ADVERTISEMENT

ಚಿತ್ರದುರ್ಗ | ರೇಷ್ಮೆ ಕೃಷಿಯಲ್ಲಿ ಖುಷಿಕಂಡ ಬೆಳೆಗಾರ

ಜಿ.ಬಿ.ನಾಗರಾಜ್
Published 6 ಜುಲೈ 2020, 19:30 IST
Last Updated 6 ಜುಲೈ 2020, 19:30 IST
ಮಹಾಂತೇಶ್‌ ಅವರು ಬೆಳೆದಿರುವ ರೇಷ್ಮೆ ಹುಳ
ಮಹಾಂತೇಶ್‌ ಅವರು ಬೆಳೆದಿರುವ ರೇಷ್ಮೆ ಹುಳ   

ಚಿತ್ರದುರ್ಗ: ‘ಈರುಳ್ಳಿ, ಶೇಂಗಾ ವರ್ಷದ ಬೆಳೆ. ಮಳೆ ಅಥವಾ ಬೆಲೆ ಕೈಕೊಟ್ಟರೆ ವರ್ಷವಿಡೀ ಕೊರಗಬೇಕು. ರೇಷ್ಮೆ ಒಂದೂವರೆ ತಿಂಗಳ ಬೆಳೆ. ಒಮ್ಮೆ ಬೆಲೆ ಕುಸಿತವಾದರೂ ಮತ್ತೊಮ್ಮೆ ಕೈಹಿಡಿಯುತ್ತದೆ. ಎರಡೂವರೆ ವರ್ಷದಿಂದ ಪ್ರತಿ ತಿಂಗಳು ಸಂಬಳದ ರೀತಿಯಲ್ಲಿ ಆದಾಯ ಪಡೆಯುತ್ತಿದ್ದೇನೆ...’

ಇದು ಚಳ್ಳಕೆರೆ ತಾಲ್ಲೂಕಿನ ಎನ್‌.ದೇವರಹಳ್ಳಿಯ ಮಹಾಂತೇಶ್‌ ಅವರ ಖಚಿತ ಮಾತು. ಕೃಷಿಯ ಬಗೆಗೆ ಸಾಮಾನ್ಯವಾಗಿ ರೈತರಲ್ಲಿ ಇರುವ ಕೊರಗು ಅವರಲ್ಲಿ ಕಾಣುವುದಿಲ್ಲ. ಪ್ರತಿ ವರ್ಷ ಹತ್ತು ಬಾರಿ ರೇಷ್ಮೆ ಗೂಡು ಮಾರಾಟ ಮಾಡುವ ಇವರು ರೇಷ್ಮೆ ಸಾಕಾಣಿಕೆಗೆ ಒಗ್ಗಿಕೊಂಡಿದ್ದಾರೆ.

ಮೂಲತಃ ರೇಷ್ಮೆ ಸಾಕಾಣೆದಾರರಾಗಿದ್ದ ಮಹಾಂತೇಶ್‌ ಕುಟುಂಬ ಎರಡು ದಶಕಗಳಿಂದ ರೇಷ್ಮೆಯಿಂದ ವಿಮುಖವಾಗಿತ್ತು. ರೇಷ್ಮೆ ಕೃಷಿಯಲ್ಲಿ ಉಂಟಾಗಿರುವ ಸುಧಾರಣೆ ರೇಷ್ಮೆ ಸಾಕಾಣಿಕೆಗೆ ಮರಳುವಂತೆ ಮಾಡಿವೆ. 57 ಅಡಿ ಉದ್ದ 21 ಅಡಿ ಅಗಲದ ರೇಷ್ಮೆ ಮನೆ ನಿರ್ಮಿಸಿಕೊಂಡು ಹುಳು ಸಾಕಣೆ ಮಾಡುತ್ತಿದ್ದಾರೆ.

ADVERTISEMENT

‘ಈರುಳ್ಳಿ ಬೆಳೆದು ಹಲವು ಬಾರಿ ಕೈಸುಟ್ಟುಕೊಂಡೆ. ಸಾವಿರಾರು ರೂಪಾಯಿ ಖರ್ಚು ಮಾಡಿದರೂ ಬೆಲೆ ಸಿಗದೇ ಸಮಸ್ಯೆ ಅನುಭವಿಸಿದೆ. ವಿಪರೀತ ರಸಗೊಬ್ಬರ, ಕೀಟನಾಶಕ ಬಳಸಿ ಭೂಮಿ ಕೂಡ ಫಲವತ್ತತೆ ಕಳೆದುಕೊಂಡಿತ್ತು. ಜಮೀನು ಕಾಪಾಡಿಕೊಳ್ಳುವ ಉದ್ದೇಶದಿಂದ ರೇಷ್ಮೆ ಕೃಷಿಗೆ ಮರಳಿದೆ’ ಎನ್ನುತ್ತಾರೆ ಮಹಾಂತೇಶ್‌.

