ADVERTISEMENT

ಸಂವಿಧಾನ ದೇಶದ ಅತ್ಯುನ್ನತ ಗ್ರಂಥ

ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 14:15 IST
Last Updated 26 ನವೆಂಬರ್ 2022, 14:15 IST
ಚಿತ್ರದುರ್ಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂವಿಧಾನ ದೀಕ್ಷೆ ಸಮಾರಂಭದಲ್ಲಿ ಸಂವಿಧಾನದ ಪೀಠಿಕೆಗೆ ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಪುಷ್ಪಾರ್ಚನೆ ಮಾಡಿದರು.
ಚಿತ್ರದುರ್ಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂವಿಧಾನ ದೀಕ್ಷೆ ಸಮಾರಂಭದಲ್ಲಿ ಸಂವಿಧಾನದ ಪೀಠಿಕೆಗೆ ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಪುಷ್ಪಾರ್ಚನೆ ಮಾಡಿದರು.   

ಚಿತ್ರದುರ್ಗ: ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ರಚಿಸಿದ ಸಂವಿಧಾನ ದೇಶದ ಅತ್ಯುನ್ನತ ಗ್ರಂಥ. ದೇಶದ ಪ್ರತಿಯೊಂದು ಇದರಲ್ಲಿ ಅಡಕವಾಗಿದೆ. ಸಂವಿಧಾನದ ಆಶಯವನ್ನು ಪ್ರತಿಯೊಬ್ಬರು ಪಾಲನೆ ಮಾಡಿದಾಗ ಮಾತ್ರ ಭಾರತ ಪ್ರಬುದ್ಧ ದೇಶವಾಗಲು ಸಾಧ್ಯ ಎಂದು ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಹೇಳಿದರು.

ಸೋಷಿಯಲ್‌ ಡೆಮಾಕ್ರಟಿಕ್ ಪಕ್ಷ (ಎಸ್‌ಡಿಪಿಐ) ಒನಕೆ ಓಬವ್ವ ವೃತ್ತದ ಭಗತ್ ಸಿಂಗ್ ಉದ್ಯಾನದ ಸಮೀಪ ಶನಿವಾರ ಹಮ್ಮಿಕೊಂಡಿದ್ದ ಭೀಮ ಜ್ಯೋತಿ ಯಾತ್ರೆ ಹಾಗೂ ಸಂವಿಧಾನದ ದೀಕ್ಷೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಭಾರತದ ಸಂವಿಧಾನ ಪ್ರಜೆಗಳಿಗೆ ಸಂಬಂಧಪಟ್ಟಿದೆ. ಸಂವಿಧಾನದಲ್ಲಿ ಅಪಾರ ಜ್ಞಾನ ಅಡಕವಾಗಿದೆ. 2 ವರ್ಷ, 11 ತಿಂಗಳು, 17 ದಿನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ. ಸಂವಿಧಾನವನ್ನು ಸಮರ್ಪಣೆ ಮಾಡುವ ಮುನ್ನ ಮೂರು ವರ್ಷ ಸುದೀರ್ಘ ಚರ್ಚೆಯಾಗಿದೆ’ ಎಂದರು.

