ADVERTISEMENT

ಅಘೋಷಿತ ಲಾಕ್‌ಡೌನ್‌: ಅಚ್ಚರಿಯಾದ ಜನ

ಮಾಹಿತಿ ನೀಡದೇ ಅಂಗಡಿ ಮುಚ್ಚಿಸಿದ ನಗರಸಭೆ ಸಿಬ್ಬಂದಿ, ಪೊಲೀಸರು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 14:17 IST
Last Updated 23 ಏಪ್ರಿಲ್ 2021, 14:17 IST
ಚಿತ್ರದುರ್ಗದ ಲಕ್ಷ್ಮಿಬಜಾರ್‌ನಲ್ಲಿ ವಾಣಿಜ್ಯ ಮಳಿಗೆಗಳನ್ನು ಶುಕ್ರವಾರ ಏಕಾಏಕಿ ಮುಚ್ಚಿಸಲಾಯಿತು. ಇದರಿಂದ ಮಾರುಕಟ್ಟೆ ಪ್ರದೇಶ ಭಣ ಭಣ ಎನ್ನುತ್ತಿದೆ.
ಚಿತ್ರದುರ್ಗದ ಲಕ್ಷ್ಮಿಬಜಾರ್‌ನಲ್ಲಿ ವಾಣಿಜ್ಯ ಮಳಿಗೆಗಳನ್ನು ಶುಕ್ರವಾರ ಏಕಾಏಕಿ ಮುಚ್ಚಿಸಲಾಯಿತು. ಇದರಿಂದ ಮಾರುಕಟ್ಟೆ ಪ್ರದೇಶ ಭಣ ಭಣ ಎನ್ನುತ್ತಿದೆ.   

ಚಿತ್ರದುರ್ಗ: ಅಗತ್ಯ ವಸ್ತುಗಳು ಮತ್ತು ಸೇವೆಗಳನ್ನು ಹೊರತುಪಡಿಸಿ ಎಲ್ಲ ವಾಣಿಜ್ಯ ಮಳಿಗೆಗಳನ್ನು ದಿಢೀರ್‌ ಬಾಗಿಲು ಹಾಕಿಸಿದ ಪರಿಣಾಮ ಜಿಲ್ಲೆಯಲ್ಲಿ ಶುಕ್ರವಾರವೇ ಅಘೋಷಿತ ಲಾಕ್‌ಡೌನ್‌ ವಾತಾವರಣ ನಿರ್ಮಾಣವಾಗಿತ್ತು. ನಗರ ಸ್ಥಳೀಯ ಸಂಸ್ಥೆಯ ಸಿಬ್ಬಂದಿ ಮತ್ತು ಪೊಲೀಸರು ಕೈಗೊಂಡ ಈ ಕ್ರಮಕ್ಕೆ ವ್ಯಾಪಾರಸ್ಥರು ಹಾಗೂ ಗ್ರಾಹಕರು ಅಚ್ಚರಿಗೆ ಒಳಗಾದರು.

ಎಂದಿನಂತೆ ಶುಕ್ರವಾರ ಬೆಳಿಗ್ಗೆ ಜನಸಂಚಾರ ಆರಂಭವಾಗಿತ್ತು. ಅಂಗಡಿ, ವಾಣಿಜ್ಯ ಮಳಿಗೆಗಳು ಬಾಗಿಲು ತೆರೆದಿದ್ದವು. ಬೆಳಿಗ್ಗೆ 10.45ರ ಬಳಿಕ ನಗರಸಭೆಯ ಅಧಿಕಾರಿಗಳು ಅಂಗಡಿಗಳ ಮೇಲೆ ಏಕಾಏಕಿ ದಾಳಿ ನಡೆಸಿ ಬಾಗಿಲು ಹಾಕಿಸಿದರು. ಆಗಷ್ಟೇ ಬಾಗಿಲು ತೆರೆದಿದ್ದ, ಗ್ರಾಹಕರೊಂದಿಗೆ ಒಡನಾಡಲು ಸಜ್ಜಾಗಿದ್ದ ವ್ಯಾಪಾರಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ವಿಚಾರವಾಗಿ ನಗರಸಭೆ ಸಿಬ್ಬಂದಿ ಹಾಗೂ ವ್ಯಾಪಾರಿಗಳ ನಡುವೆ ವಾಗ್ವಾದವೂ ನಡೆಯಿತು.