25 ಎಕರೆ ಜಮೀನು ಹೊಂದಿರುವ ಮಹಾಂತೇಶ್‌ ಅವರದು ಕಪಿಲೆ ಮನೆ. ಜಮೀನಿನಲ್ಲೇ ವಾಸವಾಗಿರುವ ಕುಟುಂಬ ಸಂಪೂರ್ಣ ಕೃಷಿಯಲ್ಲಿ ತೊಡಗಿಸಿಕೊಂಡಿದೆ. ಐದು ಎಕರೆ ಭೂಮಿಯಲ್ಲಿ ಹಿಪ್ಪುನೇರಳೆ ಬೆಳೆದಿದ್ದು, ಉಳಿದ ಭೂಮಿಯಲ್ಲಿ ಇತರ ಬೆಳೆ ಬೆಳೆಯುತ್ತಿದ್ದಾರೆ. ರೇಷ್ಮೆ ಕೃಷಿಯಿಂದ ಪ್ರತಿ ವರ್ಷ ಅಂದಾಜು ₹ 10 ಲಕ್ಷ ಆದಾಯ ಪಡೆಯುತ್ತಿದ್ದಾರೆ.

‘ಹಿಪ್ಪುನೇರಳೆ ಗಿಡವನ್ನು ನಾಲ್ಕು ಅಡಿ ಅಂತರದಲ್ಲಿ ಬೆಳೆದಿದ್ದೇನೆ. ಬುಡದಲ್ಲಿ ಎರಡೂವರೆಯಷ್ಟು ಕೊಂಬೆ ಉಳಿಸಿ ಸೊಪ್ಪು ಕಟಾವು ಮಾಡುತ್ತೇನೆ. ಪ್ರತಿ 40 ದಿನಕ್ಕೊಮ್ಮೆ ಸೊಪ್ಪು ಕಟಾವಿಗೆ ಬರುತ್ತದೆ. ನಾಲ್ಕು ಪ್ಲಾಟ್‌ಗಳನ್ನು ವಿಂಗಡಿಸಿಕೊಂಡು ನಿಯಮಿತವಾಗಿ ಸೊಪ್ಪು ಬರುವಂತೆ ನೋಡಿಕೊಂಡಿದ್ದೇನೆ. ಬೈವೋಲ್ಟಿನ್‌ ತಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿದೆ’ ಎಂದು ಮಹಾಂತೇಶ್‌ ಅನುಭವ ಹಂಚಿಕೊಂಡರು.

ರೇಷ್ಮೆ ಹುಳುವನ್ನು ಖರೀದಿಸಿ ತರುವ ಮಹಾಂತೇಶ್‌ 20 ದಿನ ಸಾಕಣೆ ಮಾಡುತ್ತಾರೆ. ಗೂಡು ಕಟ್ಟಿದ ಬಳಿಕ ರಾಮನಗರ ಮಾರುಕಟ್ಟೆಗೆ ರವಾನೆ ಮಾಡುತ್ತಾರೆ. ಲಾಕ್‌ಡೌನ್‌ ಕಾರಣಕ್ಕೆ ಬಸ್‌ ಸಂಚಾರ ಸ್ಥಗಿತಗೊಂಡಿದ್ದರಿಂದ ಗೂಡು ಸಾಕಣೆ ತೊಂದರೆ ಉಂಟಾಗಿದೆ. ಖಾಸಗಿ ವಾಹನ ಬಾಡಿಗೆ ಪಡೆದು ಬೆಳೆಗಾರರೇ ಮಾರುಕಟ್ಟೆಗೆ ಕೊಂಡೊಯ್ಯುತ್ತಿದ್ದಾರೆ. ಕೋವಿಡ್‌ ಕಾರಣಕ್ಕೆ ಬೆಲೆ ಕುಸಿತ ಉಂಟಾಗಿರುವುದು ಅವರನ್ನು ಚಿಂತೆಗೀಡು ಮಾಡಿದೆ.

‘ಒಂದು ಕೆ.ಜಿ. ರೇಷ್ಮೆ ಗೂಡಿಗೆ ₹ 350ರವರೆಗೆ ಬೆಲೆ ಸಿಗುತ್ತಿದೆ. ಬೆಲೆ ಕುಸಿತವಾದರೂ ನಷ್ಟ ಉಂಟಾಗುತ್ತಿಲ್ಲ. ಕೋವಿಡ್‌ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಮಹಾಂತೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.