂದ ಇರಬೇಕು. ಸಮಾಜದ ನೆಮ್ಮದಿ ಹಾಳು ಮಾಡುವಂತಹ ಕೆಲಸಕ್ಕೆ ಕೈಹಾಕಬಾರದು ಎಂದು ಎಚ್ಚರಿಸಿದರು.

ADVERTISEMENT

ಶಬರಿಮಲೆಯಲ್ಲಿ ಮೊದಲಿನ ಸಂಪ್ರದಾಯ ಮುಂದುವರಿಯಬೇಕು. ಸಮಾಜದ ಶಾಂತಿ–ನೆಮ್ಮದಿಯನ್ನು ಕೆದಕುವ ಕೆಲಸ ಮಾಡಬಾರದು ಎಂದು ಒತ್ತಾಯಿಸಿ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.