ಬಿ.ಡಿ.ರಸ್ತೆಯಲ್ಲಿ ಬಾಗಿಲು ತೆರೆದಿದ್ದ ಅಂಗಡಿಗಳ ಎದುರು ಹಾಜರಾದ ನಗರಸಭೆ ಸಿಬ್ಬಂದಿ ಬಂದ್ ಮಾಡುವಂತೆ ತಾಕೀತು ಮಾಡಿದರು. ಇದಕ್ಕೆ ಒಪ್ಪದೇ ಇದ್ದಾಗ ಬಲವಂತವಾಗಿ ಬಾಗಿಲು ಮುಚ್ಚಿಸಿದರು. ವಿರೋಧ ವ್ಯಕ್ತಪಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಬಟ್ಟೆ, ಎಲೆಕ್ಟ್ರಾನಿಕ್ಸ್‌, ಮೊಬೈಲ್‌, ಪಾದರಕ್ಷೆ, ಅಲಂಕಾರಿಕ ಸಮಗ್ರಿಗಳ ಅಂಗಡಿಗಳನ್ನು ಮುಚ್ಚಿಸಿದರು. ಲಕ್ಷ್ಮೀಬಜಾರ್‌, ಮೆದೇಹಳ್ಳಿ ರಸ್ತೆ, ಸಂತೆಹೊಂಡ, ಹೊಳಲ್ಕೆರೆ ಮಾರ್ಗ, ದಾವಣಗೆರೆ ರಸ್ತೆ ಹೀಗೆ ಎಲ್ಲೆಡೆ ಸಂಚರಿಸಿ ಮಳಿಗೆಗಳನ್ನು ಮುಚ್ಚಿಸಲಾಯಿತು.

ADVERTISEMENT

‘ಯಾವುದೇ ಮುನ್ಸೂಚನೆ ನೀಡದೇ ಬಾಗಿಲು ಹಾಕಿಸಿದ್ದು ಅಕ್ಷಮ್ಯ. ಕೋವಿಡ್‌ ಮಾರ್ಗಸೂಚಿ ಅನ್ವಯ ವಹಿವಾಟು ನಡೆಸಿದರೂ ವ್ಯಾಪಾರಕ್ಕೆ ಅಡ್ಡಿಪಡಿಸುವುದು ತಪ್ಪು. ಕೊರೊನಾ ಸೋಂಕಿನ ಕಾರಣಕ್ಕೆ ವರ್ಷದಿಂದ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದೇವೆ. ವಹಿವಾಟು ಚೇತರಿಕೆ ಕಾಣುವಾಗ ಕೋವಿಡ್‌ ಎರಡನೇ ಅಲೆ ಆರಂಭವಾಗಿದೆ. ಸೋಂಕು ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಬದಲು ಲಾಕ್‌ಡೌನ್‌ ಮಾಡುವುದು ಎಷ್ಟು ಸರಿ’ ಎಂದು ವ್ಯಾಪಾರಸ್ಥರು ಪ್ರಶ್ನಿಸಿದರು.

ಅದಾಗಲೇ ಮಾರುಕಟ್ಟೆಗೆ ಬಂದಿದ್ದ ಗ್ರಾಹಕರು ಅತಂತ್ರರಾದರು. ಇನ್ನೇನು ಖರೀದಿ ಪ್ರಕ್ರಿಯೆ ಆರಂಭವಾಗುವುದಕ್ಕೂ ಮೊದಲೇ ಕೈಗೊಂಡ ಕ್ರಮಕ್ಕೆ ಕಕ್ಕಾಬಿಕ್ಕಿಯಾದರು. ಅಂಗಡಿಗಳ ಎದುರೇ ಕುಳಿತು ಬೇಸರ ವ್ಯಕ್ತಪಡಿಸಿದರು. ಮಧ್ಯಾಹ್ನ ಕಳೆದರೂ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದ ಗ್ರಾಹಕರ ಸಂಖ್ಯೆಯಲ್ಲಿ ಕಡಿಮೆ ಆಗಿರಲಿಲ್ಲ.

ಹೋಟೆಲ್‌ಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ದಿನಸಿ ಮಳಿಗೆಗಳು ಬಾಗಿಲು ತೆರೆದಿದ್ದವು. ಹಣ್ಣು, ತರಕಾರಿ ಮಾರಾಟಕ್ಕೆ ಯಾವುದೇ ನಿರ್ಬಂಧ ಇರಲಿಲ್ಲ. ಔಷಧದಂಗಡಿ ಸೇವೆ ಒದಗಿಸಿದವು. ನಿರ್ಬಂಧದ ನಡುವೆಯೂ ವಾಹನ ಷೋರೂಮುಗಳು ಬಾಗಿಲು ತೆರೆದಿದ್ದವು.

ಬದಲಾದ ಮಾರ್ಗಸೂಚಿ: ಡಿಸಿ
ಸರ್ಕಾರ ರೂಪಿಸಿದ ಮಾರ್ಗಸೂಚಿ ಬದಲಾಗಿದೆ. ಅಗತ್ಯ ವಸ್ತುಗಳು ಹಾಗೂ ಸೇವೆಗಳನ್ನು ಹೊರತುಪಡಿಸಿ ಎಲ್ಲ ವಹಿವಾಟಿಗೆ ಮೇ 4ರವರೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ತಿಳಿಸಿದರು.

ಗುರುವಾರ ರಾತ್ರಿ ಪರಿಷ್ಕೃತ ಸೂಚನೆ ಸರ್ಕಾರದಿಂದ ಬಂದಿದೆ. ಹೀಗಾಗಿ, ಎಲ್ಲ ಅಂಡಿಗಳನ್ನು ಮುಚ್ಚಿಸಲಾಗಿದೆ. ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶವಿದೆ. ವ್ಯಾಪಾರಸ್ಥರು, ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.