ADVERTISEMENT

ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ‌ಬಿ.ಆರ್.ಭಾಸ್ಕರ್ ಪ್ರಸಾದ್, ‘ಸಂವಿಧಾನದ ದಿನಕ್ಕೆ ಕಳಂಕ ಅಂಟಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ವೇದ, ಉಪನಿಷತ್ತಿಗೆ ಈ ದಿನವನ್ನೇ ಅಯ್ಕೆ ಮಾಡಿಕೊಂಡಿದ್ದರ ಹಿಂದೆ ಕುತಂತ್ರ ಅಡಗಿದೆ. ಅಂಬೇಡ್ಕರ್ ಪರಿನಿರ್ವಾಣವಾದ ಡಿ.6 ರಂದು ಬಾಬರಿ ಮಸೀದಿ ಕೆಡವಿ ಅನ್ಯಾಯ ಮಾಡಿದ್ದು ಇದೇ ಕುತಂತ್ರದಿಂದ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪ್ರಖರ ಬೆಳಕು ಹಾಗೂ ಜ್ಞಾನದ ಸಂಕೇತ ಅಂಬೇಡ್ಕರ್. ಇದನ್ನು ಮನುವಾದಿಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅಂಬೇಡ್ಕರ್‌ ವಿರುದ್ಧ ಉದ್ದೇಶ ಪೂರ್ವಕವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ದೇಶದ ಮೂಲನಿವಾಸಿಗಳಾದ ದ್ರಾವಿಡರು ಅಂಬೇಡ್ಕರ್‌ ಪರಿನಿರ್ವಾಣ ದಿನವನ್ನು ಆಚರಿಸಲಿದ್ದಾರೆ. ಮಹಾರಾಷ್ಟ್ರದ ಚೈತನ್ಯ ಭೂಮಿಯಲ್ಲಿ ಕೋಟ್ಯಂತರ ಜನರು ಸೇರಲಿದ್ದಾರೆ’ ಎಂದರು.

ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್, ‘ಸಂವಿಧಾನದ ಅಡಿಪಾಯವಾದ ಪ್ರಜಾಪ್ರಭುತ್ವ ದೇಶದಲ್ಲಿ ಅಪಾಯಕ್ಕೆ ಸಿಲುಕಿದೆ. ಬಿಜೆಪಿ ಆಡಳಿತದಲ್ಲಿ‌ ಸಂವಿಧಾನಕ್ಕೆ ಅಪಚಾರ ಮಾಡುವ ಕೃತ್ಯ ಹೆಚ್ಚಾಗುತ್ತಿವೆ. ಎಲ್ಲರಿಗೂ ಸಮಾನತೆ ನೀಡಿದ ಸಂವಿಧಾನ ಉಳಿಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕಿದೆ’ ಎಂದು ಸಲಹೆ ನೀಡಿದರು.

‘ಸದಾಶಿವ ಅಯೋಗದ ವರದಿಯನ್ನು ಕಾಂಗ್ರೆಸ್, ಬಿಜೆಪಿ ಈವರೆಗೂ ಜಾರಿಗೆ ತಂದಿಲ್ಲ. ಜೆಡಿಎಸ್‌ ನಾಯಕ ಎಚ್.ಡಿ. ಕುಮಾರಸ್ವಾಮಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಎಸ್‌ಡಿಪಿಐ ಅಧಿಕಾರಕ್ಕೆ ಬಂದರೆ ಖಂಡಿತ ಒಳಮೀಸಲಾತಿ ಜಾರಿಗೆ ತರುತ್ತೇವೆ’ ಎಂದು ಆಶ್ವಾಸನೆ ನೀಡಿದರು.

‘ಅಧಿಕಾರಕ್ಕೆ ಯೋಗ್ಯರನ್ನು ಆಯ್ಕೆ ಮಾಡಬೇಕು. ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗೆ ನೀಡಿದ ಮೀಸಲಾತಿಯ ಹುನ್ನರವನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಭೀಮ ಯಾತ್ರೆ ಹಮ್ಮಿಕೊಳ್ಳಲಾಗಿದೆ. 87 ದಿನ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಚರಿಸಲಿದೆ’ ಎಂದು ಮಾಹಿತಿ ನೀಡಿದರು.

ದಲಿತ ಮುಖಂಡರಾದ ಕುಂಚಿಗನಾಳ್ ಮಹಲಿಂಗಪ್ಪ, ಕೆ.ರಾಜಣ್ಣ, ಶಶಿಧರ್, ಉಮೇಶ್, ಮಂಜುನಾಥ್ ಕಳ್ಳಿಹಟ್ಟಿ, ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಅಧ್ಯಕ್ಷ ಟಿಪ್ಪುಖಾಸಿಂ ಆಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.