ADVERTISEMENT

ಬೀಳುತ್ತಿವೆ ಹೆಂಚುಗಳು: 130 ವರ್ಷ ಹಳೆಯ ಓಬಳಾಪುರ ಸರ್ಕಾರಿ ಶಾಲೆಯ ದುಃಸ್ಥಿತಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 20:53 IST
Last Updated 26 ಅಕ್ಟೋಬರ್ 2021, 20:53 IST
ಶಾಲೆಯಲ್ಲಿ ಹೆಂಚುಗಳು ತುಂಡಾಗಿ ಬಿದ್ದಿರುವುದು –ಪ್ರಜಾವಾಣಿ ಚಿತ್ರಗಳು
ಶಾಲೆಯಲ್ಲಿ ಹೆಂಚುಗಳು ತುಂಡಾಗಿ ಬಿದ್ದಿರುವುದು –ಪ್ರಜಾವಾಣಿ ಚಿತ್ರಗಳು   

ಪರಶುರಾಂಪುರ (ಚಿತ್ರದುರ್ಗ ಜಿಲ್ಲೆ): ಮೂಲಸೌಲಭ್ಯದ ಕೊರತೆಯಿಂದ ಬಳಲುತ್ತಿದ್ದ ಶತಮಾನ ದಾಟಿದ ಓಬಳಾಪುರ (ಶಿರಿವಾಳ) ಸರ್ಕಾರಿ ಶಾಲೆಯ ಮಕ್ಕಳು ಈಗ ಮರದ ಕೆಳಗೆ ಕುಳಿತು ಪಾಠ ಕೇಳಬೇಕಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ ಗಾಳಿ–ಮಳೆಗೆ ಬಹುತೇಕ ಹೆಂಚುಗಳು ಬಿದ್ದಿದ್ದು ಅಪಾಯಕಾರಿ ಸ್ಥಿತಿ ಉಂಟಾಗಿದೆ.

ರಾಜ್ಯದ ಗಡಿ ಭಾಗದಲ್ಲಿರುವ ಈ ಶಾಲೆಯ 8 ಕೊಠಡಿಗಳ ಹೆಂಚುಗಳು ಬಿದ್ದಿದ್ದು, ಮಕ್ಕಳು ಕುಳಿತುಕೊಳ್ಳುವ ಸ್ಥಿತಿ ಇಲ್ಲ. ಶಾಲೆಯಲ್ಲಿ 276 ಮಕ್ಕಳಿದ್ದು, ಈಗ 3 ಕೊಠಡಿಗಳಷ್ಟೇ ಸುಸ್ಥಿತಿಯಲ್ಲಿವೆ. ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ಮಕ್ಕಳು ಮರದ ಕೆಳಗೆ ಮಣ್ಣಿನಲ್ಲೇ ಕುಳಿತು ಪಾಠ ಕೇಳುತ್ತಿದ್ದಾರೆ.

ಚಳ್ಳಕೆರೆ ತಾಲ್ಲೂಕು ಕೇಂದ್ರದಿಂದ 45 ಕಿ.ಮೀ. ದೂರವಿರುವ ಓಬಳಾಪುರ ಗ್ರಾಮ ಮೊಳಕಾಲ್ಮುರು ಮತಕ್ಷೇತ್ರದ ವ್ಯಾಪ್ತಿಗೆ ಬರಲಿದೆ. ಇದು ಚಿತ್ರದುರ್ಗ ಜಿಲ್ಲೆಯ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ.

ADVERTISEMENT

‘1890ರಲ್ಲಿ ಆರಂಭವಾದ ಈ ಶಾಲೆಗೆ 130 ವರ್ಷವಾಗಿದೆ. 1ರಿಂದ 8ನೇ ತರಗತಿಯವರೆಗಿನ ಈ ಶಾಲೆಯಲ್ಲಿ 8 ಶಿಕ್ಷಕರಿದ್ದಾರೆ. 136 ಹೆಣ್ಣುಮಕ್ಕಳು ಓದುತ್ತಿದ್ದಾರೆ. ಶಾಲೆಯಲ್ಲಿ ಶೌಚಾಲಯ ವ್ಯವಸ್ಥೆಯೇ ಇಲ್ಲ. ಗ್ರಾಮ ಪಂಚಾಯಿತಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜ ಬೇಸರ ವ್ಯಕ್ತಪಡಿಸಿದರು.

‘ಅಗತ್ಯವಿರುವ ಕೊಠಡಿ, ಶೌಚಾಲಯ, ಕಲಿಕೆಗೆ ಪೂರಕ ವಾತಾವರಣವೇ ಇಲ್ಲಿಲ್ಲ. ಸರ್ಕಾರಿ ಶಾಲೆ ಉಳಿಸಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಹೇಳುವ ಜನಪ್ರತಿನಿಧಿಗಳು, ಅಧಿಕಾರಿಗಳು ಗಡಿಭಾಗದ ಸರ್ಕಾರಿ ಶಾಲೆಗಳ ಬಗ್ಗೆ ಗಮನಹರಿಸಬೇಕು’ ಎಂದು ಗ್ರಾಮಸ್ಥರಾದ ಪಾತಲಿಂಗಪ್ಪ, ಈಶ್ವರಪ್ಪ, ಪ್ರಕಾಶ, ಆನಂದ, ರಾಜು, ಕುಮಾರ, ದೇವಪುತ್ರ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.