ADVERTISEMENT

ಸಂತ ಸೇವಾಲಾಲ್ ಜಯಂತ್ಯುತ್ಸವ ನಾಳೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 14:13 IST
Last Updated 1 ಮಾರ್ಚ್ 2019, 14:13 IST

ಚಿತ್ರದುರ್ಗ: ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ಮಾ. 3 ರಂದು ಸಂತ ಸೇವಾಲಾಲ್ ಮಹಾರಾಜರ 280ನೇ ಜಯಂತ್ಯುತ್ಸವ, ಧರ್ಮಜಾಗೃತಿ ಹಾಗೂ ಬಂಜಾರ (ಲಂಬಾಣಿ) ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಬಂಜಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್. ನಾಗೇಂದ್ರನಾಯ್ಕ್ ಹೇಳಿದರು.

‘ಅಂದು ಬೆಳಿಗ್ಗೆ 9ಕ್ಕೆ ನೀಲಕಂಠೇಶ್ವರ ದೇಗುಲದಿಂದ ವಿವಿಧ ಸಾಂಸ್ಕೃತಿಕ ಕಲಾತಂಡಗಳ ಮೂಲಕ ಭವ್ಯ ಮೆರವಣಿಗೆ ನಡೆಸಲಾಗುವುದು. ಮಧ್ಯಾಹ್ನ 1ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸುಮಾರು ಐದು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಶುಕ್ರವಾರಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

ಸಂಸದ ಚಂದ್ರಪ್ಪ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಸೇವಾಲಾಲ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವರು. ಜಿಲ್ಲೆಯ ಶಾಸಕರು, ಸಮುದಾಯದ ಜನಪ್ರತಿನಿಧಿಗಳು, ಬಂಜಾರ ಸಮುದಾಯದ ಪ್ರತಿ ತಾಂಡಗಳ ನಾಯಕ್, ಡಾವೋ, ಕಾರ್‌ಬಾರಿ ಸೇರಿ ನೌಕರರು ಭಾಗವಹಿಸಲಿದ್ದಾರೆ ಎಂದರು.

ADVERTISEMENT

‘ಬಂಜಾರ ಸಮುದಾಯ ಹಿಂದುಳಿದಿದ್ದು, ತುಳಿತಕ್ಕೆ ಒಳಗಾಗಿದೆ. ಸರ್ಕಾರಿ ಸೌಲಭ್ಯಗಳು ತಾಂಡಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಅನೇಕ ವರ್ಷಗಳಿಂದ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಬೇಕು ಎಂಬ ಒತ್ತಾಯವಿದೆ. ಅದು ಈಡೇರಿದರೆ ಮಾತ್ರ ಸರ್ಕಾರದ ಸವಲತ್ತು ಪಡೆಯಲು ಸಾಧ್ಯ’ ಎಂದು ಹೇಳಿದರು.

ಸರ್ಕಾರ ತಾಂಡಾ ಅಭಿವೃದ್ಧಿ ನಿಗಮ ಸ್ಥಾಪಿಸಿದ ನಂತರ ಮೂಲ ಸೌಕರ್ಯ ಸೇರಿ ಇತರೆ ಅಭಿವೃದ್ಧಿ ಕೆಲಸಗಳು ಆಗಿವೆ ಎಂದರು.

ಸಮುದಾಯದ ಮುಖಂಡರಾದ ಭೀಮಸಮುದ್ರದ ಸುರೇಶ್‌ನಾಯ್ಕ್, ಲೋಕೇಶ್‌ನಾಯ್ಕ್, ಪ್ರಕಾಶ್‌ನಾಯ್ಕ್, ಮಾಧವನಾಯ್ಕ್, ಸತೀಶ್‌ನಾಯ್ಕ್, ತಾಂಡಾ ಅಭಿವೃದ್ಧಿ ನಿಗಮ ನಿರ್ದೇಶಕ ಅನಿಲ್ ಕುಮಾರ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.